Friday, June 15, 2007

Political Savvy ಅಂದಾಕ್ಷಣ ರಾಜಕೀಯ ಸೇರಬೇಕಂದೇನೂ ಇಲ್ಲ!

ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಜನರ ಮಾತುಕಥೆಯನ್ನು ನೀವು ಈಗಾಗಲೇ ಗಮನಿಸಿಸರಬೇಕು, ನಮ್ಮಲ್ಲಿ ನಡೆಯುವ ಕಣ್ಣ ಭಾಷೆ ಇಂತಹ ದೇಶಗಳಲ್ಲಿ ನಡೆಯುವುದರ ಜೊತೆಗೆ ಅಲ್ಲಿಯ ಜನಗಳ ಕೈ-ಬಾಯಿ ಯಾವಾಗಲೂ ಮುಂದೆ ಎಂದೇ ಹೇಳಬೇಕು. ಬಾಯಿ ಇದ್ದೋನ್ ಎಲ್ಲಿ ಹೋದ್ರು ಬದುಕುತ್ತಾನೆ ಅನ್ನೋದನ್ನು ಇಂತಹ ದೇಶಗಳ ಜನರನ್ನು ನೋಡಿಯೇ ಕಲಿಯಬೇಕು.

ಪೊಲಿಟಿಕಲ್ ಸ್ಯಾವ್ವಿ ಬಗ್ಗೆ ಹೇಳಬೇಕಾದವನು ಮಾತುಕಥೆಯನ್ನು ಕುರಿತು ಹೇಳಲು ಕಾರಣವಿದೆ - ಎಲ್ಲರ ಜೊತೆ ಬೆರೆತು (Networking), ಕೆಲಸಕಾರ್ಯಗಳು ಸುಗಮವಾಗಿ ಸಾಗಿ, ಒಬ್ಬೊರನೊಬ್ಬರು ಗೌರವಿಸಿ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಬೇಕಾದ ರಾಮಬಾಣವೇ ವ್ಯವಸ್ಥಿತವಾದ ಮಾತುಕಥೆ (excellent communication), ಅದರ ಜೊತೆಯಲ್ಲಿ ತುಸು ರಾಜಕೀಯ ಗ್ರಾಹಿತನ (Political Savvy). ನಿಮಗೆ ದಿನನಿತ್ಯವೂ ಗೆಲ್ಲಲು ಬೇಕಾದ ವ್ಯವಸ್ಥಿತವಾದ ಮಾತುಕಥೆ, ಕಾರ್ಯದಕ್ಷತೆ ಹಾಗೂ ನಿಮ್ಮ ರಾಜಕೀಯ ಗ್ರಾಹಿತನ ನಿಮ್ಮನ್ನು ಎಂದಿಗೂ ಗೆಲ್ಲಿಸಬಲ್ಲವು. ನಿಮ್ಮ ನೆರೆಹೊರೆ ನಿಮ್ಮನ್ನು ಗೌರವಿಸುವಂತೆ ಮಾಡುವುದರೆ ಜೊತೆಗೆ ನಿಮ್ಮ ಶಿಫಾರಸ್ಸಿನ ಪರಿಧಿ (sphere of influence) ಹಿಗ್ಗಬಲ್ಲದು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವುಗಳು ನಮ್ಮ ಬಾಸ್‌ಗಳ ಪಾದಸೇವೆ ಮಾಡುವ ಪರಂಪರಾನುಗತವಾದ ಕೊಡುಗೆ (Power difference) ಉತ್ತರ ಅಮೇರಿಕ, ಯುರೋಪ್, ಜಪಾನ್ ಮುಂತಾದ ಮುಂದುವರಿದ ದೇಶಗಳಲ್ಲಿ ಸೇವೆ ಸಲ್ಲಿಸಬಹುದಾದ ನಮಗೆ ಹಲವಾರು ರೀತಿಯಲ್ಲಿ ಮುಳುವಾಗ ಬಲ್ಲದು. ನಮ್ಮ ಸಂಸ್ಕೃತಿಯಲ್ಲಿನ "ರಾಜಕೀಯ" ಎಂಬ ಪದದ ಅದೇ ಅರ್ಥವನ್ನು ನಾವು ಹೋದಲ್ಲೆಲ್ಲ ನೋಡುವುದೇ ಸಾಮಾನ್ಯವಾಗಿ ಹೋಗುತ್ತದೆ. ಮುಂದುವರಿದ ದೇಶಗಳಲ್ಲಿನ ರಾಜಕಾರಣಿಗಳನ್ನು ಕಾನೂನು-ಕಟ್ಟಳೆಗಳನ್ನು ರೂಪಿಸುವವರು (law makers) ಎಂದು ಗುರುತಿಸಲಾದರೆ ನಮ್ಮ ದೇಶದಲ್ಲಿನ ರಾಜಕಾರಣಿಗಳಿಂದ ಅದಕ್ಕೆ ವ್ಯತಿರಿಕ್ತವಾದ ನಡವಳಿಕೆಯನ್ನು ನಿರೀಕ್ಷಿಸುವುದು ಸಹಜವಾಗಿದೆ (normal). ಹೀಗೆ ಚಿಕ್ಕಂದಿನಿಂದಲೂ ರಾಜಕೀಯ-ರಾಜಕಾರಣಗಳಿಂದ ಒಂದಲ್ಲ ಒಂದು ಕಾರಣಕ್ಕೆ ದೂರವಾಗಿರುವ ನಮ್ಮ ಪ್ರವೃತ್ತಿ ನಾವೆಲ್ಲಿಗೆ ಹೋದರೂ ನಮ್ಮ ಬೆನ್ನು ಹತ್ತಿಯೇ ಇರುತ್ತದೆ.

ಆದರೆ ಪ್ರತಿಯೊಂದು ಸಾಮಾನ್ಯ ವೃತ್ತಿಯಲ್ಲಿಯೂ ಸಹ Political Savvyಯಾಗಿರುವುದು ಪ್ರತಿಯೊಬ್ಬರ ಅಗತ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲು ಕೆಲವರಿಗೆ ಬಹಳಷ್ಟು ಕಷ್ಟವಾಗುವುದರಿಂದ ಈ ಕೆಳಗಿನ ಸ್ಪಷ್ಟೀಕರಣವನ್ನು ನೀಡಬಹುದು:

- ನೀವು ಪೊಲಿಟಿಕಲ್ ಸ್ಯಾವಿಯಾಗಿರುವುದೆಂದರೆ ನೀವು ಏನನ್ನು ಬಲ್ಲಿರಿ, ನೀವು ಯಾರನ್ನು ಬಲ್ಲಿರಿ ಹಾಗೂ ನಿಮ್ಮನ್ನು ಯಾರು ಬಲ್ಲರು ಎಂಬುದು. ನಿಮ್ಮ ಸುತ್ತಲಿನ ಜನರನ್ನು ನೀವು ಅರ್ಥ ಮಾಡಿಕೊಳ್ಳುವುದೆಂದರೆ ನೀವು ಅಗತ್ಯಕ್ಕೆ ತಕ್ಕಂತೆ ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳಬಲ್ಲಿರಿ ಹಾಗೂ ನಿಮ್ಮ ವ್ಯಾಪ್ತಿಯಲ್ಲಿ ಮಿಂಚಬಲ್ಲಿರಿ.
- ನೀವು ಪೊಲಿಟಿಕಲ್ ಸ್ಯಾವಿಯಾಗಿರುವುದೆಂದರೆ ನಿಮ್ಮ ಸುತ್ತಲಿನ ಆಫೀಸ್ ಪಾಲಿಟಿಕ್ಸ್ ಅನ್ನು ಕಡೆಗಣಿಸಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಉನ್ನತ ವಿಷಯಗಳತ್ತ ಗಮನ ಕೊಡುವುದೆಂದರ್ಥ, ಅದರಿಂದಾಗಿ ಹೆಚ್ಚು ಸದ್ದು ಮಾಡದೇ ಬಹಳಷ್ಟನ್ನು ಸಾಧಿಸಬಹುದು.

***

ಮ್ಯಾನೇಜ್‌ಮೆಂಟಿನ ಸ್ಥರಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಮ್ಮ ಬಾಸ್‌ನಿಂದ ಹೊರಗಿನ ಪ್ರಪಂಚವನ್ನು ಗಮನಿಸಬೇಕಾಗುತ್ತದೆ. ಅವರವರ ಬಾಸ್‌ಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದರ ಮೂಲಕ ತಮ್ಮತಮ್ಮನ್ನು ಪೊರೆದುಕೊಳ್ಳುವುದು ಜಾಣತನದ ವಿಷಯವಾದರೂ, ಬಾಸ್‌ನ ವರ್ತುಲದಿಂದ (beyond the boss) ಹೊರಗೆ ಇರುವ ಪ್ರಪಂಚವನ್ನೂ ಆಗಾಗ್ಗೆ ಗಮನಿಸಿಕೊಂಡು ತನ್ನ ವೃತ್ತಿ ವರ್ತುಲವನ್ನು ಹಿಗ್ಗಿಸಿಕೊಂಡು ನೋಡಿದವರೆಲ್ಲರಿಗೂ "ಹೀಗೂ ಇದೆಯೇ!" ಎನ್ನುವ ಹಲವಾರು ಆಶ್ಚರ್ಯಗಳಿಂದ ಹಿಡಿದು ಅವರ ಕೆಲಸಗಳೆಲ್ಲವೂ ಸರಾಗವಾಗಿ ಆಗಿ ಹೋಗುವುದು ಮತ್ತೊಂದು ಅನುಕೂಲವೆಂದೇ ಹೇಳಬೇಕು.

ಶಿಫಾರಸ್ಸು (influence) ನಮಗೇನೂ ಹೊಸತಲ್ಲ - ರಾಜಕಾರಣ, ಲಂಚ ಮುಂತಾದವುಗಳ ಜೊತೆಯಲ್ಲಿ ತೆಕ್ಕೆ ಹಾಕಿಕೊಂಡ ಪದವೆಂದು ಎಲ್ಲರೂ ಬಲ್ಲವರೇ - ಆದರೆ, ಅದೇ ಪದವನ್ನು ರಾಜಕೀಯ ಗ್ರಾಹಿತನದ ಜೊತೆಯಲ್ಲಿ ಹೋಲಿಸಿ ಉಳಿಸಿ-ಬೆಳೆಸಿಕೊಂಡರೆ ಅದು ಬಹಳಷ್ಟು ಅನುಕೂಲಗಳನ್ನು ಮಾಡಬಲ್ಲದು.

ರಾಜಕೀಯ ಅಂದರೆ ದೂರ ಹೋಗಿ ಆದರೆ ನಿಮ್ಮ ರಾಜಕೀಯ ಗ್ರಾಹಿತನವೆಂದೂ ಜಾಗೃತವಾಗಿರಲಿ!

Friday, April 20, 2007

You think world is a fair place...

ಬದುಕು ಹೇಗೆ ಬಹಳ ವಿಶೇಷವಾದದ್ದೋ ಹಾಗೇ ಪ್ರಪಂಚವೂ ಕೂಡಾ! ನನಗ್ಗೊತ್ತು ಇಂಥ ಹೇಳಿಕೆಗಳಿಂದ ಯಾವ ಪ್ರಯೋಜನವೂ ಆಗೋದಿಲ್ಲವೆಂದು, ಆದರೆ ಇಂದಿನ ಟಾಪಿಕ್‌ಗೆ ಒಂದು ಪೀಠಿಕೆಯಾಗಿರಲಿ ಆ ವಾಕ್ಯವನ್ನು ಬಳಸಿದೆನಷ್ಟೇ.

ನೀವು ಭಾರತದಲ್ಲಿ ಕೆಲಸ ಮಾಡಿದವರಾಗಿದ್ದರೆ, ಅಲ್ಲಿನ ಅಫೀಸಿನ ವಾತಾವರಣಕ್ಕೂ ಹೊರದೇಶಗಳ ಆಫೀಸಿನ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ - ಭಾರತದ ವಾತಾವರಣವನ್ನು ಹಲವಾರು ರೀತಿಯಲ್ಲಿ ಹೊಮೋಜಿನಸ್ ಎಂದು ಕರೆದರೆ ವಿದೇಶದ ಆಫೀಸಿಗಳು ಇನ್ನು ಕೆಲವು ರೀತಿಯಲ್ಲಿ ಹೊಮೋಜಿನಸ್ ಎಂದು ಕರೆಯಬೇಕಾಗುತ್ತದೆ - ಈ ಕೆಳಗಿನ ಸಂಗತಿಗಳನ್ನು ಗಮನಿಸಿ:
- ಭಾರತದ ಅಫೀಸುಗಳಲ್ಲಿ
ಸ್ಥಳೀಯ ಭಾಷೆಗಳಲ್ಲಿ ಮಾತನಾಡುವುದು, ಡಿಸ್ಕಷನ್ನುಗಳು ನಡೆಯುವುದು ಸಾಮಾನ್ಯವೆನಿಸಬಹುದು
ಭಾರತದ ಆಫೀಸುಗಳಲ್ಲಿ ಲಿಂಗ ಬೇಧ, ಜಾತಿ ಬೇಧಗಳ ತಾರತಮ್ಯ ಎದ್ದು ಕಾಣಬಹುದು
ಮುಂಜಾನೆ ಹತ್ತು ಘಂಟೆಗೆ ಪ್ರತಿಯೊಬ್ಬರೂ ಅಫೀಸಿಗೆ ಬಂದು ರಾತ್ರಿ ಹತ್ತು ಘಂಟೆಯವರೆಗೂ ಇದ್ದಿರುವುದು ಮಾಮೂಲೀ ದೃಶ್ಯವಾಗಬಹುದು
ಬಾಸ್-ಸಬಾರ್ಡಿನೇಟ್ (power difference) ವ್ಯತ್ಯಾಸ ಕಂಡರೂ ಕಾಣದ ಹಾಗಿರಬಹುದು
- ವಿದೇಶದ ಆಫಿಸುಗಳಲ್ಲಿ
ಮಾತುಕಥೆಗಳು ಹೆಚ್ಚು ಇಂಗ್ಲೀಷ್ ಮಾಧ್ಯವನ್ನು ಅವಲಂಭಿಸಿರುವುದು, ಹಾಗೂ ಭಾಷೆಯ ಬಳಕೆಯಲ್ಲಿ, ಆಕ್ಸೆಂಟುಗಳಲ್ಲಿ ವೇರಿಯೇಷನ್ ಕಾಣುವುದು
ಲಿಂಗ ಬೇಧದ ಜೊತೆಗೆ ವರ್ಣಬೇಧ, ಜನಾಂಗೀಯ ಬೇಧಗಳು ಎದ್ದು ಕಾಣುವುದು
ಹೆಚ್ಚು ಜನ ಬೇಗನೇ ಕೆಲಸವನ್ನು ಆರಂಭಿಸಿ (ಬೆಳಿಗ್ಗೆ ಏಳು ಘಂಟೆಯಿಂದ), ಸಂಜೆ ಐದು-ಆರು ಘಂಟೆಗೆಲ್ಲಾ ಹೊರಟು ಹೋಗುವುದು
ಬಾಸ್-ಸಬಾರ್ಡಿನೇಟ್ ವ್ಯತ್ಯಾಸ ಮೇಲ್ನೋಟಕ್ಕೆ ಇಲ್ಲದಿರುವುದು

ಮತ್ತೊಂದು ಉದಾಹರಣೆಯನ್ನು ಕೊಡುವುದಾದರೆ - ಭಾರತದಲ್ಲಿ ಯಾವುದೇ ಒಂದು ಪ್ರಾಡಕ್ಟಿನ ಜಾಹೀರಾತನ್ನು ನೀವು ಟಿವಿಯಲ್ಲಿ ನೋಡಿದರೆ ಅಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀ ಪಾತ್ರ ಆ ಪ್ರಾಡಕ್ಟನ್ನು ಎಂಡಾರ್ಸ್ ಮಾಡುತ್ತಿರುವುದು ಗಮನಕ್ಕೆ ಬರುತ್ತದೆಯೇ ಹೊರತು, ಅಮೇರಿಕದಲ್ಲಿನ ಜಾಹೀರಾತುಗಳಲ್ಲಿ ಬಿಳಿ, ಕಪ್ಪು, ಹಿಸ್ಪ್ಯಾನಿಕ್, ಏಷಿಯನ್ ಜನರು ಪ್ರತ್ಯೇಕವಾಗಿ ಅಥವಾ ವಿಶೇಷವಾಗಿ ಪ್ರತಿಯೊಂದು ಪ್ರಾಡಕ್ಟುಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಸಾಮ್ಯಾನ್ಯ.

ಇನ್ನು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಬರೆಯುವುದಾದರೆ - ಬ್ಯೂರೋಕ್ರಸಿ, ರಾಜಕೀಯ, ರೆಡ್‌ಟೇಪಿಸಮ್...ಮುಂತಾದವುಗಳು ಪ್ರತಿಯೊಂದು ವರ್ಕ್‌ಪ್ಲೇಸ್, ಕಂಪನಿ, ದೇಶ, ಹಾಗೂ ಅಲ್ಲಿನ ಜನರ ಮೇಲೆ ನೇರವಾಗಿ ಅವಲಂಭಿತವಾಗಿರುವವಾದರೂ, ಅಮೇರಿಕ ಅಥವಾ ಯುಕೆಗಳಲ್ಲಿ ಹೆಚ್ಚು ಹೆಚ್ಚು ಪ್ರಾಸೆಸ್ಸುಗಳು ಅಲ್ಲಲ್ಲಿ ಅಡಕವಾಗಿರೋದರಿಂದ, ಜನಮನಗಳಲ್ಲೀಗಾಗಲೇ ನೆಲೆನಿಂತಿರುವುದರಿಂದ ಇಂಥ ದೇಶಗಳಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿರುವ ಎಲ್ಲರಿಗೂ ಹೊಂದಿಕೊಳ್ಳಲು ಸಾಕಷ್ಟು ಕಷ್ಟವಾಗುವುದು ಸಹಜ.

ಇನ್ನು ಸಾಂಸ್ಕೃತಿಕ-ಧಾರ್ಮಿಕ ವಲಯಗಳು ನಮ್ಮ ವೈಯುಕ್ತಿಕ ಹಾಗೂ ವೃತ್ತಿಪರ ಬದುಕಿನ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ. ನಾವೆಲ್ಲ, ಅಂದರೆ ಹೆಚ್ಚಿನವರು ಭಾರತದಲ್ಲಿ ಹಿಂದೂ ಪ್ರಧಾನ ಸಮಾಜದಲ್ಲಿ ಹುಟ್ಟಿ ಬೆಳೆದವರು - ನೀವು ಮರೆಯುತ್ತೀರೆಂದರೂ ಕೆಲವೊಂದು ಧಾರ್ಮಿಕ ಆಚರಣೆಗಳು ಹಬ್ಬ ಹರಿದಿನಗಳು ನಿಮ್ಮನ್ನು ಸುತ್ತಿಕೊಳ್ಳುತ್ತವೆ. ಎಲ್ಲರೂ ಆಚರಿಸುವ ದೀಪಾವಳಿ ಹಬ್ಬವಾಗಲೀ, ಹೊಸ ವರ್ಷದ ಸೂಚಕವಾದ ಯುಗಾದಿಯಾಗಲಿ ಬೇಕಾದಷ್ಟು ಬದಲಾವಣೆಗಳನ್ನು ನಿರೀಕ್ಷಿಸುತ್ತವೆ...ಆದರೆ ವಿದೇಶದಲ್ಲಿ ಕೆಲಸ ಮಾಡುವ ನನ್ನಂತಹವರಿಗೆ ಮೊದಲ ದಿನದಿಂದಲೇ ನಾವು ಇಲ್ಲಿ ಮೈನಾರಿಟಿ ಎನ್ನುವುದು ಚೆನ್ನಾಗಿ ಗೊತ್ತಾಗಿಹೋಗುತ್ತದೆ, ನಮ್ಮ ಆಚರಣೆ-ರೀತಿ-ನೀತಿಗಳೇನೇ ಇದ್ದರೂ ಅವೆಲ್ಲ ಒಂದೇ ನಮ್ಮನಮ್ಮೊಳಗೆ ಉಳಿಯುತ್ತವೆ, ಇಲ್ಲ ಒಂದು ಸಣ್ಣ ಸಮೂಹಕ್ಕೆ ಮಾತ್ರ ಸೀಮಿತವಾಗುತ್ತವೆ. ಅದೇ ರೀತಿ, ಸಾಂಸ್ಕೃತಿಕ ರಂಗದಲ್ಲೂ ಅಲ್ಲಿ-ಇಲ್ಲಿ ಸಾಕಷ್ಟು ವ್ಯತ್ಯಾಸಗಳಿರೋದರಿಂದ ಕೇವಲ ವೃತ್ತಿಸಂಬಂಧಿ ವಿಷಯಗಳಿಗಾಗಿ ಹೊರದೇಶಕ್ಕೆ ಬಂದರೂ ಅಲ್ಲಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಶೇಷತೆಗಳ ಬಗ್ಗೆ ಎಷ್ಟು ತಿಳಿದುಕೊಂಡಿರುತ್ತೀರೋ ಅಷ್ಟು ಒಳ್ಳೆಯದು. ಅಮೇರಿಕ-ಯುಕೆ-ಆಷ್ಟ್ರೇಲಿಯಾ-ಜಪಾನ್-ಐರ್‌ಲೆಂಡ್ ಮುಂತಾದ ದೇಶಗಳಿಗೆ ಭಾರತದಿಂದ ಹೋಗುವವರಿಗೆ ಯಾರಾದರೂ ಒಂದಿಷ್ಟು ತಿಳುವಳಿಕೆ/ತರಬೇತಿಯನ್ನು ಕೊಟ್ಟಿದ್ದರೆ ಎಷ್ಟೋ ಚೆನ್ನಾಗಿತ್ತು!

ವಾರಕ್ಕೆ ನಲವತ್ತು-ಐವತ್ತು ಘಂಟೆಗಳ ವರ್ಕ್ ಲೈಫ್ ನ ಹೊರಗೆ ಬೇಕಾದಷ್ಟು ಬದುಕಿದೆ - ನಮ್ಮಲ್ಲಿನ ವಿದ್ಯಾಭ್ಯಾಸ, ಆಚಾರ-ವಿಚಾರಗಳೆಲ್ಲ ಕೇವಲ ಇಲ್ಲಿ ಕೆಲಸ ಮಾಡುವುದಕ್ಕೆ ನಮ್ಮನ್ನು ತಯಾರಿಸಿದರೆ ಮಾತ್ರ ಸಾಕೆ ಅಥವಾ ಹೊರದೇಶದಲ್ಲಿ ನಾವು ನಮ್ಮನ್ನು ಪ್ರತಿನಿಧಿಸಿಕೊಳ್ಳುತ್ತೇವೆ ಎನ್ನುವ ದೊಡ್ಡ ಜವಾಬ್ದಾರಿಯಿಂದ ಹಿಡಿದು - do's ಮತ್ತು don'ts - ಇವುಗಳನ್ನೆಲ್ಲ ತಾಳೆ ಹಾಕಿನೋಡುವುದು ಅತೀ ಅವಶ್ಯವಾಗುತ್ತದೆ.

***

ಮುಂದಿನವಾರ ವಿದೇಶದಲ್ಲಿನ ವಿದ್ಯಾಭ್ಯಾಸ ಮತ್ತು ಕಾರ್ಯವೈಖರಿಗಳ ಬಗ್ಗೆ ಇನ್ನಷ್ಟು ಬರೆಯುತ್ತೇನೆ.

Saturday, March 10, 2007

ಕೆಲಸ ಸಿಕ್ಕಾಯಿತು ಮುಂದೇನು - ಭಾಗ ಎರಡು

ನಿಮಗೆ ಸಿಕ್ಕ ಹೊಸ ಕೆಲಸ ಪ್ರೊಮೋಷನಲ್ ಆಪರ್ಚುನಿಟಿ ಆಗಿರಬಹುದು, ಅಥವಾ ನೀವು ಹಿಂದೆ ಇದ್ದ ಲೆವೆಲ್‌ನಲ್ಲೇ ಬೇರೆಯ ಕೆಲಸವಿರಬಹುದು, ಅಥವಾ ನಿಮ್ಮ ಹಿಂದಿನ ಕೆಲಸಕ್ಕೂ ಈ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲದಿರಬಹುದು. ಹೊಸ ಕೆಲಸ ಹೇಗೇ ಇರಲಿ, ಒಂದು ಮಾತನ್ನು ಚೆನ್ನಾಗಿ ನೆನಪಿನಲ್ಲಿಡಿ - ನೀವು ಹಿಂದಿನ ಕೆಲಸದಲ್ಲಿ ಬಳಸುತ್ತಿದ್ದ ತಂತ್ರ, ರೀತಿ-ನೀತಿ-ವಿಧಾನಗಳು ಈ ಹೊಸ ಕೆಲಸಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಿಲ್ಲ.

ಹೊಸ ಕೆಲಸ ಬೇಕಾದಷ್ಟು ರೀತಿಯಿಂದ ಹಳೆಯ ಕೆಲಸಕ್ಕೆ ಹೋಲಿಸಿದಲ್ಲಿ ಭಿನ್ನವಾಗಿರುವುದೇ ಸಾಕಷ್ಟು ತೊಂದರೆ ಕೊಡಬಲ್ಲದು, ಆದರೆ ನಿಮ್ಮ ಬದಲಾದ ಪರಿಸರ ನಿಮ್ಮಲ್ಲಿಯೂ ಬದಲಾವಣೆಗಳನ್ನು ಬೇಡುವುದು ಸಹಜ. ಹಿಂದಿನ ಕೆಲಸದಲ್ಲಿ ನೀವು ಈಗಾಗಲೇ ಹಲವಾರು ತಿಂಗಳು/ವರ್ಷಗಳನ್ನು ಸವೆಸಿ ಆಫೀಸಿನ ಮೂಲೆ-ಮೂಲೆಗಳಿಗೂ ನಿಮ್ಮನ್ನು ಪರಿಚಯ ಮಾಡಿಕೊಂಡಿದ್ದಿರಬಹುದು, ಅದಕ್ಕೆ ತಕ್ಕನಾಗಿ ಈ ಹೊಸ ಕೆಲಸದಲ್ಲಿ ಎಲ್ಲವೂ ಹೊಸತೇ. ಹಾಗಿದ್ದ ಮೇಲೆ ಹೊಸ ಕೆಲಸದ ಪರಿಧಿಯನ್ನು ಹತ್ತಿರದಿಂದ ವೀಕ್ಷಿಸಿ ಅದಕ್ಕೆ ತಕ್ಕನಾದ ಬದಲಾವಣೆಗಳನ್ನು ಮಾಡಿಕೊಳ್ಳುವುದು ನಿಮಗೆ ಸಹಜವಾಗಿ ಸಿದ್ಧಿಸಿದ ಕಲೆಯಾಗಿರಲಿ. ಸುಮ್ಮನೇ ಉದಾಹರಣೆಗೆ ಈ ಕೆಳಗಿನ ಸಿಚುವೇಷನ್‌ಗಳನ್ನು ನೋಡಿ:

- ನಿಮ್ಮ ಹಳೆಯ ಆಫೀಸಿನಲ್ಲಿ ಎಲ್ಲರೂ ಮೀಟಿಂಗುಗಳಲ್ಲಿ ನೋಟ್‌ಬುಕ್‌ನಲ್ಲಿ ಧೀರ್ಘವಾಗಿ ಬರೆದುಕೊಂಡಿದ್ದು, ಹೊಸ ಆಫೀಸು/ಕೆಲಸ ಹೆಚ್ಚು-ಹೆಚ್ಚು ಎಲೆಕ್ಟ್ರಾನಿಕ್‌ಮಯವಾಗಿ ಕಂಡುಬರುವುದು
- ನಿಮ್ಮ ಹಳೆಯ ಅಫೀಸಿನಲ್ಲಿ ಮೀಟಿಂಗುಗಳು ಸರಿಯಾದ ಸಮಯಕ್ಕೆ ಆರಂಭವಾಗಿ ಸರಿಯಾದ ಸಮಯಕ್ಕೆ ಅಂತ್ಯವಾಗುತ್ತಿದ್ದು, ಈ ಹೊಸ ಅಫೀಸಿನಲ್ಲಿ ಚರ್ಚೆಗೆ ಗಮನ ಕೊಡುತ್ತಾರೆಯೇ ಹೊರತು ಸಮಯಕ್ಕಲ್ಲ ಎನಿಸುವುದು
- ಹೊಸ ಆಫೀಸಿನಲ್ಲಿ ಕಂಡಕಂಡದ್ದಕ್ಕೆಲ್ಲ ಪವರ್‌ಪಾಯಿಂಟ್ ಸ್ಲೈಡುಗಳನ್ನು ಬಳಸುವುದು
- ಹೊಸ ಆಫೀಸಿನಲ್ಲಿ ಬಾಸು, ಬಾಸಿನ ಬಾಸು, ಬಾಸಿನ-ಬಾಸಿನ-ಬಾಸು ಮುಂತಾದವರೆಲ್ಲ ನಿಮ್ಮನ್ನು ಹುಡುಕಿಕೊಂಡು ಯಾವಾಗ ಬೇಕಂದರೆ ಆಗ ಬಂದು ಮಾಹಿತಿಯನ್ನು ಅರಸುವುದು
- ಹೊಸ ಅಫೀಸಿನಲ್ಲಿ ಎಲ್ಲರೂ ಬೆಳಗ್ಗೆ ಏಳು ಘಂಟೆಗೆಲ್ಲ ಪ್ರತ್ಯಕ್ಷರಾಗಿ ಯಾವುದೋ ಯುದ್ಧಕ್ಕೆ ಸಿದ್ಧತೆಯನ್ನು ನಡೆಸುತ್ತಿರುವಂತೆ ಕಂಡುಬರುವುದು
...

ಹೀಗೇ ಉದಾಹರಣೆಗೆಂದು ಕೊಟ್ಟ ಬದಲಾವಣೆಗಳೇ ನಿಮ್ಮನ್ನು ಎಷ್ಟು ಪೇಚಿಗೆ ಸಿಕ್ಕಿ ಹಾಕಿಸಬಹುದು ಎಂದು ಒಮ್ಮೆ ಯೋಚಿಸಿ. ಯಾವುದೇ ಕಂಪನಿಯಲ್ಲಿ ನೀವು ಕೆಲಸ ಮಾಡಿದರೂ, ಅಥವಾ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಿದರೂ ಅಲ್ಲಿನ ಸಂಸ್ಕೃತಿ (culture) ತುಂಬಾ ದೊಡ್ಡ ರೋಲ್ ಅನ್ನು ವಹಿಸಬಲ್ಲದು, ಆಯಾ ಕಂಪನಿ, ಡಿಪಾರ್ಟ್‌ಮೆಂಟ್‌ಗಳಲ್ಲಿ ದೈನಂದಿನ ವ್ಯವಹಾರ ಹೇಗೆ ನಡೆಯುತ್ತದೆ, ನಡೆಯಬಲ್ಲದು ಎನ್ನುವುದು ಹೆಚ್ಚೂ ಕಡಿಮೆ ಶೇಕಡಾ ಐವತ್ತಕ್ಕಿಂತ ಹೆಚ್ಚು ಅಲ್ಲಿನ ವಿಧಿ ವಿಧಾನಗಳ ಮೇಲೆ ಪರಿಣಾಮವನ್ನು ಬೀರಬಲ್ಲದು. ಹಾಗಿದ್ದಾಗ ನಿಮ್ಮ ಹಳೆಯ ಕಂಪನಿಯ ಪ್ರಾಸೆಸ್ಸುಗಳು ಇಲ್ಲಿ ಔಟ್‌ಡೇಟೆಡ್ ಆಗದಿದ್ದರೂ ನೀವು ಅವೇ ಪ್ರಾಸೆಸ್ಸುಗಳನ್ನು ಬಳಸಿಕೊಂಡು ಮುಂದುವರೆದಿದ್ದೇ ಆದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳಿಗೆ ಒಂದೇ ಸೈಂಟಿಸ್ಟ್ ಆಗಿಯೋ ಇಲ್ಲಾ ಮಹಾಮೂರ್ಖನಾಗಿಯೋ ಕಂಡುಬರುವುದರಲ್ಲಿ ಯಾವ ಸಂಶಯವೂ ಇಲ್ಲ. ನೀವೊಬ್ಬ ಎಕ್ಸಿಕ್ಯೂಟಿವ್ ಆಗಿ ಸೇರಿಕೊಳ್ಳದೇ ಕೆಳದರ್ಜೆಯ ನೌಕರನಾಗಿ ಸೇರಿಕೊಂಡಲ್ಲಿ ನಿಮ್ಮಿಂದ ಇಮಿಡಿಯೆಟ್ ಆಗಿ ನಿಮ್ಮ ಡಿಪಾರ್ಟ್‌ಮೆಂಟ್ ಅಥವಾ ಕಂಪನಿ ಉದ್ದಾರವಾಗುವ ಸಾಧ್ಯತೆಗಳು ಕಡಿಮೆ. ನಿಮ್ಮ ಇತಿ-ಮಿತಿಯನ್ನು ಚೆನ್ನಾಗಿ ಅರಿತುಕೊಂಡು ಸಾಧ್ಯವಾದಷ್ಟು ಒಳ್ಳೆಯದನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮನ್ನು ನೀವು ಮುಂಬರುವ ಬದಲಾವಣೆಗಳಿಗೆ ತೆರೆದುಕೊಂಡರೆ ಆಯಿತು, ಅಷ್ಟೇ! ಬದಲಾವಣೆಗಳನ್ನು ಎದುರಿಸುವಲ್ಲಿ ನಿಮಗೆ ಯಾರೂ ಯಾವ ಚಾಯ್ಸ್ ಅನ್ನು ಕೊಟ್ಟಿಲ್ಲ/ಕೊಡಲಿಲ್ಲವಾದ್ದರಿಂದ ಅವನ್ನು ಬೈದು, ವಿರೋಧಿಸಿ ಏನು ಪ್ರಯೋಜನ? ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತೆಯ್ಯಾ ಎನ್ನುವಂತೆ ಹೊಸಕೆಲಸವನ್ನು ಸೇರಿಕೊಂಡು ಬದಲಾವಣೆಗಳಿಗೆ ಬಲಿಪಶುವಾಗದಿದ್ದರೆ ಹೇಗೆ?

ಹಾಗಂತ, you don't have to completely surrender yourself. ಬದಲಾವಣೆಗಳಿಗೆ ಸ್ಪಂದಿಸುವುದು ಎಂದರೆ ಕೋಲೇ ಬಸವನ ಹಾಗೆ ಗೋಣು ಆಡಿಸುವುದು ಎಂದರ್ಥವಲ್ಲ. ನಿಮ್ಮಿಂದ ಮಹದುಪಕಾರವಾಗಬಹುದು ಎನ್ನುವಂತಿದ್ದರೆ, why not, ನಿಮ್ಮ ಐಡಿಯಾಗಳನ್ನು ಪಿಚ್ ಮಾಡಿ, ಅದರಿಂದ ಏನೇನು ಆಗಬಲ್ಲದು ಎಂಬುದನ್ನು ಗಮನಿಸಿ. 'ಇವತ್ತು ನಿನ್ನೆ ಸೇರಿಕೊಂಡ ಯಾವನೋ ಒಬ್ಬ ದೊಡ್ಡ ಕೋತ್ವಾಲನಂಗೆ ಆಡ್ತಾನೆ!' ಎಂದು ಸಹೋದ್ಯೋಗಿಗಳು ಮಾತನಾಡುವುದೇನಾದರೂ ನಿಮ್ಮ ಕಿವಿಗೆ ಬಿದ್ದರೆ ಅದನ್ನು ನಿಮ್ಮ ಆತ್ಮವಿಶ್ವಾಸಕ್ಕೆ ಕೊಡಲಿ ಪೆಟ್ಟು ಎಂದು ಮಾತ್ರ ಅಂದುಕೊಳ್ಳಬೇಡಿ, ಸೋತವನು ಮತ್ತೆ-ಮತ್ತೆ ಪ್ರಯೋತ್ನಿಸೋ ಹಾಗೆ ನಿಮ್ಮ ಪ್ರಯತ್ನವನ್ನು ಮಾತ್ರ ಬಿಡಬೇಡಿ.

ಇಲ್ಲಿ ಹೊಸ ಕೆಲಸದ ಬಗ್ಗೆ ಮತ್ತೊಂದು ವಿಷಯವನ್ನು ಹೇಳಲೇ ಬೇಕು - ನಿಮ್ಮ ಹಳೆಯ ಕಂಪನಿಗೆ/ಕೆಲಸಕ್ಕೆ ಹೋಲಿಸಿದರೆ ಹೊಸ ಕಂಪನಿ/ಕೆಲಸ ತಮ್ಮ ಬಿಸಿನೆಸ್ಸು ಪ್ರಾಸೆಸ್ಸುಗಳಲ್ಲಿ, ವ್ಯವಹಾರದ ವಿಧಿವಿಧಾನಗಳಲ್ಲಿ ಹಿಂದೆ ಇದ್ದಿತೆಂದಾದರೆ ಅದನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಿ. ನಿಮ್ಮ ಹಳೆಯ ಕಂಪನಿಯ ಸ್ಟೇಟಸ್ ರಿಪೋರ್ಟ್ ಫಾರ್ಮ್ ಅನ್ನೋ ಮತ್ತೊಂದನ್ನೋ ನೀವು ಯಥಾವತ್ತಾಗಿ ಬಳಸಿಕೊಳ್ಳದೇ ಅದರಲ್ಲಿ ಹೊಸಕಂಪನಿಗೆ ಹೊಂದುವಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿ. ನೀವೊಬ್ಬ ಚೇಂಜ್ ಏಜೆಂಟ್ ಆಗಿ ಕಂಡು ಬಂದು ಎಲ್ಲರನ್ನೂ ಮುನ್ನೆಡೆಸುವ ಮುಂದಾಳಾಗಿ, ಅದರ ಬದಲಿಗೆ ಡೈಪರ್ ಮ್ಯಾನುಫ್ಯಾಕ್ಚರ್ ಮಾಡುವ ಕಂಪನಿಯನ್ನು ಹೆರಿಗೆ ಆಸ್ಪತ್ರೆಯನ್ನಾಗಿ ಬದಲಿಸುವ ಕ್ರಾಂತಿಪುರುಷರಾಗಬೇಡಿ!

ಹೀಗೆ ಹೊಸ ಕೆಲಸದ ಬಗ್ಗೆ ಬರೆದರೆ ಒಂದು ದೊಡ್ಡ ಪುಸ್ತಕವನ್ನೇ ಬರೆಯಬಹುದು, ಪ್ರತಿಯೊಬ್ಬರೂ ವಿಭಿನ್ನರಾಗಿರುವ ಹಾಗೆ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಇತಿ-ಮಿತಿ, ಫಾರ್ಮಾಲಿಟಿಗಳಿವೆ. ಅನ್ನ ಹಾಕುವ ಕೈ ಎಂದುಕೊಂಡು ಕೆಲಸವನ್ನು ಗೌರವಿಸಿ ಅದಕ್ಕೆ ತಕ್ಕ ಪರಿಶ್ರಮವನ್ನು ಮಾಡಿ ಮುಂದೆ ಹೋಗುವ ಆಶಾಭಾವನೆಯನ್ನು ಇಟ್ಟುಕೊಂಡವರನ್ನು ಯಾವ ದೇವರೂ ಈವರೆಗೆ ಕೈಬಿಟ್ಟಿದ್ದನ್ನು ನಾನು ಕಾಣೆ. ನಿಮಗೆ ಇಷ್ಟವಿರಲಿ ಇಲ್ಲದಿರಲಿ ಸಿಕ್ಕ ಕೆಲಸವನ್ನು ನ್ಯಾಯವಾಗಿ ಮಾಡಿ, ಬದಲಾವಣೆ ಬೇಕು ಎನ್ನಿಸಿದಲ್ಲಿ ಅದನ್ನು ಧೈರ್ಯದಿಂದ ಎದುರಿಸಿ, ಹೇಡಿಯಾಗಿ ಓಡದಿದ್ದರಾಯಿತಷ್ಟೇ.

ಮುಂದಿನ ವಾರಗಳಲ್ಲಿ ಕಂಪನಿಯಲ್ಲಿ ಕೆಲಸದ ವಾತಾವರಣ, ಅಲ್ಲಿನ ರಾಜಕೀಯ, ಸಾಂಸ್ಕೃತಿಕ ಸ್ಥಿತಿಗತಿಗಳು, ವಿದೇಶ ಪ್ರಯಾಣ, ವೈಯುಕ್ತಿಕ ಹಣಕಾಸು, ಹೆಚ್ಚಿನ ವಿದ್ಯಾಭ್ಯಾಸ ಮುಂತಾದವುಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ, ಕಾದು ನೋಡಿ!

Saturday, February 10, 2007

ಕೆಲಸ ಸಿಕ್ಕಾಯಿತು ಮುಂದೇನು - ಭಾಗ ಒಂದು

ಕೆಲಸ ಸಿಕ್ಕಿದ ಮೇಲೆ ಮುಂದೇನು ಮಾಡೋದು ಎಂದಿರೇ? ಒಂದಿಷ್ಟು ಮಜಾ ಉಡಾಯಿಸಿ, ಇಷ್ಟೊಂದು ಕಷ್ಟಪಟ್ಟಿದ್ದಕ್ಕೂ ಸಾರ್ಥಕವಾಯಿತು, ನಿಮ್ಮ ಮನಮೆಚ್ಚಿನ ಕೆಲಸ ಸಿಗುವುದು ಎಂದರೆ ಸುಮ್ಮನೆ ಏನಲ್ಲ!

Wait, ಪಾರ್ಟಿ ಎಂದು ತಿರುಗುವುದಕ್ಕೆ ಮುನ್ನ ಮಾಡಬೇಕಾದ್ದು ಬಹಳಷ್ಟಿದೆ. ನೀವು ಸಂದರ್ಶನದಲ್ಲಿ 'ಹೀಗೆ ಮಾಡಬಲ್ಲೆ, ಹಾಗೆ ಮಾಡಬಲ್ಲೆ' ಎಂದು ಕೊಚ್ಚಿಕೊಂಡದ್ದನ್ನೆಲ್ಲ 'ಮಾಡಿ ತೋರಿಸು ನೋಡೋಣ' ಎಂದು ಯಾರೂ ಒಂದೇ ಪಟ್ಟಿನಲ್ಲಿ ಹಿಡಿದು ಕೇಳುವುದಿಲ್ಲವಾದರೂ, ಪ್ರತಿಯೊಂದು ಹೊಸ ಕೆಲಸದಲ್ಲೂ ಮಾಡಬೇಕಾದದ್ದು ಬಹಳಷ್ಟಿರುತ್ತೆ.

ಮೊಟ್ಟ ಮೊದಲನೆಯದಾಗಿ ಬೇಸರದಿಂದ ಆರಂಭಿಸೋಣ: ನೀವು ಹೊಸದಾಗಿ ಕೆಲಸವನ್ನು ಆರಂಭಿಸಿದ್ದರೆ, ಅಥವಾ ಒಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಬದಲಾಯಿಸಿಕೊಂಡಿದ್ದರೆ ಈ ಬದಲಾವಣೆ ಬಹಳ ತಲೆನೋವನ್ನು, ಬೇಸರವನ್ನೂ ತರಬಲ್ಲದು. ಅನೇಕ ಸರ್ವೇಗಳ ಪ್ರಕಾರ ಹೊಸದಾಗಿ ಆರಂಭಿಸಿದ ಕೆಲಸ ಅತ್ಯಂತ ಹೆಚ್ಚು ಸ್ಟ್ರೆಸ್ (ಮಾನಸಿಕ ಒತ್ತಡ) ಹುಟ್ಟು ಹಾಕುವ ಬದಲಾವಣೆಗಳಲ್ಲಿ ಒಂದು (ಆತ್ಮೀಯರ ಅಗಲಿಕೆ, ವಿವಾಹ/ವಿಚ್ಛೇದನ, ಒಂದು ಕಡೆಯಿಂದ ಮತ್ತೊಂದು ಕಡೆಗೆ Move ಮಾಡುವುದು, ಮುಂತಾದವು ಅಗ್ರಸ್ಥಾನದಲ್ಲಿ ನಿಲ್ಲುತ್ತವೆ). ಅಲ್ಲದೇ ಹಳೆಯ ಜೀವನ ಶೈಲಿಗೆ ಒಗ್ಗಿ ಹೋದ ನಮಗೆ ಹೊಸ ಕೆಲಸ ತರಬಹುದಾದ ಹಲವಾರು ಬದಲಾವಣೆಗಳು, ಇದ್ದಕ್ಕಿದ್ದಂತೆ ಎಲ್ಲವೂ ಗೊತ್ತಿಲ್ಲದಿರುವುದು, ಏನು ಮಾಡಬೇಕೆಂದು ತೋಚದಿರುವುದು ಹಾಗೂ ಹೊಸ ಸಹೋದ್ಯೋಗಿಗಳ ಪರಿಚಯವಿಲ್ಲದಿರುವುದು ಬಹಳಷ್ಟು ಬೇಸರವನ್ನೂ ತರಿಸಬಲ್ಲದು. ಹೀಗೆ ಹುಟ್ಟಬಲ್ಲ ಸ್ಟ್ರೆಸ್ ಹಾಗೂ ಬೇಸರವನ್ನು ಹತೋಟಿಯಲ್ಲಿಡುವುದು ಬಹಳ ಮುಖ್ಯ. ಈ ಬೇಸರ ಅಥವಾ ಸ್ಟ್ರೆಸ್ ಅನ್ನು ಹೋಗಲಾಡಿಸಲು ನೀವು ನಿಮ್ಮನ್ನು ಕ್ರಿಯಾತ್ಮಕವಾಗಿ ಹೊಸ ಕೆಲಸದಲ್ಲಿ ತೊಡಗಿಸಿಕೊಂಡು ಆದಷ್ಟು ಬೇಗ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು ಬಿಟ್ಟರೆ ಬೇರೆ ಯಾವ ದಾರಿಯೂ ಇಲ್ಲ. ಎಷ್ಟು ಸಾಧ್ಯವೋ ಅಷ್ಟು ಹೊಸ ಕೆಲಸದ ಮೇಲೆ ಮನಸ್ಸನ್ನು ಇಟ್ಟು, ಪ್ರತಿಯೊಂದನ್ನು ಕೂಲಕಂಷವಾಗಿ ಗಮನಿಸತೊಡಗಿ, ಮೀಟಿಂಗುಗಳಲ್ಲಿ ಸೂಚ್ಯವಾಗಿ ಪ್ರಶ್ನೆಗಳನ್ನು ಕೇಳಿ ನಿಮ್ಮನ್ನು ತೊಡಗಿಸಿಕೊಳ್ಳಿ (ಆಕಳಿಸಿಕೊಂಡಿರುವುದು ಸಲ್ಲದು), ನೀವು ಹೊಸ ಕೆಲಸಗಾರರಾದ್ದರಿಂದ No question is stupid question, ಆದರೆ ನಿಮ್ಮ ಪ್ರಶ್ನೆಗಳಿಗೂ ಒಂದು ಮಿತಿ ಎನ್ನುವುದಿರಲಿ.

ಈ ಹೊಸ ಕೆಲಸಗಾರ ಎನ್ನುವುದು ಒಂದು ರೀತಿ ಹೊಸ ಕಾರಿನಂತೆ - ಖರೀದಿಸಿದ ಮೊದಲ ದಿನದ ಮಟ್ಟಿಗೆ ಮಾತ್ರ ಹೊಸ ಕಾರು, ಎರಡನೇ ದಿನದಿಂದ ಅದು used car. ಹಾಗೇ ನಿಮ್ಮ New Employee ಚಾರ್ಮ್ ಏನಿದ್ದರೂ ಮೊದಲ ದಿನ ಬಹಳಷ್ಟು ಪ್ರಖರವಾಗಿರುತ್ತದೆ, ಎರಡನೇ ದಿನದಿಂದ ಅದು ಕುಂದುತ್ತಾ ಬರುತ್ತದೆ. ಹೀಗೆ ನೀವು ಮೊದಲ ದಿನ, ವಾರದಲ್ಲಿ ಹೊಸ ಕೆಲಸಗಾರನೆನ್ನುವ ಲಾಭವನ್ನು ಪಡೆದು ಆದಷ್ಟು ಪ್ರೊಡಕ್ಟಿವ್ ಆಗಿರಬೇಕಾಗುತ್ತದೆ. ಆಫೀಸಿಗೆ ಒಂದೆರಡು ಘಂಟೆ ಮೊದಲೇ ಹೋಗಿ, ಹಾಗೂ ಆಫೀಸಿನಿಂದ ನಿಧಾನವಾಗಿ ಬಿಡಿ, ಯಾರ ಗಂಟೇನೂ ಹೋಗೋದಿಲ್ಲ. ಆಲ್ಲದೇ ಇಂದಿನ ದಿನಗಳಲ್ಲಿ ವೇಗಕ್ಕೆ ಹೆಚ್ಚು ಮಹತ್ವವಿರುವಾಗ, ಪ್ರತಿಯೊಂದು ನಿಮಿಷ, ಘಂಟೆಗಳಿಗೂ ಬೆಲೆ ಇರುವಾಗ ನೀವು ಎಷ್ಟು ಬೇಗನೆ ನಿಮ್ಮನ್ನು ತೊಡಗಿಸಿಕೊಂಡು ನಿಮ್ಮ ಬಾಸ್‌ಗೆ ಉಪಕಾರ ಮಾಡುತ್ತೀರೋ ಅಷ್ಟು ಒಳ್ಳೆಯದು.

Take charge, don't be afraid - ನಿಮ್ಮ ಅಗತ್ಯ ಈ ಪ್ರಾಜೆಕ್ಟಿಗೆ ಅಥವಾ ಈ ಕೆಲಸಕ್ಕೆ ಇದೆಯೆಂತಲೇ ನಿಮ್ಮನ್ನು ತೆಗೆದುಕೊಂಡಿದ್ದು ಎನ್ನುವುದನ್ನು ಮರೆತುಬಿಟ್ಟೀರಿ. ಹೊಸ ಕೆಲಸದಲ್ಲಿ ನಿಮ್ಮ ನಿಲುವನ್ನು ಕಂಡುಕೊಳ್ಳಿ, ಎಲ್ಲಿ ನಿಮ್ಮ ಅಗತ್ಯವಿದೆ ಎಂದು ನಿಮ್ಮ ಬಾಸ್ ಅನ್ನು ಸೂಚ್ಯವಾಗಿ ಕೇಳಿ ಅಥವಾ ಅದನ್ನು ಅರ್ಥಮಾಡಿಕೊಳ್ಳಿ, ಎಷ್ಟು ಬೇಗ ನಿಮಗೆ ನಿಮ್ಮ ನಿಜವಾದ job description ತಿಳಿಯುತ್ತದೆಯೋ ಅಷ್ಟು ಒಳ್ಳೆಯದು. ನೀವು ಒಬ್ಬ ಪ್ರೊಗ್ರಾಮ್ಮರ್ ಆಗಿ ಕೆಲಸಕ್ಕೆ ಸೇರಿರಬಹುದು, ಅಥವಾ ಒಬ್ಬ ಎಕ್ಸೆಕ್ಯುಟಿವ್ ಆಗಿ ಸೇರಿಕೊಂಡಿರಬಹುದು, ಸಾಧ್ಯವಾದಷ್ಟು ಬೇಗ ನಿಮ್ಮ ಜವಾಬ್ದಾರಿಯನ್ನು ಅರಿತು ವಿಷಯಗಳನ್ನು ನಿಮ್ಮ ಕಂಟ್ರೋಲಿಗೆ ತೆಗೆದುಕೊಂಡಷ್ಟು ಒಳ್ಳೆಯದು. ನಿಮ್ಮ ಈ ಪ್ರಯತ್ನ ಇನ್ನೊಬ್ಬರ ಕಾಲಿನ ಮೇಲೆ ಚಪ್ಪಡಿಯನ್ನು ಹಾಕುವಷ್ಟು ಕ್ರೂರವಾಗಿರದೇ ಎಲ್ಲರ ಜೊತೆ ಕೂಡಿ ಬಾಳುವಷ್ಟು ನಾಜೂಕಾಗಿದ್ದರಾಯಿತು, ಅಷ್ಟೇ!

Go into reading mode - ಹೊಸ ಕೆಲಸದ ಬಗ್ಗೆ ನಿಮಗೇನು ಗೊತ್ತು? ಎನ್ನುವ ಪ್ರಶ್ನೆ ನಿಮ್ಮನ್ನು ಎಲ್ಲಿಯವರೆಗೆ ಕೊರೆಯುತ್ತಿರುತ್ತದೆಯೋ ಅಲ್ಲಿಯವರೆಗೆ ಓದಿ ಬರೆಯುವುದನ್ನು ನಿಲ್ಲಿಸಬೇಡಿ. ನಿಮ್ಮ ಹೊಸ ಸಹೋದ್ಯೋಗಿಗಳ ಹೆಸರನ್ನು ತಿರುತಿರುಗಿ ಹೇಳಿ, ಬರೆದು ಮನನ ಮಾಡಿಕೊಂಡಷ್ಟೇ ಮುಖ್ಯವಾಗಿ ಹೊಸ ಕೆಲಸ, ಅದರ ವಿವರಗಳು, acronym, abbreviation ಗಳು, system flowchart ಇತ್ಯಾದಿಗ ವಿವರಗಳನ್ನು ಪ್ರಿಂಟ್ ಮಾಡಿಕೊಂಡು ಒಂದು ಫೈಲಿನಲ್ಲಿ ಹಾಕಿಕೊಂಡು ಸಮಯ ಸಿಕ್ಕಾಗ ತಿರುತಿರುಗಿಸಿ ನೋಡಿ. ಮೀಟಿಂಗ್‌ಗಳಲ್ಲಿ ನೋಟ್ಸ್ ಬರೆದುಕೊಳ್ಳಲು ಸಂಕೋಚಪಟ್ಟುಕೊಳ್ಳಬೇಡಿ. ಹಾಗೆ ಬರೆದ ನೋಟ್ಸುಗಳನ್ನು ಆರ್ಗನೈಜ್ ಮಾಡಿಟ್ಟುಕೊಂಡು ಅದಕ್ಕೆ ತಕ್ಕನಾಗಿ ಫಾಲ್ಲೋಅಪ್ ಮಾಡುವುದು ಒಳ್ಳೆಯದು. ಪ್ರತಿಯೊಂದು ಸಂದರ್ಭದಲ್ಲಿ, ಡಿಸಿಷನ್ ಮೇಕಿಂಗ್ ಸಿಚುವೇಷನ್‌ಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ಫಾಸಿಟಿವ್ ತೊಡಗಿಸಿಕೊಳ್ಳಿ, ಅದರ ಪ್ರತಿಫಲವನ್ನು ನೋಡಿ!

ಹೊಸ ಕೆಲಸ ಸಿಕ್ಕಮೇಲೆ ಬರೀ ಆಫೀಸ್ ಒಂದೇ ಅಲ್ಲ, ಸಾಮಾಜಿಕವಾಗಿಯೂ ಬಹಳಷ್ಟು ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ದಿನನಿತ್ಯದ ರೂಟ್/ಟ್ರಾಫಿಕ್ ಬದಲಾವಣೆಯಿಂದ ಹಿಡಿದು, ನಿಮ್ಮ ಮನೆ, ಊರು ಬದಲಾವಣೆಗಳಿಂದ ಹಿಡಿದು, ಹೊಸ ಕೆಫೆಟೇರಿಯಾದಂತಹ ಸಣ್ಣಪುಟ್ಟ ಬದಲಾವಣೆಗಳು ಸಾಕಷ್ಟು ತೊಂದರೆಕೊಡತೊಡಗುತ್ತವೆ, ಈ ನಿಟ್ಟಿನಲ್ಲಿ ದೃಢ ಮನಸ್ಸು ಹಾಗೂ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳಬಲ್ಲ ಮನೋಭಾವ ಖಂಡಿತ ಅಗತ್ಯ.

ನಿಮ್ಮ ಹಳೇ ಕೆಲಸದ ರೀತಿ-ನೀತಿಗಳು, ಅಲ್ಲಿ ಚಲಾವಣೆಯಲ್ಲಿದ್ದ smart move ಗಳು ಈ ಹೊಸ ಕೆಲಸದಲ್ಲಿ ಏಕೆ ನಡೆಯಲಾರವು ಎಂಬುದನ್ನು ಮುಂದಿನವಾರ ಬರೆಯುತ್ತೇನೆ.

ಮುಂದಿನ ಶನಿವಾರ:
13) What you do once you get the job! Part 2

(ಅಕ್ಟೋಬರ್‌ ೨೦೦೬ ರಿಂದ ಫೆಬ್ರುವರಿ ೨೦೦೭ ರವರೆಗೆ ಧೀರ್ಘ ಬ್ರೇಕನ್ನು ತೆಗೆದುಕೊಳ್ಳಲು ಅನುಮತಿಕೊಟ್ಟ ನಿಮಗೆಲ್ಲ ನನ್ನ ನಮನಗಳು, ತಡವಾಗಿದ್ದಕ್ಕೆ ಕ್ಷಮಿಸಿ.)

Sunday, October 01, 2006

ರಿಕ್ರ್ಯೂಟರ್‌ಗಳಿಗೆ ಸುಳ್ಳನ್ನು ಹೇಳಬೇಕೆ?

ಈ ಪ್ರಶ್ನೆಗೆ ನನಗೆ ನಿಜವಾಗಿಯೂ ಉತ್ತರ ಗೊತ್ತಿಲ್ಲ, ಹಾಗೂ ನಾನು ಸುಳ್ಳನ್ನು ಹೇಳಿ ಎಂದು ನಿಮ್ಮನ್ನು ಪುಸಲಾಯಿಸುತ್ತಿಲ್ಲ ಹಾಗೂ ಪ್ರಚೋದಿಸುತ್ತಿಲ್ಲ!

ಆದರೆ, ಕೆಲವು ನಿಜ ಜೀವನದ ಅನುಭವಗಳನ್ನು ಗಣನೆಗೆ ತೆಗೆದುಕೊಂಡ ಮೇಲೆ ಬೇಕಾದಷ್ಟು ಜನ ಸುಳ್ಳನ್ನು ಹೇಳಿ ಸಾಧಿಸಿಕೊಂಡಿದ್ದನ್ನು ನೋಡಿ ಈ ಲೇಖನವನ್ನು ಬರೆಯಬೇಕಾಯಿತು. ನೀವು ನಿಮ್ಮ ರೆಸ್ಯೂಮೆ ಮೇಲೆ ಸುಳ್ಳನ್ನು ಹೇಳದಿದ್ದರೂ ನಿಮ್ಮ ಎಂಪ್ಲಾಯರ್ ಸುಳ್ಳನ್ನು ಹೇಳಿರಬಹುದು. ಈ ಕೆಳಗಿನ ನಿದರ್ಶನವನ್ನು ನೋಡಿ:

ನಾವು ೧೯೯೫ - ೯೬ ರ ಸಮಯದಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಗಳು ಅಗ್ರೆಸ್ಸಿವ್ ಆಗಿ ಅಲ್ಲಿಂದ ಇಲ್ಲಿಗೆ (ಅಮೇರಿಕಕ್ಕೆ) ತಮ್ಮ ತಮ್ಮ ಅಭ್ಯರ್ಥಿಗಳನ್ನು ಕಳಿಸಿ 'ಬಾಡಿಶಾಪ್ಪಿಂಗ್' ಮಾಡಿ ಅದರಲ್ಲಿ ಮಿಲಿಯನ್ ಗಟ್ಟಲೆ ಕಾಸು ಮಾಡಿಕೊಳ್ಳುತ್ತಿದ್ದವು. ಆಗ ಅಲ್ಲಿ ನಮಗೆ ಕೆಲಸ ಮಾಡಲು ಇದ್ದ ಪ್ರಾಜೆಕ್ಟ್‌ಗಳು ಕೆಲವೊಂದು ನಿಜವಾಗಿಯೂ ಆಫ್ ಶೋರ್ ಸಂಬಂಧೀ ಕೆಲಸಗಳಾದರೆ ಇನ್ನುಳಿದವು ಅಲ್ಲೇ ಲೋಕಲ್ ಆಗಿ ಸೃಷ್ಟಿಸಿದ ಮಾಡ್ಯೂಲ್‌ಗಳು, ಅವುಗಳಿಗೆ ಲೋಕಲ್/ಫಾರಿನ್ ಕ್ಲೈಂಟುಗಳನ್ನು ಗಮನದಲ್ಲಿಟ್ಟುಕೊಂಡು ವಿಸ್ತೃತ ರೂಪವನ್ನು ಕೊಡಲಾಗುತ್ತಿತ್ತು. ನಾವು ಆಗಷ್ಟೇ ಗ್ರ್ಯಾಜುಯೇಷನ್ ಮುಗಿಸಿ ಬಂದಿದ್ದೆವು, ನಮಗೆ ಕಂಪ್ಯೂಟರ್ ಸಿಷ್ಟಂನಲ್ಲಿ ತರಬೇತಿ ಇತ್ತು, ಆದರೆ ಯಾವುದೇ "ನಿಜ"ವಾದ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಿ ಅನುಭವವಿರಲಿಲ್ಲ.

ನಮ್ಮ ಮೂಲ ರೆಸ್ಯೂಮೆಯನ್ನು ಎಷ್ಟರ ಮಟ್ಟಿಗೆ ತಿರುಚಲಾಗುತ್ತಿತ್ತೆಂದರೆ ನಮ್ಮನ್ನು ಅಮೇರಿಕದ ಕ್ಲೈಂಟುಗಳಿಗೆ ಬಹಳ ಉನ್ನತವಾದ ತರಬೇತಿ ಹಾಗು ಅನುಭವ ಉಳ್ಳವರು ಎಂಬ ಹೆಸರಿನಲ್ಲಿ ಮಾರ್ಕೆಟ್ ಮಾಡಲಾಗುತ್ತಿತ್ತು, ಅದಕ್ಕೆ ನಮ್ಮನ್ನು ತಕ್ಕ ಮಟ್ಟಿಗೆ 'ಸೀನಿಯರ್ ಕನ್ಸಲ್‌ಟೆಂಟ್' ಅಥವಾ 'ಸೀನಿಯರ್ ಅನಲಿಷ್ಟ್' ಗಳಾಗಿ ಬಿಂಬಿಸುತ್ತಿದ್ದರು. ನಾವು ಇಲ್ಲಿಗೆ ಬಂದ ಮೊದಮೊದಲು ಬಹಳು ಚಾಲೆಂಜ್‌ಗಳನ್ನು ಎದುರಿಸಬೇಕಾಗಿ ಬಂದಿತ್ತು. ಪರಿಸ್ಥಿತಿಗೆ ತಕ್ಕಂತೆ ಕಷ್ಟಪಟ್ಟು ಮುಂದೆ ಬಂದವರು ಬಂದೆವು, ಇನ್ನುಳಿದವರೆಲ್ಲ ಅಲ್ಲಲ್ಲೇ ಬಿದ್ದು ಹೋದರು, ಕೆಲವರು ಎಷ್ಟೋ ದಿನ ಬೇರೆ ಕ್ಲೈಂಟ್ ಸಿಗದೇ ತುಂಬಾ ದಿನಗಳ ಕಾಲ 'ಬೆಂಚ್'ನಲ್ಲಿದ್ದದ್ದೂ ಇತ್ತು.

ಹೀಗೆ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಸುಳ್ಳನ್ನು ಹೇಳಿ ಮುಂದೆ ಬಂದ ನನ್ನಂತಹವರು ಈಗ 'ನೀವು ಯಾರೂ ಸುಳ್ಳನ್ನು ಹೇಳಬೇಡಿ' ಎನ್ನೋದು 'ಇಪ್ಪತ್ತಕ್ಕೆ ಹಾದರ ಎಪ್ಪತ್ತಕ್ಕೆ ಪ್ರತಿವ್ರತೆ' ಎನ್ನುವಂತಾಗುತ್ತದೆ ಎನ್ನುವುದು ನನಗೆ ಚೆನ್ನಾಗಿ ಗೊತ್ತಿರೋದರಿಂದ ಈ ಮಾತನ್ನು ಹೇಳಬೇಕಾಗಿ ಬಂತು.

***

ಆಗ ನಾವೆಲ್ಲ ಇಂಟರ್‌ವ್ಯೂಗೆ ಭಾರತದಲ್ಲಿ ಹೋದಾಗ ವಾಕ್ ಇನ್ ಇಂಟರ್‌ವ್ಯೂ ಸಿಚುವೇಷನ್ ನಲ್ಲಿ ಬಾಗಿಲ ಬಳಿ ಇರುತ್ತಿದ್ದ ಪರಮಾತ್ಮ 'ನಿಮಗೆಷ್ಟು ವರ್ಷ ಅನುಭವ ಇದೆ?" ಎಂದು ಕೇಳಿ ಅಭ್ಯರ್ಥಿಗಳನ್ನು ಒಳಗೆ ಬಿಡುತ್ತಿದ್ದ, ಆಗ ಮೊದಲ ಸುಳ್ಳು ಹೊರಬರುತ್ತಿತ್ತು. ಅವನು ಕೇಳುವ ನಾಲ್ಕು ವರ್ಷಗಳ ಅನುಭವ ನಿಜವಾಗಿ ನನಗಿದ್ದರೆ ನಾನೇಕೆ ಆ ಸಂದರ್ಶನಕ್ಕೆ ಆ ರೀತಿ ಹೋಗುತ್ತಿದ್ದೆ? ಅದಿಲ್ಲವಾದ್ದರಿಂದಲೇ ತಾನೇ ನಾನು ಅಲ್ಲಿರೋದು ಎನ್ನುವ ಭಂಡ ಸಮಜಾಯಿಷಿ ಬೇರೆ!

ನಮ್ಮ ಟೆಕ್ನಿಕಲ್ ಜ್ಞಾನ ಚೆನ್ನಾಗಿತ್ತು, ಆಗೆಲ್ಲ RDBMS ಸಂಬಂಧೀ ವಿಷಯಗಳನ್ನು ಕರತಾಮಲಕ ಮಾಡಿಕೊಂಡಿದ್ದೆವು, ಅವರು ಕೇಳುವ ಪ್ರಶ್ನೆಗಳಿಗೆ ಅನುಭವದ ಹಿನ್ನೆಲೆಯಿಂದಲ್ಲದಿದ್ದರೂ ಪುಸ್ತಕಗಳನ್ನು ಓದಿದ ಹಿನ್ನೆಲೆಯಿಂದ, ನಮ್ಮ ನಡುವಿನ ಚರ್ಚೆಗಳ ಕಾರಣದಿಂದಲಾದರೂ ತಕ್ಕ ಮಟ್ಟಿಗೆ ಉತ್ತರ ಕೊಡುತ್ತಿದ್ದೆವು. ಆಗೆಲ್ಲ ಕೆಲಸವನ್ನು ತೆಗೆದುಕೊಳ್ಳಬೇಕು, ಅಮೇರಿಕಕ್ಕೆ ಹೋಗಬೇಕು ಅನ್ನೋದು ಬದುಕಿನ ಮಹಾ ದೊಡ್ಡ ಸಾಧನೆಯಾಗಿ ಕಾಣಿಸುತ್ತಿತ್ತು (ಈ ಭಾಗ್ಯಕ್ಕೆ ಇಲ್ಲಿ ಬರಬೇಕಾಯಿತೇ ಅನ್ನುವುದು ಬೇರೆ ವಿಷಯ!).

***

ಸುಳ್ಳನ್ನು ಸರಳವಾಗಿ "ಸುಳ್ಳು" ಎಂದು ಹೇಳುವ ಬದಲು "ಕನ್‌ಷ್ಟ್ರಕ್ತಿವ್ ಉತ್ತರ" ಎಂದು ಬದಲಾಯಿಸಿಕೊಳ್ಳೋಣ (ಅಮೇರಿಕದಲ್ಲಿ ಈ ರೀತಿ ಕನ್‌ಷ್ಟ್ರಕ್ಟಿವ್ ಉತ್ತರಗಳನ್ನು ಬಹಳಷ್ಟು ನೆಲೆಗಳಲ್ಲಿ ಕೇಳಿದ್ದೇನೆ).

ನನ್ನ ಪ್ರಕಾರ ಕಾಲೇಜಿನಿಂದ ಹೊರಗೆ ಬಂದವರಿಗೆ ಒಂದೆರಡು ವರ್ಷಗಳ ಕಾಲ ಯಾವುದೇ ಕೆಲಸ ಮಾಡಲು ಆಗದಿದ್ದಾಗ, ಮುಂದೆ ಬೇರೆ ಯಾವ ಸಂದರ್ಶನಕ್ಕೆ ಹೋದರೂ 'ಗ್ರ್ಯಾಜುಯೇಷನ್ ಮುಗಿಸಿದಂದಿನಿಂದ ಇಂದಿನವರೆಗೆ ನೀವೇನು ಮಾಡುತ್ತಿದ್ದಿರಿ?' ಎನ್ನುವ ಪ್ರಶ್ನೆ ಒಂದಲ್ಲ ಒಂದು ರೀತಿಯ ಕನ್‌ಷ್ಟ್ರಕ್ಟಿವ್ ಉತ್ತರವನ್ನು ಬೇಡುತ್ತದೆ. ಕೆಲಸವಿಲ್ಲದೆ ಅನುಭವವಿಲ್ಲ, ಅನುಭವವಿಲ್ಲದೆ ಕೆಲಸವಿಲ್ಲ ಎನ್ನುವಂತಹ ದಿನಗಳಲ್ಲಿ ನಿಮ್ಮ ಕಣ್ಣ ಮುಂದೆ ಹೇಗಾದರೂ ಮಾಡಿ ಒಂದಲ್ಲ ಒಂದು ಕೆಲಸವನ್ನು ತೆಗೆದುಕೊಳ್ಳುತ್ತೇನೆ ಎನ್ನುವ ಛಲ ಇರುವಾಗ ಒಂದಿಷ್ಟು ಕನ್‌ಷ್ಟ್ರಕ್ಟಿವ್ ಉತ್ತರಗಳನ್ನು ಹೇಳಿದರೆ ಅದರಲ್ಲಿ ತಪ್ಪೇನೂ ಇಲ್ಲ ಎನ್ನುವುದು ನನ್ನ ಅಭಿಮತ. ಈ ವಿಷಯದಲ್ಲಿ ಕನ್ನಡಿಗರು ಯಾವಾಗಲೂ ಹಿಂದೆ ಬಿದ್ದಿರೋದು ಮತ್ತೊಂದು ಸತ್ಯ. ಕೆಲಸವನ್ನು ದೊರಕಿಸಿಕೊಳ್ಳಲು, ತಮ್ಮದನ್ನು ಸಾಧಿಸಿಕೊಳ್ಳಲು ಉಳಿದ ರಾಜ್ಯಗಳವರು ಎಂತೆಂಥಹ ಮಟ್ಟವನ್ನು ತಲುಪುತ್ತಾರೆ ಎನ್ನುವುದು ನಿಮಗಿನ್ನೂ ಗೊತ್ತಿಲ್ಲ, ಅವರ ಮುಂದೆ ಕನ್ನಡಿಗರ ಪ್ರಯತ್ನ ಏನೇನೂ ಅಲ್ಲ.

ನೀವು ರಿಕ್ರ್ಯೂಟರ್‌ಗಳ ಜೊತೆ ಮಾತನಾಡುವಾಗ ನಿಮ್ಮ ಈ ಕನ್‌ಷ್ಟ್ರಕ್ಟಿವ್ ಉತ್ತರದ ಬಗ್ಗೆ ಒಂದು ಸೂಕ್ಷ್ಮವಾಗಿ ಹೇಳಬೇಕಾದ ಮಾತೆಂದರೆ ಒಮ್ಮೆ ಹೇಳಿದ ಮಾತನ್ನು ಸಾಧಿಸಿಕೊಳ್ಳುವ ಜಾಣತನವನ್ನೂ ನೀವು ಮೊದಲೇ ಯೋಚಿಸಿಕೊಳ್ಳಬೇಕು - ನಾನು ಹೀಗಂದರೆ ಹೇಗೆ, ಅವರು ಅದಕ್ಕೆ ಏನೇನು ಪ್ರಶ್ನೆಗಳನ್ನು ಕೇಳಬಹುದು, ಅದಕ್ಕೆ ಇನ್ನೇನು ಉತ್ತರಗಳನ್ನು ಹೇಳಬಹುದು ಇತ್ಯಾದಿ...ಹೀಗೆ ಚದುರಂಗದ ಆಟದಲ್ಲಿನ ಮುಂದಿನ ನಡೆಗಳನ್ನು ಊಹಿಸಿ, ಮನನ ಮಾಡಿಕೊಂಡಾದ ಮೇಲೆ ಒಂದಿಷ್ಟು ಸಂದರ್ಶನಗಳನ್ನು ಮುಗಿಸಿದ ಮೇಲೆ ನೀವೇ ಎಲ್ಲದಕ್ಕೂ ತಯಾರಾಗಿರುತ್ತೀರಿ.

ನಿಮಗೊಂದು ನೈಜ ಉದಾಹರಣೆ - ನಾನು ಮತ್ತು ನನ್ನ ಸಹೋದ್ಯೋಗಿ ಸ್ನೇಹಿತ ಇಬ್ಬರೂ ಬಾಂಬೆ ಬೇಸ್ಡ್ ಕಂಪನಿಯೊಂದರ ವಾಕ್ ಇನ್ ಸಂದರ್ಶನಕ್ಕೆ ಹೋಗಿದ್ದೆವು, ಮೊದಲು ನಾನು, ನನ್ನ ವಾಚಾಳಿತನಕ್ಕೆ ಮರುಳಾಗಿ ನನಗೆ ಸ್ಥಳದಲ್ಲೇ ಅಮೇರಿಕದ ಕೆಲಸದ ಆಫರ್ ಕೊಟ್ಟರು (ಆ ಕಂಪನಿಯನ್ನು ನಾನು ಸೇರಿಕೊಳ್ಳಲಿಲ್ಲ, ಅದು ಬೇರೆ ವಿಷಯ), ನನ್ನ ನಂತರ ಸಂದರ್ಶನಕ್ಕೆ ಹೋದ ನನ್ನ ಸ್ನೇಹಿತನಿಗೂ ಆಫರ್ ಕೊಟ್ಟರು - ಅವನು ತನ್ನ ಸಂದರ್ಶನದಲ್ಲಿ ಹೇಳಿದ್ದೇನೆಂದರೆ 'ಸತೀಶ ಈ ಪ್ರಾಜೆಕ್ಟಿನಲ್ಲಿ ಟೀಮ್ ಲೀಡರ್, ನಾನು ಅವನ ಜೊತೆ ಟೀಮ್ ಮೆಂಬರ್' ಎಂಬುದಾಗಿ! ಆದರೆ ಸತ್ಯವಾದ ವಿಷಯವೆಂದರೆ ನಾವಿಬ್ಬರೂ ಒಂದೇ ಟೀಮಿನಲ್ಲಿ ಇದ್ದವರು, ಆದರೆ ಆ ಸಮಯಕ್ಕೆ ಸರಿಯಾಗಿ ಅವನು ಈ ವಾಕ್ಯವನ್ನು ಹೇಳಿದ ಮೇಲೆ ಅವನನ್ನು ನನಗೆ ಕೇಳಿದ ಯಾವುದೇ ಪ್ರಶ್ನೆಗಳನ್ನೂ ಕೇಳಲಿಲ್ಲ. ನಾನೂ ಅವನೂ ಇಬ್ಬರೂ ಅಮೇರಿಕೆಗೆ ಬೇರೆ ಒಂದು ಕಂಪನಿಯ ಮೂಲಕ ಬಂದವರು, ಇಂದಿಗೂ ಈ ಸಂದರ್ಭವನ್ನು ನೆನೆಸಿಕೊಂಡು ನಗುತ್ತೇವೆ.

***

ಇಷ್ಟು ಹೇಳಿದ ಮೇಲೆ ಸುಳ್ಳನ್ನು, ಅಲ್ಲ, ಕನ್‌ಷ್ಟ್ರಕ್ಟಿವ್ ಉತ್ತರವನ್ನು ನೀವು ಹೇಗೆ ಕೊಡುತ್ತೀರಿ ಬಿಡುತ್ತೀರಿ ಎಂಬುದು ನಿಮಗೆ ಸೇರಿದ್ದು. ಏನಾದರೂ ಮಾಡಿ ನಿಮ್ಮ ಮಾತುಗಳನ್ನು ಸಾಧಿಸಿಕೊಳ್ಳುವ ಛಲ ನಿಮ್ಮಲ್ಲಿ ಹುಟ್ಟಲ್ಲಿ. ಮುಂದೆ ಹೇಗೋ, ಆದರೆ ಇಂದಿನ ರುತ್‌ಲೆಸ್ ಸಂದರ್ಭಗಳಲ್ಲಿ ನಿಮ್ಮ ವಾಚಾಳಿತನ ನಿಮಗೆ ನೆರವಾಗಲಿ.

ಕನ್‌ಷ್ಟ್ರಕ್ಟಿವ್ ಉತ್ತರಗಳನ್ನು ಹೆಚ್ಚು ಜನರು ಕೊಡುತ್ತಾರೆ - ನಿಮ್ಮಲ್ಲಿರುವ 'ಅಯ್ಯೋ' ಎನ್ನುವ ಅಪರಾಧಿ ಭಾವವನ್ನು ಕೆಲಸವನ್ನು ತೆಗೆದುಕೊಳ್ಳುವ ಮಟ್ಟಿಗೆ ಒದ್ದು ಓಡಿಸಿ.

***

ಮುಂದಿನ ಶನಿವಾರ:
12) What you do once you get the job!

Labels:

Sunday, September 24, 2006

ರಿಕ್ರ್ಯೂಟರ್ ಎಂಬ ಮಹಾತ್ಮರು!

ಸ್ವರ್ಗದ ಮೆಟ್ಟಲನ್ನು ಹತ್ತಲು ಸಹಾಯ ಮಾಡುವ ಹಲವಾರು ಅಂಶಗಳಿದ್ದ ಹಾಗೆ ಹೊಸ ಕೆಲಸವನ್ನು ದೊರಕಿಸಿಕೊಡುವಲ್ಲಿ ರಿಕ್ರ್ಯೂಟರ್‌ಗಳ ಪಾತ್ರವನ್ನು ಎಷ್ಟು ಹೊಗಳಿದರೂ ಕಡಿಮೆಯೇ! ಪ್ರತಿಯೊಬ್ಬರಿಗೂ ಅವರವರ ಮುಂದಿನ ಹಂತದಲ್ಲಿ ಕೆಲಸವನ್ನು ಬಿಡಲು ಹಾಗೂ ಹೊಸ ಕೆಲಸವನ್ನು ಹುಡುಕಲು ನೆರವಾಗುವಲ್ಲಿ ಇವರ ಪಾತ್ರ ಮಹತ್ತರವಾದದ್ದು, ಆದ್ದರಿಂದ ನಿಮ್ಮ ಹಾಗೂ ರಿಕ್ರ್ಯೂಟರ್‌ಗಳ ಸಂಬಂಧ ಎಷ್ಟು ಸಾಧ್ಯವೋ ಅಷ್ಟು ಅನ್ಯೋನ್ಯವಾಗಿರಲಿ, ಹಾಗೂ ಧೀರ್ಘಕಾಲೀನವಾಗಿರಲಿ.

ನನ್ನ ಇದುವರೆಗಿನ ರಿಕ್ರ್ಯೂಟರ್ ಇಂಟರಾಕ್ಷ್ಯನ್‌ಗಳಲ್ಲಿ ಬಂದು ಹೋದ ಹಲವಾರು ಜನರನ್ನು ನಾನು ಇಂದಿಗೂ ಬಲ್ಲೆ, ಅವರ ಫೋನ್ ನಂಬರ್ ಎಂದಿಗೂ ನನ್ನಲ್ಲಿ ಲಭ್ಯವಿದೆ, ಅಲ್ಲದೇ ಸಮಯದಿಂದ ಸಮಯಕ್ಕೆ ಅವರ ಜೊತೆ ಒಡನಾಡುತ್ತಲೇ ಇರುತ್ತೇನೆ. ಈ ವರ್ಷ, ಈ ಕ್ವಾರ್ಟರ್ ಜಾಬ್ ಮಾರ್ಕೆಟ್ ಹೇಗಿದೆ ಎನ್ನುವುದರಿಂದ ಹಿಡಿದು, ಸಂಬಳದ ಟ್ರೆಂಡ್, ಟೆಕ್ನಾಲಜಿ ಟ್ರೆಂಡ್, ಯಾವುದು ಹಾಟ್ ಎನ್ನುವುದರ ಸಾರಾಂಶವೆಲ್ಲ ನನಗೆ ಆಗಿಂದ್ದಾಗ್ಗೆ ದೊರೆಯುತ್ತಲೇ ಇರುತ್ತದೆ. ಪ್ರೊಫೆಷನಲ್ ರಿಕ್ರ್ಯೂಟರ್‌ಗಳದ್ದು ಒಂದು ರೀತಿಯ ಸಂಬಂಧವಾದರೆ ಇನ್ನು ಕಂಪನಿಯಲ್ಲಿ ಕೆಲಸ ಮಾಡುವ ರಿಕ್ರ್ಯೂಟರ್‌ಗಳದ್ದು ಮತ್ತೊಂದು ರೀತಿ. ಉದಾಹರಣೆಗೆ ನೀವು ಯಾವುದೋ ಒಂದು ದೊಡ್ಡ ಕಂಪನಿಯನ್ನು ಸೇರಬೇಕು ಎಂಬ ಹವಣಿಕೆಯಲ್ಲಿದ್ದೀರಿ ಎಂದುಕೊಳ್ಳೋಣ, ಆ ಕಂಪನಿಯಲ್ಲಿ ಯಾವ ಸಮಯದಲ್ಲಿ ಹೊರಗಿನಿಂದ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ, ಯಾವ ಯಾವ ಡಿವಿಜನ್‌ಗಳಲ್ಲಿ ಕೆಲಸ ಖಾಲಿ ಇದೆ ಎಂಬುದನ್ನು ಸಮಯದಿಂದ ಸಮಯಕ್ಕೆ ತಿಳಿದುಕೊಳ್ಳಬಹುದು, ಸಿಕ್ಕ ಉಪಯುಕ್ತ ಮಾಹಿತಿಗಳಿಂದ ನಿಮ್ಮ ಜಾಬ್ ಸರ್ಚ್ ಸುಲಭವಾಗುವ ಸಾಧ್ಯತೆಗಳಿವೆ.

ರಿಕ್ರ್ಯೂಟರ್‌ಗಳೆಂದರೆ ಬರೀ ಕೆಲಸದ ಬಗ್ಗೆ ಮಾತ್ರ ಸಹಾಯ ಮಾಡಬೇಕು ಎಂದೇನು ಇಲ್ಲ, ಕೆಲಸದ ಜೊತೆಯಲ್ಲಿ ಯಾವ ಸ್ಥಳ ವಾಸಕ್ಕೆ ಯೋಗ್ಯವಾದುದು, ಯಾವ ಯಾವ ಸ್ಥಳಗಳಲ್ಲಿ ಕಾಸ್ಟ್ ಆಫ್ ಲಿವಿಂಗ್ ಹೇಗಿದೆ ಎಂಬುದನ್ನೂ ತಿಳಿದುಕೊಳ್ಳಬಹುದು - ಇವೆಲ್ಲಾ ಮಾಹಿತಿಗಳು ಇಂಟರ್ನೆಟ್‌ನಲ್ಲಿ ಸಿಗುತ್ತದೆಯಲ್ಲಾ ಎಂದು ನೀವು ಕೇಳಬಹುದು, ಆದರೆ ಈ ರಿಕ್ರ್ಯೂಟರ್‌ಗಳು ಶೇಖರಿಸಿರಿದ ವರ್ಷಗಳ ಮಾಹಿತಿ ನಿಮಗೆ ಕೆಲವೇ ನಿಮಿಷಗಳಲ್ಲಿ ಒಂದು ಫೋನ್ ಕರೆಯಿಂದಲೋ ಅಥವಾ ಇ-ಮೇಲ್ ನಿಂದಲೋ ಸಿಗುವಂತಾದರೆ ನಿಮಗೆ ಹಲವಾರು ನಿರ್ಧಾರಗಳನ್ನು ಮಾಡಲು ಹೆಚ್ಚಿನ ಮಾಹಿತಿ ಸಿಕ್ಕಹಾಗೆ ತಾನೆ? ಲೋಕಲ್ ಕಮ್ಮ್ಯೂಟ್‌ನಿಂದ ಹಿಡಿದು, ರಷ್ ಅವರ್ ಟ್ರ್ಯಾಫಿಕ್‌ನಿಂದ ಹಿಡಿದು ಹೀಗೆ ಹಲವಾರು ಲೋಕಲ್ ಮಾಹಿತಿಗಳನ್ನು ನೀಡುವಲ್ಲಿ ರಿಕ್ರ್ಯೂಟರ್‌ಗಳು ಸಿದ್ಧ ಹಸ್ತರು, ಸಾದ್ಯವಾದಷ್ಟು ಅವರನ್ನು ನಿಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳಲು ನೋಡಿ.

ನೀವು ರಿಕ್ರ್ಯೂಟರ್‍ಗಳ ಜೊತೆ, ಪ್ರೊಫೆಷನಲ್ ಕನ್ಸಲ್‌ಟೆಂಟ್ಸ್‌ಗಳ ಜೊತೆ, ಲಾಂಗ್ ಟರ್ಮ್ ಸಂಬಂಧವನ್ನಿಟ್ಟುಕೊಂಡರೆ ಅದರಿಂದ ಸಾಕಷ್ಟು ಅನುಕೂಲವಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ರೆಸ್ಯೂಮೆಯನ್ನು ಹೀಗಲ್ಲ ಹಾಗೆ ಎಂದು ತಿದ್ದಲು ಸಹಾಯ ಮಾಡುವಲ್ಲಿ, ಸದಾ ಬದಲಾಗುವ ಜಾಬ್ ಮಾರ್ಕೆಟ್‌ಗೆ ನಿಮ್ಮನ್ನು ತಯಾರು ಮಾಡುವಲ್ಲಿ, ಅಲ್ಲದೇ ನಿಮಗಿಷ್ಟವಾದ ಕೆಲಸವನ್ನು ಹುಡುಕಲು ನೆರವಾಗುವಲ್ಲಿ ಅವರ ಸಹಾಯ ಬಹಳಷ್ಟಿದೆ. ನನ್ನ ಬಳಿ ೧೯೯೫ ರಿಂದ ನಾನು ಸಂಗ್ರಹಿಸಿದ ರಿಕ್ಯ್ರೂಟರ್ ಮಾಹಿತಿ ಇದೆ, ಈಗ ನಾನೇನಾದರೂ ಆ ಕಂಪನಿಗೆ ಈ ದಿನ ಫೋನ್ ಕಾಲ್ ಮಾಡಿದೆನೆಂದರೆ ಅವರು ಅದೇ ಕೆಲಸದಲ್ಲಿ ಇರಬೇಕೆಂದೇನೂ ನಿಯಮವಿಲ್ಲ, ಆದರೆ ನೀವು ಹಳೆಯ ಸಂಬಂಧದ ಎಳೆಯನ್ನೊಂದು ತೆಗೆದುಕೊಂಡು ಮಾತಿಗೆ ಇಳಿದರೆ ಯಾರಾದರೂ ನಿಮ್ಮ ಮಾತ್ರಿಗೆ ಪ್ರಾಶಸ್ತ್ಯ ಕೊಟ್ಟೇ ಕೊಡುತ್ತಾರೆ ಎನ್ನುವುದು ನಿಜ. ಉದಾಹರಣೆಗೆ - ಕಂಪ್ಯೂಟರ್ ಅಸ್ಸೋಸಿಯೇಟ್ಸ್ ಕಂಪನಿಯಲ್ಲಿ ಈ ದಿನ ನನ್ನ ಪರಿಚಯದ ಜ್ಯೂಡಿ ಬರ್ಕ್ಸ್ ಅಲ್ಲಿ ಕೆಲಸ ಮಾಡುತ್ತಿಲ್ಲ, ಆದರೆ ಆಕೆಯ ಜಾಗದಲ್ಲಿ ಕೆಲಸ ಮಾಡುತ್ತಿರುವ ಸ್ಟೀವ್ ಆಕೆಯನ್ನು ಬಲ್ಲ, ನಾನು ಈ ದಿನ ಕರೆ ಮಾಡಿದೆನೆಂದರೂ ಆ ಕಂಪನಿಯಲ್ಲಿ ಬೇರೇನೂ ಸಹಾಯ ದೊರೆಯದಿದ್ದರೂ ಹಳೆಯ ಪರಿಚಯದಿಂದ ಒಂದಿಷ್ಟು ಹೊಸ 'ಸ್ನೇಹಿತ'ರನ್ನಾದರೂ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು, ಆದ್ದರಿಂದ ಹೊಸ ಸಂಪರ್ಕಗಳನ್ನು ನಾನು ಪೋಷಿಸುತ್ತೇನೆ, ಎಂದಾದರೂ ಒಂದು ದಿನ ನೆರವಾಗಲಿ ಎಂದು.

ರಿಕ್ರ್ಯೂಟರ್‌ಗಳ ಬಳಿ ಎಷ್ಟು ಸಾಧ್ಯವೋ ಅಷ್ಟು ನಿಜವನ್ನೇ ಹೇಳಿ - ನಿಮ್ಮ ಈಗಿನ ಸಂಬಳ, ನಿಮ್ಮ ನಿರೀಕ್ಷೆ, ನಿಮ್ಮ ಪ್ರಿಫರೆನ್ಸ್ ಮುಂತಾದವುಗಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ನಿಜವನ್ನು ಹೇಳೋದರಿಂದ ಹೊಸ ಕೆಲಸವನ್ನು ಹುಡುಕುವಲ್ಲಿ ನಿಮ್ಮ ಜೊತೆಗೆ ಮತ್ತೊಬ್ಬರು ಕೆಲಸ ಮಾಡುವಲ್ಲಿ ಸಹಾಯವಾಗುತ್ತದೆ. ಮುಂದೆ ಯಾವುದೋ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬಂದಿತೆಂದರೆ ನೀವು ಆ ರಿಕ್ರ್ಯೂಟರ್ ಅನ್ನೇ ಕೇಳಬಹುದು - ಈ ಕಂಪನಿಯಲ್ಲಿ ಇಂಟರ್‌ವ್ಯೂವ್ ಹೇಗಿರುತ್ತದೆ? ಎಷ್ಟು ಲೆವೆಲ್‍ನಲ್ಲಿ, ಎಷ್ಟು ಹೊತ್ತು, ಎಷ್ಟು ವಿವರವಾಗಿ ಪ್ರಶ್ನೆ ಕೇಳುತ್ತಾರೆ ಎಂದು ಮೊದಲೇ ಕೇಳಿ ತಿಳಿದುಕೊಂಡರೆ ನಿಮ್ಮ ಸಂದರ್ಶನಕ್ಕೆ ತಯಾರಾಗಲು ಬಹಳ ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾಬ್ ಡಿಸ್ಕ್ರಿಪ್ಷನ್ ಏನು, ಕಂಪನಿಯವರ ನಿಜವಾದ ನಿರೀಕ್ಷೆ ಏನು, ಈ ಸಂದರ್ಶನಕ್ಕೆ ಕರೆದವರು ಎಷ್ಟು ಸಮಯದಲ್ಲಿ ನಿರ್ಧಾರ ಮಾಡಬಲ್ಲರು ಎಂಬುದನ್ನೆಲ್ಲ ನೀವು ರಿಕ್ರ್ಯೂಟರ್‌ಗಳಿಂದಲೇ ತಿಳಿಯಬೇಕು.

ನಾನು ಅಮೇರಿಕಕ್ಕೆ ಬಂದ ಹೊಸದರಲ್ಲಿ ನನ್ನ ಬಳಿ ಕ್ರೆಡಿಟ್ ಕಾರ್ಡೂ ಇರಲಿಲ್ಲ, ಡ್ರೈವಿಂಗ್ ಲೈಸನ್ಸ್ ಸಹ ಇರಲಿಲ್ಲ, ನನ್ನನ್ನು ಹೊಟೇಲೊಂದರಲ್ಲಿ ವಾಸ್ತವ್ಯ ಹೂಡಲು ಅನುಕೂಲ ಮಾಡಿಕೊಡುವುದರಿಂದ ಹಿಡಿದು, ರೆಂಟಲ್ ಕಾರ್ ಮಾಡಿಕೊಟ್ಟು ಹೀಗಲ್ಲ ಹಾಗೆ ಡ್ರೈವ್ ಮಾಡಬೇಕು ಎಂಬುದನ್ನು ತಿಳಿಸುವುದರಿಂದ ಹಿಡಿದು, ಮುಂದೆ ನನಗೆ ಅಪಾರ್ಟ್‌ಮೆಂಟ್ ಸಿಕ್ಕಾಗ ಈ ಸ್ಥಳದಲ್ಲಿ ಮನೆ ಮಾಡಬೇಡ ಎಂಬ ಕಿವಿಮಾತನ್ನು ಮುಕ್ತವಾಗಿ ಕೊಡುವುದರಿಂದ ಹಿಡಿದು, ಚೀಜ್ ಬರ್ಗರ್‌ನಲ್ಲೂ ಮಾಂಸವಿದೆ ಎಂಬುದನ್ನು, ಹಾಗೂ ಇನ್ನೂ ಹಲವಾರು ವಿಷಯಗಳನ್ನು ಮನನ ಮಾಡಿಕೊಟ್ಟ ರಿಕ್ರ್ಯೂಟರ್‌ಗಳನ್ನು ನಾನು ಇಂದಿಗೂ ನೆನೆಯುತ್ತೇನೆ. ಹತ್ತು ವರ್ಷದ ಹಳೆಯ ಕಾಂಟ್ಯಾಕ್ಟ್‌ಗಳ ಜೊತೆಗೂ ನಾನು ಇನ್ನೂ ಇ-ಮೇಲ್ ಸಂಪರ್ಕವನ್ನಿಟ್ಟುಕೊಂಡಿದ್ದೇನೆ.

ಹೀಗೆ ನಿಮ್ಮ ಹಾಗೂ ರಿಕ್ರ್ಯೂಟರ್‍ಗಳ ಸಂಬಂಧ ಆದಷ್ಟು ಉತ್ತಮವಾಗಿರಲಿ, ನಿಮ್ಮ ಹೊಸ ಕೆಲಸದ ಶೋಧನೆಯಲ್ಲಿ, ನೀವು ಹೊರಗಿನ ಮಾರ್ಕೆಟ್‌ಗಳ ವಿಚಾರವನ್ನು ಅರಿಯುವಲ್ಲಿ ಅವರು ನಿಮಗೆ ನೆರವಾಗಲಿ, ಹೀಗೆ ನಿಮ್ಮ ಅವರ ಸಂಬಂಧ ಉತ್ತಮವಾಗಿರಬೇಕು ಎನ್ನುವಲ್ಲಿ ನೀವೇನೂ ಬಹಳಷ್ಟು ಮಾಡಬೇಕಾದದ್ದಿಲ್ಲ, ಯಾರಾದರೂ ನಿಮ್ಮ ಸ್ನೇಹಿತರಲ್ಲಿ ಕೆಲಸ ಹುಡುಕುವವರಿದ್ದರೆ ಅವರನ್ನು ಈ ರಿಕ್ರ್ಯೂಟರ್‌ಗಳಿಗೆ ರೆಫೆರ್ ಮಾಡಿ, ಅಷ್ಟೇ!

ಮುಂದಿನ ಶನಿವಾರ:
11) Why you should lie!

Labels:

Sunday, September 17, 2006

ಕೆಲಸ ಹುಡುಕುವುದಕ್ಕೆ ಯೋಗ್ಯ ಸಮಯ!

ಕೆಲಸವನ್ನು ಹುಡುಕುವುದಕ್ಕೆ ಯೋಗ್ಯವಾದ ಸಮಯ ಅಂದರೆ ಯಾವ ತಿಂಗಳಿನಲ್ಲಿ ಹುಡುಕಿದರೆ ಒಳ್ಳೆಯದು, ಯಾವ ಮನಸ್ಥಿತಿಯಲ್ಲಿ ಹುಡುಕಿದರೆ ಒಳ್ಳೆಯದು ಎನ್ನುವುದನ್ನು ಸೂಕ್ಷ್ಮವಾಗಿ ನೋಡೋಣ.

ಹೊಸ ಅಥವಾ ಬೇರೆ ಕೆಲಸವನ್ನು ಹುಡುಕುವುದಕ್ಕೆ ಮೊದಲು ನಿಮ್ಮ ಈಗಿನ ನೆಲೆಯನ್ನು ಅರಿತುಕೊಳ್ಳುವುದು ಮುಖ್ಯ. ನೀವು ಕಾಲೇಜಿನಿಂದ ಈಗಷ್ಟೇ ಹೊರಗೆ ಬಂದಿದ್ದರೆ ನಿಮ್ಮ ಕೆಲಸ ಹುಡುಕುವ ಶೈಲಿಗೂ ನೀವು ಈಗಾಗಲೇ ಒಂದು ಕೆಲಸದಲ್ಲಿ ಇದ್ದರೆ ನೀವು ಕೆಲಸ ಹುಡುಕುವ ವಿಧಾನಕ್ಕೂ ಬಹಳ ವ್ಯತ್ಯಾಸವಿದೆ. ಆದರೆ, ನೀವು ಕೆಲಸವನ್ನು ಹುಡುಕುವುದರಲ್ಲಿ ನಿಮ್ಮಲ್ಲಿ ತುಂಬಿದ ಆತ್ಮವಿಶ್ವಾಸ ಬಹಳ ಮುಖ್ಯ. ನನ್ನನ್ನು ಕೇಳಿದರೆ ಭಂಡ ಧೈರ್ಯ ಅಳುಬುರುಕುತನಕ್ಕಿಂತ ಒಳ್ಳೆಯದು ಎಂದೇ ಹೇಳುತ್ತೇನೆ! (please wait until I write: 11) Why you should lie!)

ಅಲ್ಲದೇ ನೀವು ಈಗಿರುವ ಕೆಲಸವನ್ನು ಸೇರಿ ಎಷ್ಟು ತಿಂಗಳು ಅಥವಾ ವರ್ಷವಾಯಿತು ಎನ್ನುವುದೂ ಮುಖ್ಯ. ತೊಂಭತ್ತರ ದಶಕದ ಕೊನೆಯ ವರ್ಷಗಳಲ್ಲಿ ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ಅದೆಷ್ಟು ಕೆಲಸಗಳು ಸಿಗುತ್ತಿದ್ದವೆಂದರೆ ಮನಸು ಮಾಡಿದ್ದರೆ ಪ್ರತಿ ತಿಂಗಳಿಗೆ ಒಂದೊಂದು ಕೆಲಸವನ್ನು ತೆಗೆದುಕೊಳ್ಳಬಹುದಿತ್ತು. ಮುಂಜಾನೆ ರೆಸ್ಯೂಮೆಯನ್ನು ರಿಕ್ರೂಟರ್‌ಗೆ ಕಳಿಸಿದರೆ ಸಂಜೆ ಒಳಗೆ ಕೆಲಸ ಸಿಗುತ್ತಿತ್ತು. ಆ ಪರಿಸ್ಥಿತಿ ಸಧ್ಯಕ್ಕಂತೂ ಇಲ್ಲ. ನಿಮ್ಮ ಕೆಲಸದ ವಿಶೇಷತೆಗಳನ್ನು ಬಿಟ್ಟರೆ ನೀವಿರುವ ನೆರೆಹೊರೆ ಹಾಗೂ ಹೊರಗಿನ ಸ್ಥಿತಿಗತಿ (job market) ಇವುಗಳ ಮೇಲೂ ಬಹಳಷ್ಟು ಅಂಶಗಳು ನಿರ್ಧಾರಿತವಾಗುತ್ತವೆ. ಉದಾಹರಣೆಗೆ ನೀವು ನ್ಯೂ ಯಾರ್ಕ್ ಮೆಟ್ರೋ ಪ್ರದೇಶದಲ್ಲೋ ಇದ್ದರೆ ಅಥವಾ ಬೆಂಗಳೂರಿನಲ್ಲೋ, ಬಾಂಬೆಯಲ್ಲೋ ಇದ್ದರೆ ನಿಮಗೆ ಮತ್ತೊಂದು ಕೆಲಸ ಸಿಗಬಹುದಾದ ಸಾಧ್ಯತೆಗಳು ಹೆಚ್ಚು. ಅಲ್ಲದೇ ಹೊರಗೆ ಜಾಬ್‌ ಮಾರ್ಕೆಟ್ ಹೇಗಿದೆ ಎನ್ನುವುದರ ಮೇಲೂ ಹೋಗುತ್ತದೆ, ನೀವು ಫಾರ್ಮಸಿಷ್ಟ್ ಅಥವಾ ನರ್ಸಿಂಗ್‌ನಲ್ಲಿ ಕೆಲಸ ಹುಡುಕುತ್ತಿದ್ದರೆ ನಿಮ್ಮನ್ನು ಈಗಿನ ವಾತಾವರಣದಲ್ಲಿ ಮನೆಗೆ ಬಂದು ಕರೆದುಕೊಂಡು ಹೋದಾರು, ಅದರ ಬದಲಿಗೆ ನೀವು ಈಗಷ್ಟೆ ಜಾವ ಪ್ರೋಗ್ರಾಮಿಂಗ್ ಕಲಿತ ಪ್ರೋಗ್ರಾಮರ್ ಎಂದರೆ ಬಹಳಷ್ಟು ಕಷ್ಟಪಡಬೇಕಾಗಿ ಬರುತ್ತದೆ.

ಮೊದಲು ನಿಮ್ಮ ಸ್ಥಿತಿಗತಿಗಳಿಂದ ಆರಂಭಿಸಿ - ನಿಮ್ಮ ಆತ್ಮವಿಶ್ವಾಸದ ಮಟ್ಟ ನೂರಕ್ಕೆ ನೂರು ಇರುವುದು ನಿಮ್ಮ ಹಳೆಯ ಕೆಲಸದಲ್ಲಿ ನೀವು ಪರಿಪೂರ್ಣರಾದಾಗಲೇ. ನೀವು ಕೆಲಸವನ್ನು ಹುಡುಕುವುದಕ್ಕೆ ತಯಾರಾಗುವ ಮೊದಲು ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಒಮ್ಮೆ ಮನನ ಮಾಡಿಕೊಳ್ಳಿ, ನಿಮಗೆ ಈಗ ಎಷ್ಟು ಸಂಬಳ ಬರುತ್ತಿದೆ, ಸಂಬಳದ ಜೊತೆಗೆ ಏನೇನು ಅನುಕೂಲತೆಗಳು ಸಿಗುತ್ತಿವೆ ಎನ್ನುವುದನ್ನು ಒಂದು ಕಡೆ ಬರೆದು ಕೊಳ್ಳಿ. ನಂತರ ನೀವು ಹೊಸ ಕೆಲಸವನ್ನು ಹುಡುಕುತ್ತಿರುವುದು ಹೆಚ್ಚು ಸಂಬಳ ಬರಲಿ ಎಂಬುದಕ್ಕಾಗಿಯೋ ಅಥವಾ ಈ ಕೆಲಸ ಮುಗಿದ ತಕ್ಷಣ ಹೊಸ ಕೆಲಸ ಸಿಗಲಿ ಎಂಬುದಕ್ಕಾಗಿಯೋ ಅಥವಾ ಈ ಕೆಲಸ/ಫೀಲ್ಡ್/ಕಂಪನಿ ಸರಿ ಇಲ್ಲ, ಬೇರೆ ನೋಡೋಣ ಎಂದೂ ಇರಬಹುದು.

ನಂತರ ನೀವು ವರ್ಷದ ಯಾವ ಕ್ವಾರ್ಟರ್‌ನಲ್ಲಿದ್ದೀರಿ ಎಂಬುದನ್ನು ಗಮನಿಸಿ, ಸರಿಯಾದ ನಿರ್ಧಾರಕ್ಕೆ ಬನ್ನಿ. ಅಮೇರಿಕದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಒಂದು ರೀತಿಯ ಹಾಲಿಡೇ ವಾತಾವರಣವಿದ್ದು ಎಷ್ಟೋ ಜನ ಸ್ಥಳೀಯರು ತಾವು ಹೊಸ ಕೆಲಸ ಹುಡುಕುವುದನ್ನು ಮುಂದಿನ ವರ್ಷ ನೋಡೋಣವೆಂದು ಬಿಟ್ಟಿರುವ ಸಾಧ್ಯತೆಗಳೇ ಹೆಚ್ಚು. ಅಲ್ಲದೇ ಅಂತಹ ಸಮಯದಲ್ಲಿ ಕಂಪನಿಗಳು ಆ ವರ್ಷದ ಬಜೆಟ್‌ನಲ್ಲಿ ಹೊಸ ಕೆಲಸಗಾರರನ್ನು ಸೇರಿಸಿಕೊಳ್ಳಬೇಕು ಎಂದು ಸಂಕಲ್ಪ ಮಾಡಿರುವುದರಿಂದ ವರ್ಷದ ಕೊನೆಯ ಕ್ವಾರ್ಟರ್ ನನ್ನಂತಹ ಅನಿವಾಸಿಗಳಿಗೆ ಬಹಳ ಒಳ್ಳೆಯ ಸಮಯವಾಗಿ ಕಂಡು ಬಂದಿದೆ. ನಾನು ಡಿಸೆಂಬರ್ ೨೯ ರಂದು ಒಮ್ಮೆ ಇಂಟರ್‌ವ್ಯೂವ್ ಅನ್ನು ಅಟೆಂಡ್ ಮಾಡಿದ್ದೇನೆ, ಹಾಗೂ ನಾನು ಈಗಿರುವ ಕೆಲಸಕ್ಕೆ ಸೇರಿದ್ದು ಡಿಸೆಂಬರ್ ೨೭ ರಂದು. ನಾನು ಹಾಗೆ ವರ್ಷ ಮುಗಿಯುವುದರೊಳಗೆ ಸೇರಿದ್ದರಿಂದ ನನಗೆ ಒಂದು ವಾರ ಹೆಚ್ಚು ರಜೆ ಸಿಕ್ಕಿತಲ್ಲದೇ ಇನ್ನೂ ಅನೇಕ ಅನುಕೂಲಗಳಾದವು, ಅದೇ ಹೊಸ ವರ್ಷ ಮುಗಿದ ಮೇಲೆ ನೋಡೋಣವೆಂದುಕೊಂಡವರು ಸಾಕಷ್ಟು ಕಳೆದುಕೊಂಡರು.

ವರ್ಷದ ಕೊನೆಯ ಕ್ವಾರ್ಟರ್‌ನಲ್ಲಿ ಹೆಚ್ಚು ಕೆಲಸಗಳು ಇವೆ/ಇರಬೇಕು ಎಂದೇನಲ್ಲ, ಆದರೆ ನೀವು ಸ್ಥಳೀಯರಂತೆ ಕಾಲಹರಣ ಮಾಡದೇ ನಿಮ್ಮ ಗುರಿಯನ್ನು ಕಣ್ಣ ಮುಂದೆ ಇಟ್ಟುಕೊಂಡು ಅದಕ್ಕೆ ತಕ್ಕ ಪರಿಶ್ರಮ ಹಾಕುವುದು ಒಳ್ಳೆಯದು. ಈ ಕೊನೆಯ ಮೂರು ತಿಂಗಳನ್ನು ಬಿಟ್ಟರೆ ವರ್ಷದ ಮೊದಲ ಮೂರು ತಿಂಗಳು ಬಹಳ ಒಳ್ಳೆಯ ಸಮಯ. ಬೇಕಾದಷ್ಟು ಕಂಪನಿಗಳು ಈ ಸಮಯದಲ್ಲಿ ಕೆಲಸಗಾರರನ್ನು ಹುಡುಕುತ್ತಿರುತ್ತಾರೆ. ಜೊತೆಗೆ ನಿಮ್ಮ ಈಗಿನ ಕೆಲಸದ ಅನುಕೂಲಗಳಲ್ಲೊಂದಾದ ವೆಕೇಷನ್‌ಗಳನ್ನು ನೀವು ಮೊದಲ ಮೂರು ತಿಂಗಳಲ್ಲಿ ಬಳಸಿಕೊಂಡು ಅದರ ಸಹಾಯದಿಂದ ಕೆಲಸವನ್ನು ಹುಡುಕಬಹುದು ಅಲ್ಲದೇ ನಿಮ್ಮ ಹೊಸ ಕೆಲಸಕ್ಕೆ ಹೋಗುವ ಮೊದಲೇ ವೆಕೇಷನ್ ಎಲ್ಲಾ ಮುಗಿಸಿ ಸಂಪೂರ್ಣ ರಿಲ್ಯಾಕ್ಸ್ ಆಗಿರಬಹುದು. ನಾನು ಓದಿದ ಹಲವಾರು ಸಮೀಕ್ಷೆಗಳ ಪ್ರಕಾರ ಪ್ರತಿಯೊಬ್ಬರಿಗೂ ಮದುವೆಯಾಗುವುದು, ಕೆಲಸವನ್ನು ಬದಲಾಯಿಸುವುದು, ಮನೆ ಬದಲಾಯಿಸುವುದು, ಸಮೀಪ ಬಂಧು ಅಥವಾ ಸಂಬಂಧಿಗಳ ಸಾವು ಇವೆಲ್ಲವೂ ಬಹಳ ಸ್ಟ್ರೆಸ್ ಹುಟ್ಟಿಸುವಂತಹವು, ಆದ್ದರಿಂದಲೇ ನೀವು ಹೊಸ ಕೆಲಸಕ್ಕೆ ಸೇರಿಕೊಳ್ಳುವ ಮುನ್ನ ನೀವು ಇರುವ ರಜಾದಿನಗಳನ್ನು ಎಷ್ಟು ಸಾಧ್ಯವೋ ಅಷ್ಟನ್ನು ಬಳಸಿಕೊಂಡು, ನಂತರ ಹೊಸ ಕೆಲಸಕ್ಕೆ ಸೇರಿದ ಮೇಲೆ ಅದರ ಮೇಲೆ ಸಂಪೂರ್ಣವಾಗಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು.

ಇನ್ನು ಕೆಲಸವನ್ನು ಹುಡುಕುವಲ್ಲಿ ನೆರವಾಗುವ ವಾರದ ದಿನಗಳನ್ನು ನೋಡುತ್ತಾ ಬಂದರೆ ನೀವು ಸಾಕಷ್ಟು ಹೋಮ್‌ವರ್ಕ್ ಮಾಡಿ ಎಷ್ಟು ಸಾಧ್ಯವೋ ಅಷ್ಟು ಕೆಲಸಗಳಿಗೆ ಭಾನುವಾರ ಉತ್ತರ ಕೊಡುವುದು ಒಳ್ಳೆಯದು, ಹಾಗೇ ಸೋಮವಾರ ರಿಕ್ರೂಟರ್ ಜೊತೆಗೆ ಫಾಲೋಅಪ್ ಮಾಡುವುದನ್ನು ಮರೆಯಬೇಡಿ. ಇನ್ನೇನು ಗುರುವಾರ ಬಂತು, ಮುಂದಿನ ವಾರ ನೋಡೋಣ ಎಂದು ಕೈ ಚೆಲ್ಲದೇ ಸಿಗಬಹುದಾದ ಕೆಲಸಗಳಿಗೆ ಹಾಗೂ ಕೆಲಸಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಗುರುವಾರವೇ ಪ್ರವೃತ್ತರಾಗಿ ಮತ್ತು ಶುಕ್ರವಾರ ಫಾಲೋಅಪ್ ಮಾಡಿ.

ಇನ್ನು ದಿನದ ಸಮಯದಲ್ಲಿ ಇಂತಹ ಸಮಯವೆಂಬುದೇನೂ ಇಲ್ಲ, ಮುಂಜಾನೆ ಎಂಟು ಘಂಟೆಯಿಂದ ಸಂಜೆ ಆರು ಘಂಟೆಯವರೆಗೆ ಯಾರನ್ನು ಬೇಕಾದರೂ ಮಾತನಾಡಿಸಿ. ಅಕಸ್ಮಾತ್ ರಿಕ್ರೂಟರ್ ಇರದೇ ಹೋದರೆ ಅಗತ್ಯವಿದ್ದರೆ ವಾಯ್ಸ್‌ಮೆಸ್ಸೇಜ್ ಬಿಡಿ, ಚುಟುಕಾಗಿ ಹೇಳುವುದನ್ನು ಹೇಳಿ ಮುಗಿಸಿ.

***

ಕೆಲಸ ಹುಡುಕುವುದನ್ನು ಅಥವಾ ಬದಲಾಯಿಸುವುದನ್ನು ಆದಷ್ಟು ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಸಮಯ ಹೇಗೆ ಅಮೂಲ್ಯವೋ ಹಾಗೇ ಇತರರ ಸಮಯ ಎಂಬುದನ್ನು ಮರೆಯಬೇಡಿ. ನಿಮ್ಮ ಈಗಿನ ಆಫೀಸ್ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ಹಾಗೇನಾದರೂ ಕರೆಗಳು ಬಂದರೂ ಆದಷ್ಟು ಕಡಿಮೆ ಮಾತನಾಡಿ ಫೋನ್ ಇಡಿ, ಆ ಕಡೆಯವರಿಗೆ ಅರ್ಥವಾಗುತ್ತದೆ. ನಿಮ್ಮ ಲಂಚ್ ಸಮಯದಲ್ಲಿ ನೀವೇ ಅವರಿಗೆ ಕರೆ ಮಾಡುವುದಾಗಿ ಹೇಳಿ, ಅದರಿಂದ ಮುಕ್ತವಾಗಿ ಮಾತನಾಡಬಹುದು ಜೊತೆಗೆ ನಿಮ್ಮ ಈಗಿನ ಕೆಲಸದ ಮೇಲೂ ನಿಗಾವಹಿಸಬಹುದು.

ನೀವು ಈಗ ಮಾಡುವ/ಮಾಡುತ್ತಿರುವ ಕೆಲಸವನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತೀರಿ ಎಂಬುದು ಬಹಳಷ್ಟು ಅಂಶಗಳನ್ನು ನಿರ್ಧರಿಸಬಲ್ಲದು - ನಿಮಗೆ ಹೊಸ/ಬೇರೆ ಕೆಲಸ ಸಿಗುವವರೆಗೂ ಇದೇ ಕೆಲಸದಿಂದ ನಿಮ್ಮ ಉದರ ಪೋಷಣೆ ನಡೆಯುತ್ತಿದೆ ಎಂಬುದನ್ನು ನೆನೆಸಿಕೊಂಡು 'ಕಾಯಕವೇ ಕೈಲಾಸ' ಎಂದು ಮನಸ್ಸಿನಲ್ಲಿ ಅಂದುಕೊಂಡು ಆರೋಗ್ಯಕರವಾಗಿ ಹಾಗೂ ಸಿಸ್ಟಮ್ಯಾಟಿಕ್ ಆಗಿ ಕೆಲಸವನ್ನು ಹುಡುಕಿ.

ನಿಮಗೆ ಶುಭವಾಗಲಿ!

ಮುಂದಿನ ಶನಿವಾರ:
10) What you should say to the recruiters?
11) Why you should lie!

Labels:

Friday, September 08, 2006

ನಿಮ್ಮನ್ನು ನೀವು ಮೆಚ್ಚಿಸುವ ವಿಧಾನ - ಭಾಗ ೨

ಹಿಂದಿನ ವಾರ ಕೆಲವೊಂದಿಷ್ಟು ಬೇಸಿಕ್ ರೂಲ್ಸ್‌‍ಗಳನ್ನು ಹೇಳಿದ್ದೆ, ಅವುಗಳನ್ನ ಗೈಡ್‌ಲೈನ್ಸ್ ತರಹ ನೋಡೋದು ಒಳ್ಳೆಯದು. ಬಟ್ಟೆ ತೊಡುವುದರ ಬಗ್ಗೆ ಹೇಳಿ ಕೂದಲಿನ ಬಗ್ಗೆ ಹೇಳದಿದ್ದರೆ ಹೇಗೆ? ಭಾರತದಲ್ಲಿದ್ದಾಗ ಕೂದಲನ್ನು ಉದ್ದವಾಗಿ ಬಿಡುತ್ತಿದ್ದವರಲ್ಲಿ ನಾನೂ ಒಬ್ಬ, ಆದರೆ ಇಲ್ಲಿಗೆ ಬಂದ ಮೇಲೆ 'ಶಾರ್ಟ್' ಮಾಡಿಸಿಕೊಳ್ಳುತ್ತಿದ್ದೇನೆ. ನಮ್ಮ ಆಫೀಸಿನ ವಲಯದಲ್ಲಿ ನೋಡಿದಾಗ ನನ್ನ ಕಣ್ಣಿಗೆ ಹೆಚ್ಚಿನವರು ಕಂಡದ್ದು ಹೀಗಾದುದರಿಂದ ನನಗೆ ಅದು ಸಹಜವಾದ ಹೊಂದಾಣಿಕೆ. ಹಾಗಾಗಿ ನೀವೂ ನನ್ನ ಹಾಗೆ ಹುಲುಸಾಗಿ ಕೂದಲನ್ನು ಬೆಳೆಸುತ್ತೀರಾದರೆ ಮೂರು ವಾರಕ್ಕೊಮ್ಮೆ, ಕೊನೇ ಪಕ್ಷ ತಿಂಗಳಿಗೊಮ್ಮೆಯಾದರೂ ಹೇರ್ ಕಟ್ ಮಾಡಿಸಿಕೊಳ್ಳುವುದು ಒಳ್ಳೆಯದು - ಏನು ಬೇಕಾದರೂ ಮಾಡಿ, ಹತ್ತಿಪ್ಪತ್ತು ಡಾಲರ್ ಉಳಿಯುತ್ತದೆ ಎಂದು ಮನೆಯಲ್ಲೇ ಕೂರಬೇಡಿ.

ಇನ್ನು ನೀವು ಮೀಸೆಯನ್ನು 'ಬಿಡು'ವವರಾದರೆ ಅದನ್ನು ಗ್ರೂಮ್ ಮಾಡುವುದೂ ನಿಮ್ಮ ಜವಾಬ್ದಾರಿಯೇ. ಮೀಸೆಯನ್ನು ಉದ್ದುದ್ದ ಬೆಳೆಸಿ ಅದನ್ನು ಚಹಾ ಸೋಸಲು ಬಳಸಬೇಡಿ! ಅಲ್ಲದೇ, ವಯಸ್ಸಾಗುವುದರ ಪ್ರತೀಕದಂತೆ ಎಲ್ಲರಿಗೂ ಮೂಗಿನ ಹೊಳ್ಳೆಗಳಲ್ಲೂ ಕೂದಲು ಬೆಳೆಯುತ್ತದೆ, ಅದನ್ನು ಆಗಾಗ್ಗೆ ಕತ್ತರಿಸಿಕೊಂಡು ಮೂಗಿನಿಂದ ಹೊರಗೆ ಚಾಚದಂತೆ ನೋಡಿಕೊಳ್ಳುವುದೂ ನಿಮ್ಮ ಜವಾಬ್ದಾರಿಯೇ. ಇನ್ನು ಮೂಗಿನ ಒಳಗೆ ಕೈ ಹಾಕಿ ಎಲ್ಲರ ಎದುರು ಸ್ವಚ್ಛಮಾಡುವುದಾಗಲೀ ಅಥವಾ ಗೊತ್ತಿರದೇ ಆಫೀಸಿನಲ್ಲಿ nose pick ಮಾಡುವುದಾಗಲೀ ಸಲ್ಲದು, ಸಾಧ್ಯವಾದಷ್ಟು ಇದರಿಂದ ದೂರ ಇರಿ.

ನೀವು ಹಾಕುವ ಬಟ್ಟೆ ಬರಿಗಳು ನಿಮಗೆ ಹೊಂದುವಂತಿರಲಿ - ಉದಾಹರಣೆಗೆ ದೊಡ್ಡದೊಂದು ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ನಿಮಗೆ ಇಷ್ಟವಾದ ಬಟ್ಟೆ ನಿಮ್ಮ ಸೈಜಿಗೆ ಸಿಗದೇ ಹೋದರೆ ಅಲ್ಲಿ ಸಿಕ್ಕಿದ್ದನ್ನು ಹಾಕಿಕೊಳ್ಳದೇ ಅದೇ ಬಟ್ಟೆ ಅವರ ಬೇರೆ ಬ್ರಾಂಚ್‌ನಲ್ಲಿ ಸಿಗುತ್ತದೆಯೇ ಎಂದು ವಿಚಾರಿಸಿ. ಒಂದು ವೇಳೆ ಹಾಗೆ ಸಿಗದೇ ಹೋದಲ್ಲಿ ಸ್ವಲ್ಪ ಹಣ ಖರ್ಚು ಮಾಡಿ ಅದನ್ನು alteration ಮಾಡಿಸಿಕೊಳ್ಳಬಹುದು. ಆದರೆ ನಿಮಗೆ ಸರಿಯಾಗಿ ಹೊಂದದ ಅಥವಾ ಹೇಳಿ ಮಾಡಿಸಿದ ಬಟ್ಟೆಗಳನ್ನು ತೊಡಲೇ ಬೇಡಿ. ಇನ್ನು ಅಮೇರಿಕದಲ್ಲಿ ಹೆಚ್ಚಿನ ಸೂಟ್‌ಗಳು ಗಂಡಸರಿಗಾದರೆ big & tall ಅನ್ನೋ ಸೈಜಿಗೆ ಹೇಳಿಮಾಡಿಸಿದವು, ಆದರೆ ನೀವು Mens Wearhouse ಅಂತಹ ಸ್ಟೋರ್‌ಗಳಲ್ಲಿ ಹುಡುಕಿದಾಗ ಡ್ರೆಸ್ ಕನ್ಸಲ್‌ಟೆಂಟ್ ನಿಮ್ಮ ಬಣ್ಣ, ಎತ್ತರ, ನಿಲುವುಗಳಿಗೆ ಹೊಂದಬಹುದಾದ ಸೂಟ್‌ಗಳನ್ನು ಆಯ್ಕೆ ಮಾಡಿಕೊಡುವುದೂ ಅಲ್ಲದೇ ಅದನ್ನು ಅತಿ ಕಡಿಮೆ ಬೆಲೆಯಲ್ಲಿ ಕಸ್ಟಮ್ ಆಲ್ಟರೇಷನ್ ಮಾಡಿಕೊಡುತ್ತಾರೆ, ಅವರ ಬೆಲೆಯೂ ಕಡಿಮೆ ಹಾಗೂ ಅವರ ಸರ್ವೀಸ್ ಅತ್ಯಂತ ಉತ್ತಮವಾದ ಸರ್ವೀಸ್‌ಗಳಲ್ಲಿ ಒಂದು - ಕಳೆದ ಏಳೆಂಟು ವರ್ಷಗಳಿಂದ ನನಗೆ ಎಂದೂ ನಿರಾಸೆಯಾಗಿದ್ದಿಲ್ಲ.

ಇನ್ನು ವಾಸನೆಯ ವಿಷಯಕ್ಕೆ ಬಂದರೆ ನೀವು ಹಾಕುವ ಬಟ್ಟೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಅಷ್ಟೇ ಪ್ರಾಮುಖ್ಯತೆಯನ್ನು ನಿಮ್ಮ ವಾಸನೆಗಳಿಗೂ ಕೊಡಬೇಕಾಗುತ್ತದೆ. ಈ ವಾಸನೆ ತಲೆಯಿಂದ ಕಾಲಿನವರೆಗೂ ಅನ್ವಯವಾಗುತ್ತದೆ. ನೀವು ತಲೆಗೆ ಹಾಕುವ ಕ್ರೀಮ್, ಹೇರ್ ಆಯಿಲ್ ಇಂದ ಹಿಡಿದು, ನೀವು ನಿಮ್ಮ ಕಾಲುಚೀಲ (socks) ವನ್ನು ಎಷ್ಟು ದಿನಗಳಿಗೆ ಒಮ್ಮೆ ಬದಲಾಯಿಸುತ್ತೀರಿ ಎನ್ನುವುದರಿಂದಲೂ ನಿರ್ಧಾರಿತವಾಗುತ್ತದೆ. ಸಾಧ್ಯವಿದ್ದಷ್ಟು ನ್ಯೂಟ್ರಲ್ ಅಥವಾ unscented ಹೇರ್ ಆಯಿಲನ್ನು ಬಳಸಿ. ಪ್ರತಿದಿನ ಡೀ ಒಡರೆಂಟ್ ಬಳಸುವುದನ್ನು ಮರೆಯಬೇಡಿ, ನಿಮ್ಮ ಕಂಕುಳನ್ನು ನೀವು ಹೇಗೆ ನೋಡಿಕೊಳ್ಳುತ್ತೀರಿ ಎನ್ನುವುದು ಬಹಳ ಮುಖ್ಯ. ಜೊತೆಗೆ ದಯವಿಟ್ಟು ಪ್ರತಿದಿನ ನೀವು ತೊಡುವ ಕಾಲುಚೀಲವನ್ನು ಬದಲಾಯಿಸಿ, ಡ್ರೆಸ್ ಗೆ ಹಾಕುವ ಸಾಕ್ಸನ್ನು ಜಿಮ್ ಅಥವಾ ಟೆನ್ನಿಸ್ ಆಡಲು ಬಳಸದೇ ಬೆವರನ್ನು ಹೀರುವ ಕಾಟನ್ ಸಾಕ್ಸ್ ಬಳಸಿ. ನಿಮ್ಮ ಪಾದದ ರಕ್ಷಣೆಯೂ ಅಷ್ಟೇ ಮುಖ್ಯ, ಅದರಿಂದ ಯಾವ ವಾಸನೆಯೂ ಬರದೇ ಇರಲಿ, ನಿಮಗೆ ಏನೇ ತೊಂದರೆ ಇದ್ದರು ತಕ್ಷಣ ಸಂಬಂಧಿಸಿದ ಡಾಕ್ಟರನ್ನು ಕಂಡು ಚಿಕಿತ್ಸೆ ಪಡೆಯಿರಿ.

ಎಷ್ಟೋ ಜನರಿಗೆ ಬಾಯಿಯಿಂದ ಸಹಿಸಲಾಗದ ವಾಸನೆಯೂ ಬರುತ್ತದೆ, ಅವರವರ ವಾಸನೆ ಅವರಿಗೆ ಅರಿವಿಗೆ ಬರದಿದ್ದರೂ ಮೀಟಿಂಗ್‌ಗಳಲ್ಲಿ, ಸಹೋದ್ಯೋಗಿಗಳ ಜೊತೆ ಮಾತನಾಡುತ್ತಿರುವಾಗ ನಾನು ಬೇಕಾದಷ್ಟು ಜನರ ಬಾಯಿಯಿಂದ ವಾಸನೆ ಬರೋದನ್ನು ಗಮನಿಸಿದ್ದೇನೆ. ಬಾಯಿಯಿಂದ ಕೆಟ್ಟ ವಾಸನೆ ಏಕೆ ಬರುತ್ತದೆ ಎನ್ನುವುದಕ್ಕೆ ಹಲವಾರು ಕಾರಣಗಳಿವೆ - ನಾವು ಊಟದಲ್ಲಿ ಬಳಸುವ ಮಸಾಲೆ ಪದಾರ್ಥಗಳಿರಬಹುದು, ಹಸಿ ಈರುಳ್ಳಿ ಇರಬಹುದು, ದಂತ ಪಂಕ್ತಿಗಳನ್ನು ಫ್ಲಾಸ್ ಮಾಡದೇ ಅದರ ಮಧ್ಯೆ ತುಂಬಿಕೊಂಡ ಹಿಟ್ಟಿನಿಂದಿರಬಹುದು, ಪ್ರತಿಯೊಬ್ಬರೂ ಆಯಾಯ ಪದಾರ್ಥವನ್ನು ಹೇಗೆ ಜೀರ್ಣಿಸಿಕೊಳ್ಳುತ್ತಾರೆ ಎನ್ನುವುದಿರಬಹುದು ಅಥವಾ ಡ್ರೈ ಮೌಥ್ ಇರಬಹುದು. ನಿಮ್ಮ ವಾಸನೆಯ ಕಾರಣವನ್ನು ಕಂಡು ಹಿಡಿದು ಅದಕ್ಕೆ ಕೂಡಲೇ ಪರಿಹಾರವನ್ನು ಹುಡುಕಿಕೊಳ್ಳುವುದು ಒಳ್ಳೆಯದು. ನಾನು ಮೊದ ಮೊದಲು ಫ್ಲಾಸ್ ಮಾಡಲು ಹಿಂಜರಿಯುತ್ತಿದ್ದೆ, ಈಗ ಅದು ಹಲ್ಲು ತಿಕ್ಕುವಷ್ಟೇ ಸಹಜವಾಗಿದೆ, ದಿನಕ್ಕೊಮ್ಮೆ ಫ್ಲಾಸ್ ಮಾಡುವುದು ಬಹಳ ಒಳ್ಳೆಯದು. ದಿನವಿಡೀ ಆಗಾಗ್ಗೆ ನೀರು ಸಿಪ್ ಮಾಡುತ್ತಿರಿ, ಬಾಯಿ ಒಣಗಿಸಿಕೊಳ್ಳಬೇಡಿ. ಮಧ್ಯಾಹ್ನ ಊಟದ ಹೊತ್ತಿಗೆ ಹಸಿ ಈರುಳ್ಳಿಯ ಬಳಕೆಯನ್ನು ಕಡಿಮೆ ಮಾಡಿ ನೋಡಿ. ಅಥವಾ ಮಧ್ಯಾಹ್ನ ಊಟದ ನಂತರ ಆಫೀಸಿನಲ್ಲಿ ಒಮ್ಮೆ ಬ್ರಷ್ ಮಾಡಿ ನೋಡಿ. ಚೂಯಿಂಗ್ ಗಮ್ ಅಥವಾ ಮೌಥ್ ವಾಷ್ ಕೂಡಾ ಸಹಾಯ ಮಾಡಬಲ್ಲದು. ಹೀಗೆ ನಿಮ್ಮ ವಾಸನೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿಯೇ. Believe me, it makes a lot of difference!

ನಾವು ಹೇಗೆ ಡ್ರೆಸ್ ಮಾಡುತ್ತೇವೆ ಅನ್ನೋದು ನಮ್ಮ ನೆರೆಹೊರೆಗೆ ತಕ್ಕಂತೆ ಇರಲಿ. ನನ್ನ ಮುಸ್ಲಿಮ್ ಸ್ನೇಹಿತರು ಸ್ವಲ್ಪ ಹೆಚ್ಚಾಗೇ ಅತ್ತರನ್ನು (scent, perfume) ಬಳಸುತ್ತಾರೆ ಅನ್ನೋದು ನನಗೆ ಗೊತ್ತಿರೋ ವಿಷಯವೇ, ಹಾಗೇ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಧಿ ವಿಧಾನಗಳಿವೆ. ನೀವು ನಿಮ್ಮ ನೆರೆಹೊರೆಗೆ ತಕ್ಕಂತೆ ನಿಮ್ಮದೇ ಆದ ವಿಧಾನವನ್ನು ಬಳಸಿ ಹಾಗೂ ರೂಢಿಸಿಕೊಳ್ಳಿ.

ಯಾವುದನ್ನು ಮರೆತರೂ dress (and smell) for success! ಅನ್ನೋದನ್ನ ಮರೆಯಬೇಡಿ.

ಮುಂದಿನ ಶನಿವಾರ:
9) When is the good time for job search?
10) What you should say to the recruiters?

Saturday, September 02, 2006

ಮುಂದಿನವಾರ ಮುಂದುವರೆಯುತ್ತದೆ...

ಕ್ಷಮಿಸಿ, ನಾಲ್ಕನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾನು ಭಾಗವಹಿಸುತ್ತಿರುವುದರಿಂದ ಈ ವಾರದ ಕಂತನ್ನು ಬರೆಯಲಾಗಲಿಲ್ಲ.'ದಾರಿ ದೀಪ'ದ ಕಂತನ್ನು ಬರುವ ಶನಿವಾರ ಬರೆಯುತ್ತೇನೆ.

Saturday, August 26, 2006

ನಿಮ್ಮನ್ನು ನೀವು ಮೆಚ್ಚಿಸುವ ವಿಧಾನ - ಭಾಗ ೧

8) How to dress and "smell" for success!

ಎರಡು ಅಂಶಗಳನ್ನು ಮೊದಲೇ ಹೇಳಿ ಬಿಟ್ಟರೆ ಒಳ್ಳೆಯದು: ೧) ನೀವು ಏನು ಮಾಡುತ್ತೀರಿ, ಬಿಡುತ್ತೀರಿ ಎನ್ನುವುದು ನಿಮಗೇ ಬಿಟ್ಟದ್ದು, ನಿಮ್ಮ ಬಗ್ಗೆ ಯೋಚಿಸಲು ಉಳಿದವರಿಗೆ ಪುರುಸ್ತೊತ್ತಿಲ್ಲ; ೨) ನೀವು ಏನನ್ನು ತೊಟ್ಟುಕೊಂಡಿದ್ದೀರಿ, ಹೇಗೆ ಮಾತನಾಡುತ್ತೀರಿ, ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧಾರಿತವಾಗುತ್ತದೆ.

ಮೇಲಿನ ಹೇಳಿಕೆಗಳಲ್ಲಿ ೧) ಮತ್ತು ೨) ಒಂದಕ್ಕೊಂದು contradictory ಆಗಿ ಕಾಣುತ್ತಿವೆಯೇ? ಹಾಗೆ ಕಾಣಲಿ ಎಂಬುದೇ ನನ್ನ ಉದ್ದೇಶ!

ನಾನು ಅಮೇರಿಕೆಗೆ ಬಂದ ಹೊಸತರಲ್ಲಿ ನನ್ನ ಸಹೋದ್ಯೋಗಿ ಕೆನ್ ಲೆನರ್ಡ್ (Ken Leonard) ನನಗೆ ಸಾಕಷ್ಟು ವಿಷಯಗಳಲ್ಲಿ ಮಾರ್ಗದರ್ಶಿಯಾಗಿದ್ದ. ಅವನೇನೂ ನನಗೆ ಕಲಿಸಬೇಕು ಎಂದು ಕಲಿಸುತ್ತಿರಲಿಲ್ಲ, ಅವನು ಹೇಳುವ ವಿಷಯಗಳಲ್ಲಿ ನನಗೆ ಸಾಕಷ್ಟು ಕ್ಲೂ ಸಿಗುತ್ತಿದ್ದವು. ಒಂದು ದಿನ ಮುಂಜಾನೆ ಕಾಫಿ ಕುಡಿಯಲು ಹೋಗುತ್ತಿರುವಾಗ ಮಧ್ಯೆ ನಮ್ಮ ಆಫೀಸಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಒಬ್ಬರ ಪರಿಚಯವನ್ನು ಕೆನ್ ಮಾಡಿಕೊಟ್ಟ - ಹೊಸದಾಗಿ ಅಂದರೆ ಒಂದು ವರ್ಷದ ಒಳಗೆ. 'ನಾವೆಲ್ಲರೂ ಬಿಸಿನೆಸ್ ಕ್ಯಾಷುವಲ್ ದಿರಿಸಿನಲ್ಲಿದ್ದರೆ ಆ ಮನುಷ್ಯ ಯಾವಾಗಲೂ ಸೂಟ್ ತೊಟ್ಟಿರುತ್ತಾನೆ, ಅವನು ಏನು ಮಾಡುತ್ತಾನೋ ಬಿಡುತ್ತಾನೋ ನನಗಂತೂ ಗೊತ್ತಿಲ್ಲ, ಆದರೆ ಅವನು ಬಂದಂದಿನಿಂದ ಮ್ಯಾನೇಜ್‌ಮೆಂಟ್ ಕ್ಯಾಡರ್ ನಲ್ಲಿ ಮೇಲೇರುತ್ತಲೇ ಇದ್ದಾನೆ' ಎಂದು ನಂತರ ಹೇಳಿದ, ನನಗೇನೂ ಅನ್ನಿಸಲಿಲ್ಲ, ನಾನು ಆ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟೆ.

ಆದರೆ ಅಂದಿನಿಂದ ಯಾರು ಯಾರು ಏನನ್ನು ತೊಡುತ್ತಾರೆ, ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನೆಲ್ಲ ಸೂಕ್ಷ್ಮವಾಗಿ ಗಮನಿಸತೊಡಗಿದೆ. ಮುಂದೆ ಕೆನ್ ಕೆಲಸವನ್ನು ಬಿಟ್ಟು ಮತ್ತೆಲ್ಲೋ ಹೋದ, ನಾನೂ ಆ ಕಂಪನಿಯನ್ನು ಬಿಟ್ಟು ಬೇರೊಂದನ್ನು ಸೇರಿಕೊಂಡೆ.

ಈಗ ಸ್ವಲ್ಪ ಕಾಲ ಹಿಂದೆ ಹೋಗೋಣ - ನಾವೆಲ್ಲರೂ ಹೈಸ್ಕೂಲು ಮುಗಿಸಿ ಕಾಲೇಜು ಸೇರಿದಾಗ, ಪಿಯುಸಿ ಮುಗಿಸಿ ಡಿಗ್ರಿ ಸೇರಿಕೊಂಡಾಗ, ಮುಂದೆ ಕೆಲಸಕ್ಕೆ ಸೇರಿಕೊಂಡಾಗ ನಮ್ಮಲ್ಲೆಲ್ಲಾ ಆದ ಬದಲಾವಣೆಗಳನ್ನು ನಾವು ಗುರುತಿಸಿಕೊಂಡಿದ್ದೇವೆಯೇ? ನಾವು ಹಲ್ಲುಜ್ಜುವುದನ್ನು ಹೇಗೆ ಕಲಿತುಕೊಂಡೆವೋ, ಶೇವ್ ಮಾಡುವುದನ್ನು ಯಾರಿಂದ ಕಲಿತೆವೋ, ಮುಖಕ್ಕೆ ಮೇಕಪ್ ತೀಡುವುದನ್ನು ಎಲ್ಲಿಂದ ಶುರು ಮಾಡಿದೆವೋ ಎಂದೆಲ್ಲಾ ತಿರುಗಿ ನೋಡುತ್ತಾ ಹೋದಾಗ ನಾವು ಆಫೀಸಿಗೆ ಯಾವ ರೀತಿಯ ಬಟ್ಟೆಗಳನ್ನು ತೊಡುತ್ತೇವೆ, ಸಂದರ್ಶನಗಳಿಗೆ ಯಾವ ರೀತಿಯ ಬಟ್ಟೆಯನ್ನು ತೊಡಬೇಕು ಎನ್ನುವುದನ್ನೆಲ್ಲ ಹೇಗೆ ಕಲಿತೆವು, ಯಾರು ಹೇಳಿಕೊಟ್ಟರು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯವಿದ್ದಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಿ ನಾವು ನಮ್ಮನ್ನು ಹೆಚ್ಚಿನ ಮಟ್ಟದಲ್ಲಿ marketing ಮಾಡಿಕೊಳ್ಳುವುದೇ ಈ ಬರಹದ ಉದ್ದೇಶ. ನಾವು ಅನುಸರಿಸುವ ರೀತಿ-ನೀತಿಗಳು ನಮಗೆ ಅಭ್ಯಾಸವಾಗಿ ಹೋಗಿವೆ, ಅವು ನಮ್ಮ ಸ್ವಭಾವದ ಒಂದು ಭಾಗವಾಗಿ ಹೋಗಿರೋದರಿಂದ ಬದಲಾವಣೆಯೇನಾದರೂ ಮಾಡಬೇಕಾಗಿ ಬಂದರೆ ಅಂತಹ ಬದಲಾವಣೆಗಳು ಸಾಕಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬರುತ್ತದೆ.

ಈಗ ನಾವು ತೊಡುವ ಶೂಸ್ ನಿಂದ ಆರಂಭಿಸೋಣ - ಗಂಡಸರಿಗೆ ಇವು ಕೆಲವು ಕೆಲವು ಬಣ್ಣಗಳಲ್ಲಿ ಮಾತ್ರ ಲಭ್ಯ, ಕಪ್ಪು, ಕಂದು (tan), ತಿಳಿ ಹಳದಿ, ಇನ್ನೇನೇ ಬಣ್ಣಗಳಿದ್ದರೂ - ಅವುಗಳನ್ನೆಲ್ಲ ನ್ಯೂಟ್ರಲ್ ಗುಂಪಿಗೆ ಸೇರಿಸೋಣ (ಶೂ ಪಾಲಿಷ್ ಸಿಗುವುದು ಹಾಗೆ ಮಾತ್ರ ತಾನೆ), ಅದೇ ಹೆಂಗಸರಿಗಾದರೆ ಇನ್ನೊಂದಿಷ್ಟು ಬಣ್ಣಗಳನ್ನು ಸೇರಿಸಬಹುದು, ಆದರೆ ಅವರು ಶೂ ಪಾಲಿಷ್ ಮಾಡುತ್ತಾರಾ ಬಿಡುತ್ತಾರಾ ಅನ್ನೋದನ್ನು ಅವರಿಗೇ ಬಿಡೋಣ.

ರೂಲ್ ನಂಬರ್ ೧: ಬಿಸಿನೆಸ್ ಕ್ಯಾಷುಯಲ್, ಅಥವಾ ಡ್ರೆಸ್ (ಫಾರ್ಮಲ್) ವೇರ್‌ನ ಇತಿಮಿತಿಯಲ್ಲಿ - ನಿಮ್ಮ ಶೂಸ್ ಬಣ್ಣ ಹಾಗೂ ನೀವು ತೊಡುವ ಬೆಲ್ಟ್ ಬಣ್ಣ ಒಂದೇ ಆಗಿರಬೇಕು.
ರೂಲ್ ನಂಬರ್ ೨: ನೀವು ಧರಿಸುವ ಫ್ಯಾಂಟ್ ಬಣ್ಣ ಹಾಗೂ ನೀವು ಧರಿಸುವ ಸಾಕ್ಸ್ ಬಣ್ಣ ಎರಡೂ ಮ್ಯಾಚ್ ಆಗಬೇಕು.

ಇವೆರಡೂ ಬಹಳ ಸರಳವಾದ ರೂಲ್ ಅನ್ನಿಸಬಹುದು, ಇಂದಿನಿಂದ ನೀವೇ ನೋಡುತ್ತಾ ಹೋಗಿ ಎಷ್ಟು ಜನರು ಇದನ್ನು ಫಾಲೋ ಮಾಡುತ್ತಾರೆ ಎಂದು. ಈ ರೂಲ್‌ಗಳನ್ನು ನಾನು ಸೃಷ್ಟಿಸಿಲ್ಲ, ಬಹಳಷ್ಟು ಜನರು ಬಳಸಬಹುದಾದ ರೀತಿ-ನೀತಿ ನನ್ನ ಕಣ್ಣಿಗೆ ಹಾಗೆ ಕಂಡುಬಂದಿದೆ, ಅಷ್ಟೇ.

ರೂಲ್ ನಂಬರ್ ೩: ನೀವು ಇಸ್ತ್ರಿ ಹಾಕಿಸದ ಬಟ್ಟೆಯನ್ನು ಆಫೀಸಿಗಾಗಲೀ, ಸಂದರ್ಶನಕ್ಕಾಗಲೀ ತೊಡಲೇಬೇಡಿ. ನಿಮಗೆ ನಿಮ್ಮ ಬಟ್ಟೆಗಳನ್ನು ಒಗೆದು, ಇಸ್ತ್ರಿ ಹಾಕಿಸಲು ಸಮಯವಿಲ್ಲದಿದ್ದರೆ ಸ್ವಲ್ಪ ಕಾಸು ಬಿಚ್ಚಿ.

ಡಾರ್ಕ್ ಬಣ್ಣದ ಪ್ಯಾಂಟು ಅಥವಾ ಸೂಟಿಗೆ ಲೈಟ್ ಬಣ್ಣದ ಶರ್ಟ್ ಹಾಕಬೇಕು ಎಂದೇನೂ ನಿಯಮವಿಲ್ಲ, ನಿಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ, ನಿಮಗೆ ಇಷ್ಟವಾಗುವ ಯಾವ ಬಣ್ಣದ ಶರ್ಟನ್ನಾದರೂ ಧರಿಸಿ, ಆದರೆ ಹೊಸ ಹೊಸ ಪ್ರಯೋಗಗಳನ್ನು ಇಂಟರ್‌ವ್ಯೂ ದಿನ ಮಾಡದೇ ಅದನ್ನೆಲ್ಲ ಇನ್ಯಾವುದೋ ಒಂದು ದಿನ ಇಟ್ಟುಕೊಳ್ಳಿ.

ರೂಲ್ ನಂಬರ್ ೪: ನೀವು ತೊಡುವ ಟೈ ಬಣ್ಣ ನಿಮ್ಮ ಸೂಟು ಹಾಗು ಶರ್ಟ್ ಎರಡಕ್ಕೂ ಹೊಂದುವಂತಿರಲಿ, ಅಲ್ಲದೇ ಟೈ ಉದ್ದ ಪ್ಯಾಂಟಿನ ಬಕಲ್‌ನ ಕೆಳಭಾಗಕ್ಕೆ ಬರುವಂತಿರಲಿ.

ಥರಾವರಿ ಸೂಟುಗಳು, ಅವುಗಳ ವಿಧದಲ್ಲಿ ಯಾವುದನ್ನು ತೊಡುವುದು, ಬಿಡುವುದು ಎನ್ನುವ ಸಂದೇಹವಿದ್ದರೆ ಸಿಂಗಲ್ ಬ್ರೆಸ್ಟೆಡ್ ಅಥವಾ ಡಬಲ್ ಬ್ರೆಸ್ಟೆಡ್ ಸೂಟು ಯಾವುದಾದರೂ ಆದೀತು. ಆದರೆ ಡಬಲ್ ಬ್ರೆಸ್ಟೆಡ್ ಸೂಟ್ ಇದ್ದರೆ ಅದಕ್ಕೆ ತಕ್ಕಂತೆ ಧರಿಸುವ ಶರ್ಟ್ ಕಾಲರ್ ತುದಿಯಲ್ಲಿ ಬಟನ್ ಇಲ್ಲದಿರಲಿ.

ಇನ್ನು ಪ್ಯಾಂಟಿನ ವಿಷಯಕ್ಕೆ ಬಂದರೆ - ಅದರ ಉದ್ದ ನೀವು ಶೂಸ್ ಧರಿಸಿದ ಮೇಲೆ ನಿಮ್ಮ ಎತ್ತರಕ್ಕೆ ತಕ್ಕನಾಗಿರಲಿ, ಮೇಲಿಂದ ಕೆಳಗೆ ಎಲ್ಲೂ ಬ್ರೇಕ್ ಆಗದೆ ಪ್ಯಾಂಟಿನ ಹೆಮ್ ಶೂಸ್ ಮುಟ್ಟುವಲ್ಲಿ ಒಂದು ಮಡಿಕೆ ಬಿದ್ದರೆ ಸಾಕು. ನಿಮ್ಮ ಪ್ಯಾಂಟಿನಲ್ಲಿ ನೆರಿಗೆ (pleat) ಇದ್ದರೆ ಕೆಳಗೆ ಹೆಮ್ ಹಾಕುವಲ್ಲಿ ಫೋಲ್ಡ್ ಮಾಡಿ ಹೊಲಿದಿದ್ದರೆ ಚೆನ್ನಾಗಿರುತ್ತೆ, ಇಲ್ಲವೆಂದರೂ ಪರವಾಗಿಲ್ಲ.

ಇನ್ನು ಕೊನೆಯದಾಗಿ, ಅದು ಶುಕ್ರವಾರವಿರಲಿ, ಶನಿವಾರವಿರಲಿ ಆಫೀಸಿನ ಕೆಲಸದಲ್ಲಿರುವಾಗ ಜೀನ್ಸ್ ಹಾಗೂ ಸ್ನೀಕರ್ಸ್ ಅನ್ನು ತೊಡಲೇಬೇಡಿ - ಬುಸಿನೆಸ್ ಕ್ಯಾಷುವಲ್ ಬಟ್ಟೆಗಳಲ್ಲಿ ಜೀನ್ಸ್ ಬರುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು ಅಲ್ಲಿ-ಇಲ್ಲಿ ಓದಿದಂತೆ ಜೀನ್ಸ್ ತೊಡುವುದನ್ನು ಯಾರೂ ರೆಕಮಂಡ್ ಮಾಡಿದ ಹಾಗಿಲ್ಲ.

ಇನ್ನು ಮುಂದಿನವಾರಗಳಲ್ಲಿ ಡ್ರೆಸ್ ಮಾಡುವುದರ ಬಗ್ಗೆ ಮುಂದುವರಿಸುತ್ತೇನೆ, ಜೊತೆಯಲ್ಲಿ ವಾಸನೆಯ ಬಗ್ಗೆಯೂ ಚರ್ಚಿಸೋಣ.

Friday, August 18, 2006

ದುಡ್ಡೇ ದೊಡ್ಡಪ್ಪ, ಆದ್ರೂ...

7) How much money are you looking for?

ಹಣ ಅಂದ್ರೆ ಯಾರಿಗೆ ಬೇಡ? ಆದರೂ ಸಹ ಈ ಪ್ರಶ್ನೆಗೆ ಉತ್ತರವನ್ನು ಮೊದಲೇ ಯೋಚಿಸಿಕೊಳ್ಳುವುದು ಒಳ್ಳೆಯದು, ಇಲ್ಲವೆಂದಾದರೆ ಕೈಗೆ ಬಂದದ್ದು ಬಾಯಿಗೆ ಬಾರದೇ ಹೋದೀತು. ಈ ಪ್ರಶ್ನೆಗೆ ಉತ್ತರ ಬಹಳ ಸುಲಭ, ಅದರೆ ಪ್ರತಿಯೊಬ್ಬರ ಸ್ಥಿತಿಗತಿಯನ್ನು ಅವಲಂಭಿಸಿ ಹೇಳಬೇಕಾಗುತ್ತೆ - ಕೆಳಗಿನ ಉದಾಹರಣೆಗಳನ್ನು ನೋಡಿ, ಅವುಗಳಲ್ಲಿ ನಿಮಗೆ ಅನುಕೂಲವಾಗುವುದನ್ನು ಬಳಸಿಕೊಳ್ಳಬಹುದು. ನಿಮ್ಮ ತಲೆಯಲ್ಲಿ ಹಲವಾರು ಆಲೋಚನೆಗಳು ಓಡಿದ ಹಾಗೆ ನಿಮ್ಮನ್ನು ಸಂದರ್ಶಿಸುವವರ ತಲೆಯಲ್ಲಿಯೂ ಹಲವಾರು ಆಲೋಚನೆಗಳು ಹುಟ್ಟುತ್ತಿರುತ್ತವೆ ಎನ್ನುವುದನ್ನು ಮರೆಯಬೇಡಿ. ಬೇರೇನಿಲ್ಲವೆಂದರೂ ನನಗೇ ಇಂತಿಷ್ಟೇ ಹಣಬೇಕು, ನನಗೆ ಪ್ರೊಮೋಷನ್ ಬೇಕು ಎಂದು ಪಟ್ಟು ಹಿಡಿಯಬೇಡಿ. ನಿಮ್ಮನ್ನು ಉದ್ದೇಶಿಸಿ 'If we hire you, how much do you want?' ಎಂದು ಕೇಳಿದರೂ ಸಹ ನೀವು ಇಂತಿಷ್ಟೇ ಎಂದು ಡಾಲರ್ ಅಥವಾ ರುಪಾಯಿಗಳಲ್ಲಿ ಹೇಳಬೇಕಾಗಿಲ್ಲ, ಬದಲಿಗೆ ಉತ್ತರವಾಗಿ I will accept any competitive offer, ಅಥವಾ I am fine with current market rate ಎಂದಷ್ಟೇ ಸೂಚ್ಯವಾಗಿ ಹೇಳಿ.

ಅಲ್ಲದೇ ನೀವು ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರಬಹುದು, ವೈದ್ಯರಿರಬಹುದು, ಆಳವಾದ ಸಮುದ್ರದಲ್ಲಿ ಮುತು-ರತ್ನಗಳನ್ನು ಶೋಧಿಸುವವರಿರಬಹುದು, ಪರ್ವತಾರೋಹಿಗಳಿರಬಹುದು, ರೂಪಾಯಿಗೆ ಹನ್ನೆರಡು ಜನ ಸಿಗುವ ಯಾವುದೋ ಸುಲಭವಾದ ಕೆಲಸ ಮಾಡುತ್ತಿರಬಹುದು ಅಥವಾ ಪ್ರಪಂಚದಲ್ಲಿ ಈ ಬಗೆಯ ಕೆಲಸ ಮಾಡುವವರಲ್ಲಿ ನೀವೊಬ್ಬರೇ ಇದ್ದಿರಬಹುದು. ನೀವು ಬೇಡುವ ಸಂಬಳ/ಹಣ ನಿಮ್ಮ ಯೋಗ್ಯತೆ, ಈಗಿನ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬೆಲೆ ಹಾಗೂ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರುವ ಕಂಪನಿ, ಮುಂತಾದವುಗಳ ಮೇಲೆ ಅವಲಂಭಿತವಾಗುತ್ತದೆ. ಹಾಗೂ ನಿಮಗೆ ಎಷ್ಟು ಹಣ ಬೇಕು ಎನ್ನುವುದನ್ನು ಸಂದರ್ಶನದ ಯಾವ ಹಂತದಲ್ಲಿ ಕೇಳಿದ್ದಾರೆನ್ನೆವುದರ ಮೇಲೂ ತೀರ್ಮಾನವಾಗುತ್ತದೆ - ಅದು ಮೊದಲ ಸುತ್ತಿನ ಹ್ಯೂಮನ್ ರಿಸೋರ್ಸ್ ನವರ ಕಾಲ್ ಇದ್ದಿರಬಹುದು ಅಥವಾ ಏಳು ಸುತ್ತು ಸಂದರ್ಶನವಾದ ಬಳಿಕ ಕೊನೆಯ ಹಂತದಲ್ಲಿ ಹಣಕಾಸಿನ ವಿಷಯವನ್ನು ಮಾತನಾಡುತ್ತಿರಬಹುದು.

ಇನ್ನೂ ಎರಡು ವಿಷಯವನ್ನು ನೆನಪಿಡಿ: ನಿಮ್ಮ ಸಂಬಳ - ಪ್ರತಿ ಘಂಟೆಗೆ ಇಷ್ಟು ಅಥವಾ ವರ್ಷ/ತಿಂಗಳಿಗೆ ಇಷ್ಟು ಎಂಬುದರ ಜೊತೆಯಲ್ಲಿ ಎನೇನು ಅನುಕೂಲಗಳು (benefits) ಸೇರಿವೆ (ವರ್ಷದ ರಜಾ ಸಮಯ, ಹೆಲ್ತ್, ಡೆಂಟಲ್ ಇನ್ಷೂರೆನ್ಸ್, ಪ್ರಾವಿಡೆಂಟ್ ಫಂಡ್, ರಿಟೈರ್‌ಮೆಂಟ್ ಫಂಡ್ ಕಾಂಟ್ರಿಬ್ಯೂಷನ್, ಸ್ಟಾಕ್ ಆಪ್ಷನ್ಸ್, ಇತ್ಯಾದಿ) ಎನ್ನುವುದೂ ಬಹಳ ಮುಖ್ಯ, ಕಂಪನಿ ಕೊಡುವ ಸವಲತ್ತುಗಳನ್ನು ಸಮನಾಂತರ ಡಾಲರ್/ರೂಪಾಯಿ ಬೆಲೆಗೆ ಪರಿವರ್ತಿಸಿ ಅದರ ಮೌಲ್ಯವನ್ನು ತೂಗಬಹುದು. ಹಾಗೂ ನೀವು ಯಾವ ಊರು/ರಾಜ್ಯದಲ್ಲಿ ಕೆಲಸ ಮಾಡುತ್ತೀರಿ, ಅಲ್ಲಿ ಟ್ಯಾಕ್ಸ್ ಪರ್ಸೆಂಟ್ ಎಷ್ಟಿದೆ ಎನ್ನುವುದೂ ಮುಖ್ಯ - ಈ ನಿಟ್ಟಿನಲ್ಲಿ ಉದಾಹರಣೆಗೆ ಹೇಳುವುದಾದರೆ ನನ್ನ ಪ್ರಕಾರ ನ್ಯೂ ಯಾರ್ಕ್ ಸಿಟಿಯಲ್ಲಿ ವರ್ಷಕ್ಕೆ 75,000 ಪಡೆದು ಕೆಲಸ ಮಾಡುವುದರ ಬದಲಿಗೆ ದಕ್ಷಿಣ ನ್ಯೂ ಜೆರ್ಸಿ ಅಥವಾ ವರ್ಜೀನಿಯಾದಲ್ಲಿ 60,000 ಕೆಲಸ ಮಾಡಬಹುದೋ ಏನೋ, cost of living ಜೊತೆಗೆ ವರ್ಷದ ಕೊನೆಯಲ್ಲಿ ಫೈಲ್ ಮಾಡಿ ಕಟ್ಟಬೇಕಾದ ಟ್ಯಾಕ್ಸ್‌ನ್ನೂ ಸಹ ಮನಸ್ಸಿನ್ನಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ನಿಮ್ಮ ಸಂದರ್ಶನ ನಡೆಯುವುದಕ್ಕಿಂತ ಮೊದಲು ನಿಮ್ಮ ಈಗಿನ/ಹಿಂದಿನ ಸಂಬಳದ ಬಗ್ಗೆ ಆ ಕಡೆಯಿಂದ ನೇರವಾಗಿ ಪ್ರಶ್ನೆ ಬಂದಾಗ ನಿಮಗೆ ಬೇರೆ ವಿಧಿಯೇ ಇಲ್ಲದೇ ನೀವು ನಿಜವಾದ ಉತ್ತರವನ್ನು ಕೊಡಲೇಬೇಕಾಗುತ್ತದೆ (ಸುಳ್ಳನ್ನು ಮಾತ್ರ ಹೇಳಲು ಹೋಗಬೇಡಿ), ಈಗ ಸಂಬಳ ಇಂತಿಷ್ಟು ಬರುತ್ತಿದೆ ಎಂದು ಹೇಳಿದ ಬಳಿಕವೂ ನೀವು ಚೌಕಾಶಿ ಮಾಡಿ ನಿಮಗೆ ಬೇಕಾದ ಸಂಬಳವನ್ನು ಹೊಸ ಕೆಲಸದಲ್ಲಿ ಪಡೆಯಬಹುದು - ಆದರೆ ಅದಕ್ಕೆ ಬೇರೊಂದು ಸೂತ್ರವನ್ನು ಬಳಸಬೇಕಾಗುತ್ತದೆ. ಅಲ್ಲದೇ ನಿಮ್ಮ ಈಗಿನ ಸಂಬಳ ಆ ಕಡೆಯಿಂದ ಮಾತನಾಡುತ್ತಿರುವ ವ್ಯಕ್ತಿಯ ಲೆಕ್ಕಾಚಾರದ ಪ್ರಕಾರ ತುಂಬಾ ಕಡಿಮೆ ಅಥವಾ ಹೆಚ್ಚು ಎನ್ನಿಸಿದರೆ ನಿಮಗೆ ಮುಂದೆ ಹೋಗಲು ಸಾಧ್ಯವೇ ಇಲ್ಲದಿರಬಹುದು. ಆದ್ದರಿಂದಲೇ ನೀವು ಇರುವ ವಿಷಯವನ್ನು ಇದ್ದ ಹಾಗೆ ಹೇಳಿ ನಿಮ್ಮ ನಿರೀಕ್ಷೆ ಏನು ಎನ್ನುವುದನ್ನು ಮೊದಲೇ ಯೋಚಿಸಿಕೊಂಡಿರಿ. ಆದರೆ ಒಂದಂತೂ ಗ್ಯಾರಂಟಿ, ನೇರವಾದ ಪ್ರಶ್ನೆಯಿಂದ ನಿಮ್ಮ ಈಗಿನ ಸಂಬಳವನ್ನು ತಿಳಿದುಕೊಂಡ ವ್ಯಕ್ತಿಯಿಂದ ನೀವು ಬಹಳಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗುವುದಿಲ್ಲ (unless you change something), ಅಬ್ಬಬ್ಬಾ ಎಂದರೆ ಹತ್ತು-ಹದಿನೈದು ಶೇಕಡಾ ಹೆಚ್ಚಾಗಬಹುದು. ಅದಕ್ಕಿಂತ ಹೆಚ್ಚು ಕೇಳುವುದೆಂದರೆ ನೀವು ನಿಮ್ಮನ್ನು prove ಮಾಡಬೇಕಾಗುತ್ತದೆ ಅಥವಾ ಹೆಚ್ಚು ಕೇಳುವುದಕ್ಕೆ ಬೇರೇನಾದರೂ ಸಬೂಬು ಕೊಡಬೇಕಾಗುತ್ತದೆ - ಇತ್ತೀಚೆಗೆ ಪಡೆದ ಡಿಗ್ರಿಯೋ, ಸರ್ಟಿಫಿಕೇಟೋ, ಸ್ಪೆಷಲೈಜೇಷನ್ನೋ, ಇತ್ಯಾದಿ.

ಅಮೇರಿಕದಲ್ಲಿ ನಾನು ನೋಡಿದ ಹಾಗೆ, ಉದಾಹರಣೆಗೆ ಹೇಳುವುದಾದರೆ ನರ್ಸಿಂಗ್, ಫಾರ್ಮಸಿ, ವೈದ್ಯಕೀಯದಲ್ಲಿ ಬೇಕಾದಷ್ಟು ಬೇಡಿಕೆ ಇದೆ, ಇಂತಹ ಕೆಲಸಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ನೀವು upper hand ನಲ್ಲ್ರಿರುತ್ತೀರಿ, ಅದೇ ಇನ್‌ಫರ್‌ಮೇಷನ್ ‍ಟೆಕ್ನಾಲಜಿಯ ಮೈನ್‌ಫ್ರೇಮ್ ವಿಭಾಗದಲ್ಲಿ ಅಷ್ಟೊಂದು ಬೇಡಿಕೆ ಇಲ್ಲ, ಆಗ ಅವರು ಹೇಳಿದಂತೆ ನೀವು ಕೇಳಬೇಕಾದ ಸಂದರ್ಭ ಬರಬಹುದು.

ನನ್ನ ಪ್ರಕಾರ ನಿಮ್ಮನ್ನು ಸಂದರ್ಶನ ಮಾಡಿದವರು ನಿಮ್ಮ ಯೋಗ್ಯತೆಗೆ ತಕ್ಕಂತೆ ಇಂತಿಷ್ಟು ಕೊಡುತ್ತೇವೆ ಎಂದು ನಿರ್ಧರಿಸುವುದು ಸರಿ, ಪ್ರತಿಯೊಂದು ಕೆಲಸದ ಸಂಬಳದಲ್ಲೂ ಒಂದು ರೇಂಜ್ ಇರುತ್ತದೆ, ಅಕಸ್ಮಾತ್ ನಿಮ್ಮನ್ನು ಆ ರೇಂಜ್‌ನ ಕೆಳ ಮಟ್ಟದಲ್ಲಿ ಕೆಲಸಕ್ಕೆ ಬರುವಂತೆ ಕೇಳಿದರೆ, ನೀವು ಸ್ವಲ್ಪ ಯೋಚಿಸಬೇಕಾಗಿ ಬರಬಹುದು. ಆದರೆ ಕೆಲಸಕ್ಕೆ ಸೇರುವ ಕಂಪನಿಯ ಪಾಲಿಸಿಯ ಮೇಲೆ ನಿರ್ಧಾರಿತವಾಗುವಂತೆ ಆಲೋಚಿಸಿ - ಉದಾಹರಣೆಗೆ ನೀವು ಕೆಲಸಕ್ಕೆ ಸೇರುವ ಕಂಪನಿಯಲ್ಲಿ ವರ್ಷಕ್ಕೆ ಎರಡು ಸಾರಿ ಯೋಗ್ಯತೆಗನುಸಾರವಾಗಿ ಸಂಬಳದಲ್ಲಿ ಹೆಚ್ಚಳ, ಭಡ್ತಿಗಳನ್ನು ಕೊಡುತ್ತಾರೆಂದರೆ ನೀವು ಮೇಲೆ ಬರಲು ಬಹಳಷ್ಟು ಅವಕಾಶಗಳಿರುತ್ತವೆ, ಅದರ ಬದಲಿಗೆ ಇವತ್ತು ಸೇರು, ಇನ್ನು ಐದು ವರ್ಷಗಳಾದ ಮೇಲೆ ನೋಡೋಣ ಎಂದರೆ ಬಹಳ ಕಷ್ಟ.

ಈ ವಿಷಯವನ್ನು ಮೊದಲೇ ಬರೆಯಬೇಕಾಗಿತ್ತು - ನಿಮ್ಮ ಸಂಬಳವನ್ನು ಬಹು ಮುಖ್ಯವಾಗಿ ನಿರ್ಧಾರ ಮಾಡಬೇಕಾದದ್ದು ನಿಮ್ಮ ಯೋಗ್ಯತೆಗಿಂತಲೂ ನಿಮ್ಮ ಅಗತ್ಯ. ನಿಮಗೆ ಇದ್ದ ಕೆಲಸ ಕೈ ತಪ್ಪಿ ಹೋಗಿ ಆರು ತಿಂಗಳಾಗಿ, ಮನೆಯಲ್ಲಿ ತಿನ್ನುವ ಕೈ-ಬಾಯಿಗಳಿಗೆ ಹಿಟ್ಟಿಲ್ಲದೇ ಹೋದಾಗ, ಕ್ರೆಡಿಟ್ ಕಾರ್ಡ್ ಕಂಪನಿಯವರು ದಿನಕ್ಕೊಮ್ಮೆ ಫೋನ್ ಮಾಡಿ ಹಿಂಸಿಸುವಾಗ ಬೇರೆ ವಿಧಿಯಿಲ್ಲದೇ ಅವರು ಕೊಟ್ಟಷ್ಟನ್ನು ತೆಗೆದುಕೊಳ್ಳಬೇಕಾಗಿ ಬರುತ್ತದೆ. ಬದಲಿಗೆ 'ಊರಲ್ಲಿ ಗದ್ದೇ ಇದೆ, ಬ್ಯಾಂಕಲ್ಲಿ ದುಡ್ಡಿದೆ - ನನಗೇನ್ ಕಡಿಮೆ' ಅನ್ನೋದು ನಿಮ್ಮ ಸ್ಟೇಟ್‌ಮೆಂಟ್ ಆದರೆ ಅವರು ಕೊಡುವುದಕ್ಕಿಂತ ಎರಡು ಪಟ್ಟು ಕೇಳಿ, ಯಾರು ಬೇಡಾ ಅಂದೋರು?

ನಿಮ್ಮ ಭವಿಷ್ಯದ ಸಂಬಳದ ಬಗ್ಗೆ ಪ್ರಶ್ನೆಯನ್ನು ಕೇಳಿದವರು ಯಾರು ಎನ್ನುವುದರ ಮೇಲೂ ನಿಮ್ಮ ಉತ್ತರವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಸುಮ್ಮನೇ ಸ್ಕ್ರೀನಿಂಗ್‌ಗೆಂದು ಎಚ್.ಆರ್. ನವರು ಕೇಳುವುದಕ್ಕೊಂದು ಉತ್ತರ, ಅಂಕೆ-ಸಂಖ್ಯೆಗಳನ್ನು ಬದಲಾಯಿಸಬಲ್ಲ ಅಥಾರಿಟಿ ಇರುವ ಮೇಲಧಿಕಾರಿಗಳಿಗೆ ಮತ್ತೊಂದು ಉತ್ತರ - ಇವೆಲ್ಲವನ್ನು ಮೊದಲೇ ಯೋಚಿಸಿಕೊಂಡಿರಿ. ಸಂಬಳದ ವಿಷಯ ಬಹು ಮುಖ್ಯವಾದದ್ದು ಅದನ್ನು ಯಾವ ಕಾರಣಕ್ಕೂ ಹಗುರವಾಗಿ ತೆಗೆದುಕೊಳ್ಳಬೇಡಿ.

ಕೊನೆಯಲ್ಲಿ, ನಿಮ್ಮ ಈಗಿನ, ಮುಂದಿನ ಅಂಕೆ-ಸಂಖ್ಯೆಗಳನ್ನು ಯಾವ ಕಾರಣಕ್ಕೂ ಸಂದರ್ಶನವಾಗುವ ಮೊದಲು, ನಂತರ ಯಾರಲ್ಲೂ ಹೇಳಿಕೊಳ್ಳಬೇಡಿ. ನಿಮ್ಮ ಸಹೋದ್ಯೋಗಿಗಳಿಗೆ ನಿಮಗೆ ಬರುವ ಸಂಬಳದ ವಿಷಯ ಗೊತ್ತಾಗದಿರುವಂತೆ ನಡೆದುಕೊಳ್ಳಿ - ಸುಮ್ಮನೇ ಅನವಶ್ಯಕ ಗೊಂದಲಗಳನ್ನು ಹುಟ್ಟಿಸಿಕೊಳ್ಳಬೇಡಿ.

***

ಹೆಚ್ಚು ಹಣ ಎಲ್ಲರಿಗೂ ಬೇಕು, ದುಡ್ಡೇ ದೊಡ್ಡಪ್ಪ; ಆದರೂ ಹಣಕಾಸಿನ ವಿಷಯವನ್ನು ಹಗುರವಾಗಿ ಪರಿಗಣಿಸದೇ ವ್ಯವಸ್ಥಿತವಾಗಿ ಸಂಬಾಳಿಸದಿದ್ದಲ್ಲಿ ನೀವು ಸೊರಗುತ್ತೀರಿ, ಕೊರಗುತ್ತೀರಿ - ನೆನಪಿರಲಿ.

***
ಮುಂದಿನ ಶನಿವಾರ:
8) How to dress and "smell" for success! (ಇದರ ಬಗ್ಗೆ ಬರೆದ್ರೆ ಒಂದ್ ಪುಸ್ತಕಾನೇ ಬರೀಬಹುದು, ಎರಡು ಭಾಗಗಳಲ್ಲಿ ಕವರ್ ಮಾಡೋದಕ್ಕೆ ಪ್ರಯತ್ನಿಸ್‌ತೀನಿ)
9) When is the good time for job search?

Saturday, August 12, 2006

ನಿಮ್ಮನ್ನೇಕೆ ಕೆಲಸಕ್ಕೆ ತಗೋಬೇಕು?

ಹಿಂದಿನ ಬರಹಗಳಲ್ಲಿ ರೆಸ್ಯೂಮೆ ಬಗ್ಗೆ ಬರೆದಾಗ ಹಾಗೂ ಕವರ್ ಲೆಟರ್ ಬಗ್ಗೆ ಬರೆದಾಗ 'ರೆಫೆರೆನ್ಸ್' ಬಗ್ಗೆನೂ ಬರೀಬೇಕು ಅಂದುಕೊಂಡಿದ್ದೆ, ಆದರೆ ಎಲ್ಲ ರೀತಿಯ ಕೆಲಸಗಳಲ್ಲೂ ರೆಫೆರೆನ್ಸ್ ಕೇಳೋದಿಲ್ಲ, ಮಾಹಿತಿ ತಂತ್ರಜ್ಞಾನದಲ್ಲಿ ನಾನು ತಿಳಿದುಕೊಂಡ ಮಟ್ಟಿಗೆ ರೆಫೆರೆನ್ಸ್‌ಗಳನ್ನು ಕೇಳಿ ಫಾಲೋ ಅಪ್ ಮಾಡಿದ ಸಂದರ್ಭಗಳು ಕಡಿಮೆ, ಅದೇ ವೈದ್ಯಕೀಯ ಸೇವೆಗೆ ಸಂಬಂಧಿಸಿದ ಕೆಲಸಗಳಲ್ಲಿ ಹೆಚ್ಚೂ ಕಡಿಮೆ ಪ್ರತಿಯೊಂದು ಸಂದರ್ಶನಕ್ಕೆ ಮೊದಲು ಅಥವಾ ನಂತರ 'ರೆಫೆರೆನ್ಸ್'ಗಳನ್ನು ಕೇಳಿಯೇ ಕೇಳುತ್ತಾರೆ.

ನೀವು ಅರಸುತ್ತಿರುವ ಉದ್ಯೋಗಕ್ಕೆ ತಕ್ಕಂತೆ ಸೂಚ್ಯವಾಗಿ ನಿಮ್ಮ ರೆಸ್ಯೂಮೆಯಲ್ಲಿ References are available upon request ಎಂದು ಸೇರಿಸಿ, ಅದಕ್ಕೆ ತಕ್ಕಂತೆ ಮೂರು ಜನರಿಂದ ಐದು ಜನರವರೆಗೆ ರೆಫೆರೆನ್ಸ್‌ಗಳನ್ನು ಕೊಡುವುದಕ್ಕೆ ತಯಾರಾಗಿರಿ. ನೀವು ಕೊಡಬೇಕಾದ ವಿವರವೆಂದರೆ ಅವರ ಹೆಸರು, ಇ-ಮೇಲ್ ವಿಳಾಸ, ಫೋನ್ ನಂಬರ್. ಹಲವು ಕೆಲಸಗಳಲ್ಲಿ ರೆಫೆರೆನ್ಸ್ ಚೆಕ್‌ ಮಾಡುವುದಕ್ಕೋಸ್ಕರವೇ ಒಂದು ಪ್ರಶ್ನಾವಳಿ (questionnaire) ಯನ್ನು ಅವರಿಗೆ ಕಳಿಸಲಾಗುತ್ತೆ, ಇನ್ನು ಕೆಲವು ಕೆಲಸಗಳಲ್ಲಿ ರೆಫೆರೆನ್ಸ್ ಕೊಡುವವರು ಒಂದು ಪುಟದಲ್ಲಿ ನಿಮ್ಮ ಬಗ್ಗೆ ಬರೆದು ಫ್ಯಾಕ್ಸ್ ಅಥವಾ ಮೇಲ್ ಮಾಡಬೇಕಾಗುತ್ತೆ, ಇನ್ನು ಕೆಲವು ಕೆಲಸಗಳಲ್ಲಿ ಫೋನ್ ಮೂಲಕ ಐದು ಹತ್ತು ನಿಮಿಷಗಳಲ್ಲಿ ನಿಮ್ಮ ಬಗ್ಗೆ ಕೇಳಲಾಗುತ್ತೆ, ಇತ್ಯಾದಿ...ವಿವರಗಳೇನೇ ಇರಲಿ ನೀವು ಸಂದರ್ಶನ ಮಾಡುವವರಿಂದ ವಿವರಗಳನ್ನು ಪಡೆದು ನೀವು ರೆಫೆರೆನ್ಸ್ ನೀಡಿದವರಿಗೆ ಮುಂಚಿತವಾಗಿಯೇ ತಿಳಿಸುವುದು ಒಳ್ಳೆಯದು.

ರೆಫೆರೆನ್ಸ್‌ಗೆ ಯಾರನ್ನೆಲ್ಲ ಕೊಡಬಹುದು ಎಂದರೆ ನಿಮ್ಮ ಸಹೋದ್ಯೋಗಿಗಳು (ಆಯ್ಕೆಯಲ್ಲಿ ಸ್ವಲ್ಪ ಹುಷಾರಾಗಿರಿ), ನಿಮ್ಮ ಹಿಂದಿನ ಬಾಸ್‌ಗಳು, ನಿಮ್ಮನ್ನು ಹತ್ತಿರದಿಂದ ಬಲ್ಲ ಪ್ರೊಫೆಸರುಗಳು, ನಿಮ್ಮ ಮ್ಯಾಟ್ರಿಕ್ಸ್ ಪದ್ದತಿಯ ಆರ್ಗನೈಸೇಷನ್ ಚಾರ್ಟ್‌ನಲ್ಲಿರುವ ಉಳಿದ ಡಿಪಾರ್ಟ್‌ಮೆಂಟಿನ ಮುಖ್ಯಸ್ಥರು (ಆಯ್ಕೆಯಲ್ಲಿ ಸ್ವಲ್ಪ ಹುಷಾರಾಗಿರಿ), ಇತ್ಯಾದಿ.

ಈಗ ಮುಖ್ಯ ವಿಷಯಕ್ಕೆ ಬರೋಣ.

೬) ನಿಮ್ಮನ್ನೇಕೆ ಅವರು ಕೆಲಸಕ್ಕೆ ತಗೋಬೇಕು?!

೧೯೯೮ ಮೇ ತಿಂಗಳಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಸೊಲೋಮನ್ ಸ್ಮಿತ್ ಬಾರ್ನಿಯಲ್ಲಿ ನನಗೊಂದು ಟೆಕ್ನಿಕಲ್ ಪೊಸಿಷನ್‌ಗೆ ಇಂಟರ್‌ವ್ಯೂವ್ ಬಂದಿತ್ತು, ಎಂದಿನಂತೆ ತಯಾರಿ ನಡೆಸುತ್ತಿರುವಾಗ ಪಬ್ಲಿಕ್ ಲೈಬ್ರರಿಯಲ್ಲಿ ಯಾವುದೋ ಪುಸ್ತಕವೊಂದರಲ್ಲಿ ತೆಗೆದೊಡನೆ 'Why should we hire you?' ಅನ್ನೋ ಪ್ರಶ್ನೆ ಮುಖಕ್ಕೆ ರಾಚಿತು, ಒಂದು ಐದು ನಿಮಿಷ ಓದಿ ಅದರ ಸ್ವಾರಸ್ಯವನ್ನು ಮನನ ಮಾಡಿಕೊಂಡೆ, ಮರುದಿನ ಇಂಟರ್‌ವ್ಯೂವ್‌ನಲ್ಲಿ ನನಗೆ ಆಶ್ಚರ್ಯವಾಗುವಂತೆ ಅವರು ಕೇಳಿದ ಮೊದಲನೇ ಪ್ರಶ್ನೆಯೇ 'ನಾನೇಕೆ ನಿನ್ನನ್ನು ಈ ಕೆಲಸಕ್ಕೆ ತೆಗೆದುಕೊಳ್ಳಬೇಕು?' ಸ್ವಲ್ಪವಾದರೂ ತಯಾರಿ ನಡೆಸಿದ್ದರಿಂದ ಅಲ್ಲಿ ನಾನು ಕಕ್ಕಾಬಿಕ್ಕಿಯಾಗದೇ ಎಂದಿನ ಲವಲವಿಕೆಯಲ್ಲಿಯೇ ನನ್ನ ಉತ್ತರವನ್ನು ಒಪ್ಪಿಸಿದ್ದೆ! ತದನಂತರ ನನ್ನ ಸಂದರ್ಶನದಲ್ಲಿ ಪಾಸಾಗಿ ಅಲ್ಲಿ ಕೆಲಸಕ್ಕೆ ಕರೆದರೂ ನಾನು ಆ ಕಂಪನಿಯನ್ನು ಸೇರಿಕೊಳ್ಳಲಿಲ್ಲ, ಅದು ಬೇರೆ ವಿಷಯ.

ನೀವು ಈ ಪ್ರಶ್ನೆಗೆ ಏನು/ಹೇಗೆ ಉತ್ತರಿಸುತ್ತೀರ ಎನ್ನುವುದು ಬಹಳ ಮುಖ್ಯ, ಈ ಪ್ರಶ್ನೆಯಲ್ಲಿ ನಿಮ್ಮ Sales pitch ಇರಬೇಕು, ಅಲ್ಲದೇ ನಿಮ್ಮ ಕಮ್ಮೂನಿಕೇಷನ್ ಸ್ಕಿಲ್ಸ್, ಬಾಡಿ ಲಾಂಗ್ವೇಜ್, ಮುಂತಾದವುಗಳನ್ನು ಗಮನಿಸಲಾಗುತ್ತೆ ಅನ್ನೋದು ಮನಸ್ಸಿನಲ್ಲಿರಲಿ, ಅಲ್ಲದೇ ನಿಮಗೆ ಈ ಕೆಲಸದಲ್ಲಿ ಆಸಕ್ತಿ ಇರದೇ ಹೋದರೆ ನೀವು ಈ ಹಂತವನ್ನು ತಲುಪುತ್ತಿರಲಿಲ್ಲವಾದ್ದರಿಂದ ಕೆಲಸ ಸಿಗುತ್ತದೆಯೋ ಬಿಡುತ್ತದೆಯೋ, ಕೆಲಸ ಸಿಕ್ಕರೆ ತೆಗೆದುಕೊಳ್ಳುತ್ತೀರೋ ಇಲ್ಲವೋ ಅದರ ಬಗ್ಗೆ ಯೋಚಿಸದೆ ನಿಮ್ಮನ್ನು ಈ ಹಂತದಲ್ಲಿ ಈ ಕೆಲಸಕ್ಕೆ ಏಕೆ ಅವರು ತೆಗೆದುಕೊಳ್ಳಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಧನಾತ್ಮಕವಾದ (positive) ಉತ್ತರವೊಂದನ್ನು ಸಿದ್ಧಮಾಡಿಕೊಳ್ಳಿ, ಹಾಗೆ ಸಿದ್ಧಮಾಡಿಕೊಂಡ ಉತ್ತರವೊಂದನ್ನು ನ್ಯಾಯವಾಗಿ ಒಪ್ಪಿಸಿ!

ಈ ಕೆಲಸಕ್ಕೆ ಬೇಕಾದ Requirements ಮನಸ್ಸಿನಲ್ಲಿರಲಿ, Industry ಕೂಡಾ ಆಷ್ಟೇ ಮುಖ್ಯ, ಅಲ್ಲದೇ ನೀವು ಹೇಳಿದ ವಾಕ್ಯಗಳು ನಿಮ್ಮನ್ನೇ ಹಿಂತಿರುಗಿ ಹೊಡೆಯದಿರುವಂತೆ ಹಾಗೂ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಸದಂತೆ ಮಾತನಾಡುವ ಜಾಣತನವೂ ಇರಲಿ - ಉದಾಹರಣೆಗೆ 'I love to work on patients with HIV!' ಎಂದೇನೋ ಆವೇಷದಲ್ಲಿ ಹೇಳಿ ಬಿಟ್ಟಿರಿ ಎಂದುಕೊಳ್ಳಿ, ನಾಳೆ ನಿಮ್ಮ ಸುತ್ತ ಮುತ್ತ ಇಂತಹ ರೋಗಿಗಳೇ ತುಂಬಿಕೊಂಡರೆ ಇಂಟರ್‌ವ್ಯೂವ್ ಮಾಡಿದವರೇ ನಿಮ್ಮ ಬಾಸೂ ಆದರೆ ಏನೆಂದು ದೂರು ಕೊಡುತ್ತೀರಿ - 'ನನಗೆ ಇಂತಹ ಪೇಷಂಟ್‌ಗಳು ಅಂದ್ರೆ ಪಂಚಪ್ರಾಣಾ ಅಂತ ನೀನೇ ಹೇಳಿದ್ದೆ!' ಎಂದು ಅವರು ತಿರುಗಿ ಪ್ರಶ್ನೆ ಹಾಕದಿದ್ದರೆ ಸಾಕು.

ಈ ಪ್ರಶ್ನೆಗೆ ಉತ್ತರವಾಗಿ ಸೇರಿಸಬಹುದಾದ/ಬೇಕಾದ ವಾಕ್ಯಗಳೆಂದರೆ:
- I have what it takes to do the job
- I am a team player
- I can hit the ground running
- Consider addressing specific requirements in the answer (I have been a C++ developer specifically working on Virtual Reality applications)
- Explain how you will be an asset to this project/team/group

ಏನನ್ನು ಹೇಳಬಾರದೆಂದರೆ:
- I really need this job
- I am a hard worker
- I have excellent communication skills
- I like your company
- I would like to be promoted

ಈ ಪ್ರಶ್ನೆಗೆ ಉತ್ತರವನ್ನು ತಯಾರಿಸುವಾಗ ನಿಮ್ಮ potential ನಿಮ್ಮ ಕಣ್ಣ ಮುಂದಿರಲಿ, ನಿಮ್ಮ ಬೇಕು-ಬೇಡಗಳು, strengths-weakness ನಿಮಗೆ ಗೊತ್ತಿರಲಿ. ನಿಮ್ಮ ಹಿನ್ನೆಲೆ, ಅನುಭವ ಇಂತಹ ಪ್ರಶ್ನೆಗಳನ್ನು ಉತ್ತರಿಸುವಲ್ಲಿ ಸಹಾಯ ಮಾಡಲಿ, ಈ ಪ್ರಶ್ನೆಯನ್ನು ಬೇರೆ ಯಾವುದೇ ವೇರಿಯೇಷನ್‌ನಲ್ಲಿ ಕೇಳಿದರೂ ನಿಮ್ಮ ಉತ್ತರ ಸ್ಥಿರವಾಗಿರಲಿ.

ಮುಖ್ಯವಾಗಿ, ನೀವು ಈ ಪ್ರಶ್ನೆಗೆ ಕೊಟ್ಟ ಉತ್ತರದಿಂದ ಮಾತ್ರ ನಿಮ್ಮನ್ನು ಅವರು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆಂದು ಯೋಚಿಸದೇ ಒಂದೆರಡು ನಿಮಿಷಗಳಲ್ಲಿ ಇದನ್ನು ಉತ್ತರಿಸಿ ಮುಂದೆ ಹೋಗಿ.

***

ನಾನು ಬಹಳ ಉದ್ದುದ್ದವಾಗಿ ಬರೆಯುತ್ತೇನೆ ಅನ್ನೋದು ಹಲವರ ಕಾಮೆಂಟ್ ಆದ್ದರಿಂದ ಈ ವಾರ ಇಲ್ಲಿಗೇ ನಿಲ್ಲಿಸಿ ಮುಂದಿನವಾರ ಈ ಅಂಕಣವನ್ನು ಮುಂದುವರಿಸುತ್ತೇನೆ!

***

ಮುಂದಿನ ಶನಿವಾರ:
7) How much money are you looking for?
8) How to dress and "smell" for success!

Friday, August 04, 2006

ಪತ್ರಗಳನ್ನ ಬರೀ ಬೇಕು, ಫಾಲ್ಲೋ ಅಪ್ ಮಾಡಬೇಕು!

ಹಿಂದಿನ ಲೇಖನದಲ್ಲಿ Tell me about yourself... ಪ್ರಶ್ನೆಗೆ ಉತ್ತರವನ್ನು ವಿವರಿಸುತ್ತಿರುವಾಗ 'ನಿಮ್ಮ confidence levelನ ಉತ್ತುಂಗ ಸ್ಥಿತಿಯಲ್ಲಿರಬೇಕು' ಎಂದು ಬರೆದಿದ್ದೆ, ನಮ್ಮಲ್ಲಿ ನಮ್ಮ ಬಗ್ಗೆಯೇ ತುಂಬಿಕೊಂಡಿರೋ ವಿಶ್ವಾಸ ಒಂದು ರೀತಿಯ ಧೈರ್ಯವನ್ನು ನಮ್ಮ ಮಾತು ಹಾಗೂ ಕೃತಿಗಳಲ್ಲಿ ಹೊರಸೂಸಬಲ್ಲದು, ನಮ್ಮ ಉತ್ತರಗಳಲ್ಲಿ ಸ್ಪಷ್ಟತೆ (clarity) ಹುಟ್ಟಬಲ್ಲದು, ಹಾಗೂ ನಮ್ಮ ಕಣ್ಣುಗಳಲ್ಲಿ ಆ ವಿಶ್ವಾಸ ಪ್ರತಿಬಿಂಬಿತವಾಗಬಲ್ಲದು. ಆದ್ದರಿಂದಲೇ ಪ್ರತಿಯೊಂದು ಸಂದರ್ಶನ ಅಥವಾ ಭೇಟಿಗಳಲ್ಲಿ ನಮ್ಮ body language ತುಂಬಾ ಮುಖ್ಯ - ಅದರ ಬಗ್ಗೆ ವಿವರವಾಗಿ ಮುಂದೆ ಬರೆಯುತ್ತೇನೆ, ಆದರೆ ನಾನು ಇತ್ತೀಚೆಗಷ್ಟೇ ಮಾಡಿದ ತಪ್ಪನ್ನು ನೀವೆಂದೂ ಮಾಡಬೇಡಿರೆಂದು ಹೇಳುವುದಕ್ಕೋಸ್ಕರ ಈ ಉಪಕಥೆಯನ್ನು ಚಿಕ್ಕದಾಗಿ ಹೇಳಿಬಿಡುತ್ತೇನೆ:

ಒಂದು ತಿಂಗಳ ಹಿಂದೆ ಇಲ್ಲಿನ ಯಾವುದೋ ಕಾಕ್‌ಟೈಲ್ ಸಮಾರಂಭವೊಂದರಲ್ಲಿ ನನ್ನ ಹೆಂಡತಿಯ ಜೊತೆಗೆ ನಾನೂ ಭಾಗವಹಿಸಿದ್ದೆ, firm handshake ಬಗ್ಗೆ ನಾನು ಎಲ್ಲೋ ಓದಿಕೊಂಡ ಪರಿಣಾಮವಾಗಿ ನನ್ನ ಕೈಯನ್ನು ಯಾರಾದರೂ ಕುಲುಕಿದರೆ ಆ ವಿಚಾರವನ್ನು ಸಿಕ್ಕಲ್ಲೆಲ್ಲಾ ಅಳವಡಿಸಿಕೊಂಡುಬಿಡುತ್ತೇನೆ. ಈ ಸಮಾರಂಭದಲ್ಲಿ ನನ್ನ ಹೆಂಡತಿ ಭಾರತೀಯ ಮೂಲದ ದೊಡ್ಡ ಡಾಕ್ಟರ್ ಒಬ್ಬರ ಪರಿಚಯ ಮಾಡಿಕೊಡುತ್ತಳಿದ್ದಳು, ಅವರ ಒಂದು ಕೈಯಲ್ಲಿ ವೈನ್ ಗ್ಲಾಸ್ ಇತ್ತು, ನಾನೂ ಎಡಗೈಯಲ್ಲಿ ನನ್ನ ಗ್ಲಾಸನ್ನು ಹಿಡಿದುಕೊಂಡು, ಬಲಗೈಯಲ್ಲಿ ಅವರ ಕೈಯನ್ನು ಬಲವಾಗಿ ಕುಲುಕಿದ ಪರಿಣಾಮವಾಗಿ - ನಾನು ಅವರ ಬಲಗೈಯನ್ನು ಕುಲುಕಿದರೆ ಅವರು ಹಿಡಿದ ಎಡಗೈಯಿಂದ ವೈನ್ ಅವರ ಕಾಕ್‌ಟೇಲ್ ಗೌನಿನ ಮೇಲೆ ಬಿದ್ದು ಅವಾಂತರವಾಗಿ ಹೋಯಿತು! ನಾನು ಸೂಚ್ಯವಾಗಿ 'ಕ್ಷಮಿಸಿ' ಎಂದು ಆ ಕ್ಷಣದಲ್ಲಿ ಮೊರೆ ಇಟ್ಟು ಪಾರಾದೆ, ಮುಂದೆ ಇನ್ನುಳಿದವರ ಪರಿಚಯ ಮಾಡಿಕೊಡುವಾಗ ನನ್ನ ಹೆಂಡತಿ 'ನಿಧಾನವಾಗಿ ಕೈ ಕುಲುಕುವಂತೆ' ತಿವಿಯುತ್ತಲೇ ಇದ್ದಳು, ನಾನು 'ಸರಿ' ಎಂದು ಆ ಕ್ಷಣಕ್ಕೆ ಒಪ್ಪಿಕೊಂಡೆ ಆದರೆ, 'ನಾನು ಬಲಗೈಯನ್ನು ಕುಲುಕಿದರೆ ಎಡಗೈಯಿಂದ ಅವರ ಗ್ಲಾಸು ಅಲ್ಲಾಡಿದ್ದಕ್ಕೆ ನಾನು ಜವಾಬ್ದಾರನಲ್ಲ' ಎಂದು ಸಬೂಬನ್ನೇ ಇವತ್ತಿಗೂ ಕೊಡುತ್ತಲೇ ಇದ್ದೇನೆ - ಆದರೆ ಸಮಯಕ್ಕೆ ತಕ್ಕಂತೆ ಬದಲಾಗದೇ ಹೋದರೆ ಇಂತಹ ಅವಾಂತರಗಳು ಆಗೋದು ಖಂಡಿತ! ನಿಮ್ಮ ಇಂಟರ್‌ವ್ಯೂವ್ ಅನ್ನು ಮಾಡುವವರ ಮೈ ಮೇಲೆ ನೀರನ್ನು ಅಥವಾ ಕಾಫಿಯನ್ನು ಬೀಳಿಸಿ ಯಾವ ಇಂಟರ್‌ವ್ಯೂವ್ ಅನ್ನು ತಾನೇ ಪಾಸಾಗಲು ಸಾಧ್ಯ? ಆದ್ದರಿಂದಲೇ 'ಹುಷಾರಾಗಿರಿ!' ಎಂದು ಹೇಳೋದಕ್ಕೆ ಈ ಚಿಕ್ಕ ವಿಷಯವನ್ನು ಹೇಳಬೇಕಾಗಿ ಬಂತು - ಈಗ ನಾವು ಬರೆಯುವ ಪತ್ರಗಳಿಗೆ ಬರೋಣ.

4) Cover Letter
ಯಾವುದೇ ನೌಕರಿಗೆ ನೀವು ಅರ್ಜಿ ಗುಜರಾಯಿಸುತ್ತಿರಲಿ, ನಿಮ್ಮ ರೆಸ್ಯೂಮೆಯ ಜೊತೆಗೆ ಒಂದು ಕವರ್ ಲೆಟರ್ ಅನ್ನು ಲಗತ್ತಿಸುವುದನ್ನು ಮಾತ್ರ ಮರೆಯಬೇಡಿ. ಈ ಕವರ್ ಲೆಟರ್‌ನಿಂದ ನೀವು ರೆಸ್ಯೂಮೆಯಲ್ಲಿ ಹೇಳಲಾಗದ ಹಲವಾರು ವಿಷಯಗಳನ್ನು ಹೇಳಿಕೊಳ್ಳೋದರ ಮೂಲಕ ಒಂದು ರೀತಿಯ 'ಸಂಬಂಧ'ವನ್ನು ಬೆಳೆಸಿಕೊಳ್ಳುವ ಅವಕಾಶಗಳನ್ನು ಹುಟ್ಟಿಸಿಕೊಳ್ಳಬಹುದು, ಮುಂದೆ 'ಹೀಗೆ ಫಾಲೋ ಅಪ್ ಮಾಡುತ್ತೇನೆ' ಎನ್ನುವ ದಾರಿಯನ್ನು ತೆರೆದುಕೊಳ್ಳಬಹುದು, ನಿಮ್ಮ ಬಗ್ಗೆಯೇ ಬೇರೊಂದು ನೆಲೆಯಲ್ಲಿ ಸಮರ್ಥನೆಯನ್ನು ನೀಡಬಹುದು, ಅಥವಾ ನಿಮ್ಮ attention to detail ಅನ್ನು ಇಲ್ಲಿ ದೃಷ್ಟಾಂತಗಳ ಮೂಲಕ ತೋರಿಸಿಕೊಳ್ಳಬಹುದು, ಹೀಗೆ ಕವರ್ ಲೆಟರ್‌ಗಳಿಂದ ನಾನಾ ತರಹದ ಉಪಕಾರಗಳಾಗುತ್ತವಾದ್ದರಿಂದ ಅದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ.

- ಮೊಟ್ಟ ಮೊದಲನೆಯದಾಗಿ ನೀವು ಅರ್ಜಿ ಹಾಕುತ್ತಿರುವ ಕೆಲಸಕ್ಕೆ ಸಂಬಂಧಿಸಿದ ರೆಫೆರೆನ್ಸ್ ಕೊಡಿ - ಪತ್ರಿಕೆಯ ಹೆಸರು, ಕೆಲಸ ಪ್ರಕಟವಾದ ದಿನಾಂಕ, ಇತ್ಯಾದಿ.

- ಈ ಕೆಲಸಕ್ಕೆ ನೀವು ಅರ್ಜಿ ಹಾಕುತ್ತಿರುವುದರಿಂದ Why are you intersted in this position? ಅನ್ನೋ ಪ್ರಶ್ನೆಗೆ ಮುಂದಿನ ಒಂದು ಸಾಲಿನಲ್ಲಿ ಉತ್ತರಕೊಡಿ, ಉದಾಹರಣೆಗೆ: I am interested in this position as it gives me a challenging and exciting opportunity to manage and support key technical and business initiatives in AAA areas of MMM markets.

- ಮುಂದಿನ ಪ್ಯಾರಾದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಅವರು ಕೇಳಿದ Required ಹಾಗೂ Desired ಅರ್ಹತೆಗಳೆರಡಕ್ಕೂ ಉತ್ತರಿಸುವಂತೆ ನಿಮ್ಮ ಹಿಂದಿನ ಅನುಭವಗಳನ್ನು ಒಂದಾದ ಮೇಲೆ ಸೂಚ್ಯವಾಗಿ ವಿವರಿಸಿ (ಒಂದೇ ದೊಡ್ಡ ಪ್ಯಾರಾವಿರಬಹುದು, ಅಥವಾ ಹಲವಾರು ಚಿಕ್ಕ-ಚಿಕ್ಕ ಪ್ಯಾರಾಗಳಿರಬಹುದು).

- ಕೊನೆಯ ಪ್ಯಾರಾದಲ್ಲಿ positive upbeat ನಿಂದ ಬರೆಯಿರಿ, ಉದಾಹರಣೆಗೆ: I am confident with my abilities that I can make immediate and valuable contribution to your...

- Yours sincerely ಎಂದು ಬರೆದು ನಿಮ್ಮ ಹೆಸರನ್ನು ನಮೂದಿಸಿ

- ಇತ್ತೀಚೆಗೆ ಕಂಡು ಹಿಡಿದುಕೊಂಡ ಒಂದು ಟೆಕ್ನೀಕ್‌ನ ಪ್ರಕಾರ ಯಾವುದೇ ಬರಹದಲ್ಲೂ 'PS:' ನಮೂದಿಸಿದ್ದರೆ ಅದು ತಕ್ಷಣ ಓದುವವರ ಕಣ್ಣಿಗೆ ಕಂಡುಬರುತ್ತದೆಯಂತೆ, ಈ ತಂತ್ರವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿ. ಒಂದೇ ನೀವು ನಿಮ್ಮ ಫೋನ್ ನಂಬರನ್ನು ಮೇಲೆ yours sincerely ಯಲ್ಲಿ ಬರೆದ ನಿಮ್ಮ ಹೆಸರಿನ ಕೆಳಗೆ ಬರೆಯಬಹುದು, ಅಥವಾ ನಿಮ್ಮ ಪತ್ರದ ಕೆಳಗೆ "PS:" ಸೇರಿಸಿ ಅದರಲ್ಲಿ ಬರೆದರೆ ನಿಮ್ಮ ಕವರ್ ಲೆಟರ್ ನಲ್ಲಿ ಎದ್ದು ಕಾಣುವ ಸಾಧ್ಯತೆಗಳೂ ಇವೆ - ಉದಾಹರಣೆಗೆ: PS: I am really interested in this position, I can be reached at ... ಅಥವಾ P.S.: I am very excited about this position, I look forward to the opportunity to discuss it with you very soon...(ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರಲಿ, artificial ಆಗಿರೋದು ಬೇಡ).

ಕವರ್ ಲೆಟರ್ ಬರೆದು ಕೆಲಸಕ್ಕೆ ಅರ್ಜಿ ಸಲ್ಲಿಸಿದ ನಂತರ, ಈ ಕವರ್ ಲೆಟರ್‌ನ ಪ್ರತಿ, ನಿಮ್ಮ ರೆಸ್ಯೂಮೆಯ ಪ್ರತಿ ಜೊತೆಯಲ್ಲಿ ನಿಮಗೆ ಈ ಕೆಲಸದ ಬಗ್ಗೆ ಮಾಹಿತಿ ನೀಡಿದ ಪತ್ರಿಕೆಯ ತುಣುಕು ಇವೆಲ್ಲವನ್ನೂ ಒಂದು ಫೈಲಿನಲ್ಲಿ ಅಚ್ಚುಕಟ್ಟಾಗಿ ದಿನಾಂಕಗಳನ್ನು ಬರೆದು ಅಚ್ಚುಕಟ್ಟಾಗಿ ಜೋಡಿಸಿಡಿ - ಅದರ ಮಹತ್ವವನ್ನು ಮುಂದೆ ತಿಳಿಸುತ್ತೇನೆ!

5) Thank you letter

ನನ್ನ ಪ್ರಕಾರ ಸಂದರ್ಶನ ಮುಗಿಸಿದ ಪ್ರತಿಯೊಬ್ಬರೂ thank you letter ಅನ್ನು ಬರೆಯಲೇ ಬೇಕು, ಅದರಲ್ಲೂ ಸಂದರ್ಶನ ಮುಗಿದ ದಿನ ಅಥವಾ ಅದರ ಮರುದಿನ ಬರೆದ ಪತ್ರ/ಇ-ಮೇಲ್‌ಗಳಿಗೆ ಮಹತ್ವ ಹೆಚ್ಚು.

ಸರಳವಾಗಿರಲಿ - ಹೀಗೆ ಬರೆಯೋದರ ಉದ್ದೇಶ ನೀವು ನಿಮ್ಮ ಸಂದರ್ಶನವನ್ನು ಮಾಡಿದವರಿಗೆ ನಿಮ್ಮ ನೆನಪನ್ನು ತಂದುಕೊಡುವುದಷ್ಟೇ! ಅಲ್ಲದೆ, ನಿಮ್ಮ ಇಂಟರ್‌ವ್ಯೂವ್ 'ಚೆನ್ನಾಗಿ' ಆಗಿದೆ ಎಂದು ನಿಮಗೆ ವಿಶ್ವಾಸವಿರಲಿ, ಇಲ್ಲದಿರಲಿ 'ಹೋದರೆ ಒಂದು ಕಲ್ಲು, ಬಂದ್ರೆ ಒಂದು ಮಾವಿನ್‌ಕಾಯಿ' ಅನ್ನೋ ಹಾಗೆ ನಿಮ್ಮ ಪ್ರಯತ್ನ ನೀವು ಮಾಡಿ.

ನಿಮ್ಮ ಪತ್ರ ನಾಲ್ಕೈದು ಸಾಲುಗಳನ್ನು ಹೊಂದಿದ್ದರೆ ಹೆಚ್ಚು:
ಮೊದಲು - ನಿಮ್ಮ ಸಂದರ್ಶನವನ್ನು ಮಾಡಿದ ವ್ಯಕ್ತಿಯ ಸಮಯಕ್ಕೆ ಬೆಲೆ ಕೊಡಿ, ಅನಂತರ ಸಂದರ್ಶನದಲ್ಲಿ, ಅಥವಾ ಆ ಕೆಲಸ/ಕಂಪನಿಯ ಬಗ್ಗೆ ನಿಮ್ಮ ಒಳ್ಳೆಯ ಅನುಭವಗಳನ್ನು ಸೂಚ್ಯವಾಗಿ ಹಂಚಿಕೊಳ್ಳಿ, ಕೊನೆಯಲ್ಲಿ ಕಮ್ಮೂನಿಕೇಷನ್ ಚಾನೆಲ್ ಅನ್ನು ಓಪನ್ ಆಗಿ ಇಡಿ:

ಉದಾಹರಣೆಗೆ:
I truly enjoyed talking with you today/this morning/this afternoon and wanted to thank you for taking the time to meet with me. The position you described sounds exciting and challenging. I believe with my experience in the XXX systems/applications, I should be able to add value from the onset.

I was particularly impressed with AAAA and BBBB (for instance your description of strict deadlines and narrower timeframe for XXXX activities).

Thank you again for your time and consideration. I look forward to hearing from you in the near future.

ಸಾಧ್ಯವಾದಷ್ಟು ಇ-ಮೆಲ್ ಮೂಲಕ ಈ ತರಹದ ಪತ್ರಗಳನ್ನು ಕಳುಹಿಸಿದರೆ ಅದರ ಅನುಕೂಲತೆ ಹೆಚ್ಚು, ನಿಮ್ಮ ಹಣೆ ಬರಹದಲ್ಲಿ ಅಂಚೆ ಮೂಲಕವೇ ಈ ರೀತಿ ಕಳುಹಿಸಬೇಕು ಎಂದು ಬರೆದಿದ್ದರೆ ಯಾರು ಏನು ಮಾಡುವುದಕ್ಕಾಗುತ್ತದೆ - ಎಲ್ಲ ಕೆಲಸಕ್ಕೆ ಸಂಬಂಧಿಸಿದವರೂ ಕಂಪ್ಯೂಟರನ್ನು ಬಳಸಬೇಕು ಎಂಬ ನಿಯಮವಂತೂ ಇದ್ದಂತಿಲ್ಲ - ಅಮೇರಿಕದಲ್ಲಿ ನನಗೆ ಅನುಕೂಲವಾಗುವಂತೆ ಈ ಉದಾಹರಣೆಗಳನ್ನು ಹೆಣೆದುಕೊಂಡಿದ್ದೇನೆ, ಆದರೆ ನಿಮ್ಮನಿಮ್ಮ ಅಗತ್ಯಕ್ಕೆ ತಕ್ಕಂತೆ ಈ ಉದಾಹರಣೆಗಳನ್ನು ಬಳಸಿಕೊಳ್ಳಿ.

***

ನಿಮ್ಮ ಬರಹ ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬವಾಗಲಿ. ಅಲ್ಲಿ-ಇಲ್ಲಿಂದ ತೆಗೆದು ಪತ್ರಬರೆಯುವುದರ ಬದಲಿಗೆ ನಿಮಗೆ ಸಹಜವಾದ ಶೈಲಿಯನ್ನು ಮೇಲೆ ತಿಳಿಸಿದ guidelines ನಲ್ಲಿ ಬೆಳೆಸಿಕೊಳ್ಳಿ. ಹೀಗೆ ನೀವು ಬರೆಯುತ್ತಾ ಹೋದಂತೆ, ಸಂದರ್ಶನಗಳನ್ನು ಅಟೆಂಡ್ ಮಾಡುತ್ತಾ ಹೋದಂತೆ ಬೇಕಾದಷ್ಟು ಕಲಿಯುವುದಕ್ಕಿದೆ, ಹಾಗೆ ಕಲಿಸುವ ಪ್ರತಿಯೊಂದು ಅನುಭವವೂ ನಿಮ್ಮ ಮಾತುಕಥೆ-ಬರವಣಿಗೆಯನ್ನು ಬೆಳೆಸಬಲ್ಲದು.

***

ಮುಂದಿನ ಶನಿವಾರ:
6) Why should I hire you?
7) How much money are you looking for?

Saturday, July 29, 2006

ನಿಮ್ಮ ಬಗ್ಗೆ ಹೇಳೋದಕ್ಕೆ ಸಂಕೋಚವೇಕೆ?

ಸರಣಿಯಲ್ಲಿ ಇನ್ನೂ ಹಲವಾರು ವಿಷಯಗಳು ಬರೋದರಲ್ಲಿವೆ - ಅವುಗಳಲ್ಲಿ ಮುಖ್ಯವಾದವುಗಳು: Tell me about yourself, Resume, Cover letter, Thank you letter, Why should I hire you? How much money are you looking for? ಇತ್ಯಾದಿ...ಇವುಗಳಲ್ಲಿ ಒಂದೊಂದಾಗೇ ನೋಡಿಕೊಂಡು ಬರೋಣ.

೩) Tell me about yourself!

ನಿಮ್ಮ ಬಗ್ಗೇನೇ ಹೇಳಿಕೊಳ್ಳೋದಕ್ಕೆ ಸಂಕೋಚವೇಕೆ, ಅದಕ್ಕೂ ತಯಾರಿ ಅನ್ನೋದು ಬೇಕೆ ಎಂದರೆ ಹೌದು ಎನ್ನುತ್ತೇನೆ. ಸಂಕೋಚ ಎಲ್ಲರಿಗೂ ಇರಲಾರದು ಆದರೆ ಎಷ್ಟೋ ಬಾರಿ ಈ ಪ್ರಶ್ನೆಯ ಉತ್ತರವೇ ನಿಮ್ಮ ಸಂದರ್ಶನವನ್ನು make or break ಮಾಡಬಲ್ಲದು. ಆದ್ದರಿಂದ ನೀವು ಗಂಭೀರವಾಗಿ ಯಾವುದಾದರೂ ಸಂದರ್ಶನಕ್ಕೆ ತಯಾರಾಗುತ್ತಿದ್ದರೆ ಕೊನೇ ಪಕ್ಷ ಏನಿಲ್ಲವೆಂದರೂ ಈ ಪ್ರಶ್ನೆಯ ಉತ್ತರಕ್ಕಾದರೂ ತಯಾರಾಗಿ. ಎಷ್ಟೋ ಸಾರಿ icebreaker ಆಗಿ ಈ ರೀತಿಯ ಪ್ರಶ್ನೆಗಳನ್ನು ಕೇಳಿದರೂ, ಈ ಪ್ರಶ್ನೆಯನ್ನು ಕೇಳಿದ ಸಂದರ್ಶಕ ಏನನ್ನು ನಿರೀಕ್ಷಿಸುತ್ತಾನೆ/ಳೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡರೆ ಎಲ್ಲವೂ ಸುಲಭವಾದೀತು.

ನಿಮ್ಮ ಸಂದರ್ಶನ ಒಂದೇ ಫೋನ್ ಮುಖಾಂತರ ನಡೆಯುತ್ತಿರಬಹುದು ಅಥವಾ ಮುಖಾಮುಖಿ ಇದ್ದಿರಬಹುದು, ಆದರೂ ಸಹ ನಾನು ನಡೆಸಿದ, ನಾನು ಸಂದರ್ಶಕನಾಗಿ ಹೋದ ಎಷ್ಟೋ ಸಂದರ್ಶನಗಳಲ್ಲಿ ಈ ಪ್ರಶ್ನೆಯನ್ನೆ ಮೊಟ್ಟಮೊದಲ ಪ್ರಶೆಯನ್ನಾಗಿ ಕೇಳಿದ್ದಿದೆ, ಹೀಗೆ ಇನ್ನು ಮುಂದೆ ಕೇಳುತ್ತಾರೆ ಎನ್ನುವ ನನ್ನ ನಂಬಿಕೆಯಿಂದಲೇ ನಾನು ಈ ಪ್ರಶ್ನೆಯ ಉತ್ತರ ಅತಿಮುಖ್ಯ ಎಂದು ಮೊದಲೇ ಹೇಳಿಬಿಡುತ್ತೇನೆ. ಜೊತೆಯಲ್ಲಿ ಈ ಪ್ರಶ್ನೆಗೆ ಉತ್ತರ ಸುಲಭವೆಂದು ನೀವೆಂದುಕೊಂಡಿರಬಹುದು, ಆದರೂ ಹೊಸ ಸ್ಥಳ, ಅಪರಿಚಿತರ ನಡುವೆ ನಿಮ್ಮ-ನಿಮ್ಮ ಪರಿಚಯವನ್ನು ಹೇಳಿಕೊಳ್ಳುವಲ್ಲಿ ತೊಂದರೆ ಏನಾದರೂ ಇದ್ದೀತೆಂದು ನಿಮಗನ್ನಿಸಿದರೆ ನೀವು ಈ ಪ್ರಶ್ನೆಯ ಉತ್ತರವನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಬೇಕು. ಅಲ್ಲದೇ ಅವರು ಪ್ರಶ್ನೆ ಕೇಳಿದ ನಂತರ ಅದಕ್ಕೊಂದು ಉತ್ತರ ಸಿದ್ಧ ಪಡಿಸುವುದಕ್ಕಿಂತ ಮೊದಲೇ ಉತ್ತರವನ್ನು ಸಿದ್ಧಪಡಿಸಿಕೊಂಡು ಮನದಟ್ಟು ಮಾಡಿಕೊಂಡಿರುವುದು ಒಳ್ಳೆಯದು.

ನಿಮಗೆ Tell me about yourself... ಎಂದು ಪ್ರಶ್ನೆ ಕೇಳಿದವರ ಮನಸ್ಸಿನಲ್ಲಿ ಏನಿದ್ದಿರಬಹುದು! ಅವರು ನಿಜವಾಗಿಯೂ ನಿಮ್ಮ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೋ ಅಥವಾ ನಿಮ್ಮ ಮಾತುಕಥೆಗಳು (communication skills) ಹೇಗಿವೆ ಎಂದು ಕಂಡುಕೊಳ್ಳುತ್ತಿದ್ದಾರೋ ಅಥವಾ ಈ ಎರಡೂ ಇದ್ದಿರಬಹುದು, ಮತ್ತೇನೋ ಇದ್ದಿರಬಹುದು. ಆದರೂ ಎಲ್ಲರಿಗೂ ಅನ್ವಯವಾಗುವಂತಹ ಒಂದು standard ಉತ್ತರವನ್ನು ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.

ಈ ಪ್ರಶ್ನೆಗೆ ಉತ್ತರವಾಗಿ, ಈ ಪ್ರಶ್ನೆಗಳನ್ನು ಕೇಳಿದವರಿಗೆ ನಿಮ್ಮ ಹೆಸರು ಈಗಾಗಲೇ ಗೊತ್ತಿದ್ದರೆ ಮತ್ತೆ ಅದನ್ನೇ ಹೇಳಬೇಡಿ ಇಲ್ಲವಾದರೆ, ಸೂಚ್ಯವಾಗಿ ಹೇಳಿ. (What is your name? ಎಂದು ಯಾರಾದರೂ ಕೇಳಿದಾಗ ಕೆ.ಜಿ. ಮಕ್ಕಳು ಹೇಳಿದಂತೆ My name is...ಎಂದು ಉಲಿಯಬೇಡಿ, ಅದರ ಬದಲಿಗೆ ಗಂಭೀರವಾಗಿ I am XYZ ಎಂದು ಮಾತ್ರ ಹೇಳಿ! ಕನ್ನಡದಲ್ಲಿ ಯಾರಾದರೂ ನಿಮ್ಮ ಹೆಸರೇನು ಎಂದರೆ ನೀವು ಅದಕ್ಕುತ್ತರವಾಗಿ 'ನನ್ನ ಹೆಸರು ...' ಎಂದೇನೂ ಹೇಳುವುದಿಲ್ಲ ತಾನೆ?!)

Tell me about yourself ನಲ್ಲಿ ಮುಖ್ಯವಾಗಿ ಹೇಳಬೇಕಾದವುಗಳು:
ನಿಮ್ಮ Profession, ಅಥವಾ level (ಉದಾಹರಣೆಗೆ - I am senior software engineer, I am manager of ...systems)
a) Expertise - ನಿಮ್ಮ functions / capabalities
b) Strengths include... - unique professional qualities
c) Worked with/for ... - type of organizations / industries /groups (depends on the scope of the interview)

ಇವುಗಳ ಸಹಾಯದಲ್ಲಿ ನೀವು ಏನನ್ನು ಮಾಡಿದ್ದೀರಿ ಎಂಬುದನ್ನು ಹೇಳಿ. ಅಕಸ್ಮಾತ್ ನಿಮಗೇನಾದರೂ ಇದು ಹೊಸ ಕೆಲಸವಾದರೆ, (ಅನುಭವ ಇದ್ದೂ ಬೇರೆ ಇಂಡಸ್ಟ್ರಿಗೆ ಹೋದರೆ) ಏನೇನು ಮಾಡಬಲ್ಲಿರಿ ಎಂಬುದನ್ನು ಹೇಳಬಹುದು.

ಈ ಹಿನ್ನೆಲೆಯಲ್ಲಿ Tell me about yourself ಗೆ ಉತ್ತರವಾಗಿ: I am so and so...(ಹೆಸರು ಆಪ್ಷನಲ್ ಅಥವಾ ಅಗತ್ಯಕ್ಕೆ ತಕ್ಕಂತೆ), for the last X years I am working as a ((your designation)) in ((company/group name))(if it is a same company interview in a different group, then mention group name).

Then include your expertiese - what you have done -
ಉದಾಹರಣೆಗೆ:
Designe(d) databases, systems
Resolve(d) system issues
Enhance(d) performance of the systems
Manage(d) a team of N number of individuals
Oversea/saw a part of the project in XYZ appplication ಇತ್ಯಾದಿ...

ನಂತರ ನಿಮ್ಮ Unique functions/capabilities ಹೇಳಿ - ಇದನ್ನು ಹೇಳುವಾಗ ನೀವು ಅರ್ಜಿ ಗುಜರಾಯಿಸಿದ ಕೆಲಸವನ್ನು ಮನಸ್ಸಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಹೇಳಿ.

ನಂತರ ಎಲ್ಲೆಲ್ಲಿ ಕೆಲಸ ಮಾಡಿದ್ದೀರಿ, ಎಂಬುದನ್ನು ಸ್ಯೂಚ್ಯವಾಗಿ ಹೇಳಿ.

ಈ ಪ್ರಶ್ನೆಗೆ ಉತ್ತರ ಸುಮಾರು ೨-೩ ನಿಮಿಷ ಹಿಡಿಯಬಹುದು, ಸಮಯವನ್ನು ನೀವೇ ಅಂದಾಜು ಮಾಡಬೇಕು, ನಿಮ್ಮ ಹಾಗೂ ಸಂದರ್ಶನ ನಡೆಸುವವರ ಅನುಕೂಲಕ್ಕೆ ತಕ್ಕಂತೆ. ಈ ಪ್ರಶ್ನೆಗೆ ಉತ್ತರವನ್ನು ಹೇಳುವಾಗ ನೀವು ನಿಮ್ಮ confidence level ನ ಉತ್ತುಂಗ ಸ್ಥಿತಿಯಲ್ಲಿರಬೇಕು. ಈ ಪ್ರಶ್ನೆಗೆ ಪೂರ್ವ ನಿರ್ಧಾರಿತ, ಅಥವಾ ಈಗಾಗಲೇ ಸಿದ್ಧಪಡಿಸಿದ ಉತ್ತರವನ್ನು ಶಾಲೆಯ ಮಕ್ಕಳು ಒಪ್ಪಿಸಿದ ಹಾಗೆ ಕೇಳುವವರ ಕಣ್ಣಿನಲ್ಲಿ ಕಣ್ಣನ್ನು ಇಟ್ಟು, ನೇರವಾಗಿ ಕುಳಿತು ಆದಷ್ಟು ಆತ್ಮವಿಶ್ವಾಸ, ಒಂದು ಕಿರುನಗೆಯನ್ನು ವ್ಯಕ್ತಪಡಿಸಿ ಹೇಳುವುದು.

ದಯವಿಟ್ಟು ಜೋಲುಮೋರೆಯನ್ನು ಮಾತ್ರ ಹಾಕಿಕೊಳ್ಳಬೇಡಿ :-)

೪) ನಿಮ್ಮ ರೆಸ್ಯೂಮೆ (ಅಥವಾ ನಿಮ್ಮ ಜಾತಕ, ಅಥವಾ ಹಣೆಬರಹ)

ನನ್ನ ಅನುಭವದಲ್ಲಿ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರನ್ನು ಸಂದರ್ಶನ ಮಾಡಿದ್ದೇನೆ ಹಾಗೂ ಬೇಕಾದಷ್ಟು ಸಂದರ್ಶನವನ್ನು ನಾನೇ ಅಭ್ಯರ್ಥಿಯಾಗಿ ಅಟೆಂಡ್ ಮಾಡಿದ್ದೇನೆ. ನೀವು ಮಾಡಬಹುದಾದ ದೊಡ್ಡ ತಪ್ಪುಗಳಲ್ಲಿ ಸರಿಯಾಗಿ ಸಿದ್ಧಪಡಿಸಿರದ ರೆಸ್ಯೂಮೆಯೂ ಒಂದು. ರೆಸ್ಯೂಮೆ ಅನ್ನೋದು ಅನ್ಯದೇಶೀಯ ಪದ, ಅದರ ಬದಲಿಗೆ bio-data, CV, candidate profile ಇತ್ಯಾದಿಗಳೂ ಬಳಕೆಯಲ್ಲಿವೆ. ಏನೇ ಇರಲಿ, ನೀವು ಎಷ್ಟೇ ದೊಡ್ಡ ಆಪೀಸರರಾಗಿರಲಿ, ಇನ್ನೂ ಈಗಷ್ಟೇ ಕಾಲೇಜು ಬಿಟ್ಟು ಹೊರಗಿನ ಬದುಕನ್ನು ನೋಡುತ್ತಿರಲಿ, ನಿಮ್ಮ ರೆಸ್ಯೂಮೆ ಎರಡು ಪುಟಗಳಿಗಿಂತ ಹೆಚ್ಚಿರುವುದು ಬೇಡ.

ನಾನು ಹಲವಾರು ರೆಸ್ಯೂಮೆಗಳಲ್ಲಿ ನೋಡಿದಂತೆ ಅದರಲ್ಲಿ ನಿಮ್ಮ ಪಾಸ್‌ಪೋರ್ಟ್ ನಂಬರಾಗಲೀ, ಜನ್ಮ ದಿನಾಂಕವನ್ನಾಗಲೀ ನಮೂದಿಸುವುದು ಬೇಡ. ಸಂದರ್ಶನ ನಡೆದು ನೀವು ಹೊರದೇಶಕ್ಕೆ ಹೋಗಲು ಇನ್ನೂ ಬೇಕಾದಷ್ಟು ಸಮಯವಿರೋದರಿಂದ ವೀಸಾಬರುವವರೆಗೆ ಪಾಸ್‌ಪೋರ್ಟ್ ವಿವರವನ್ನು ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರಿ! ನೀವು ನಿಮ್ಮ ರೆಸ್ಯೂಮೆಯಲ್ಲಿ ತೋರಿಸಬೇಕಾದುದು ಮುಖ್ಯವಾಗಿ:
* ನಿಮ್ಮ ಹೆಸರು,
* ಪೂರ್ಣ ವಿಳಾಸ, ಫೋನ್ ನಂಬರ್, ಇ-ಮೇಲ್ ವಿಳಾಸಗಳ ಸಹಿತ
(ನಿಮ್ಮ ಬಳಿ ಇರುವ ಹತ್ತು ಫೋನ್ ನಂಬರುಗಳು, ಇಪ್ಪತ್ತೈದು ಇ-ಮೇಲ್ ವಿಳಾಸಗಳ ಬದಲಿಗೆ ರಿಲೈಯಬಲ್ ಆಗಿರೋ ಒಂದೇ ಒಂದು ಸಾಕು)

* ಇದಾದ ಮೇಲೆ ಒಂದು ನೀವು ಯಾರು ಎಂಬುದಕ್ಕೆ ಒಂದು Summary ಯನ್ನು ಕೊಡಿ
(ಉದಾಹರಣೆಗೆ: I have X years of experience in <ನಿಮ್ಮ specialty>. I am so and so (ನಿಮ್ಮ current job profile). I have excellent interpersonal, organizational and follow-through skills.
(ಎಕ್ಸಲೆಂಟ್ ಎಂದು ತೋರಿಸಿದ್ದರಿಂದ ನಿಮ್ಮ ಸ್ಕಿಲ್ಸ್ ಎಕ್ಸಲೆಂಟ್ ಆಗಿ ಇರಲೇಬೇಕೇ ಎನ್ನುವುದು million dollar ಪ್ರಶ್ನೆ - excellent in comparision to what?)

* ನಿಮ್ಮ ಸ್ಕಿಲ್ಸ್‌ಗಳನ್ನು ಸಮರೈಸ್ ಮಾಡಿ - ಉದಾಹರಣೆಗೆ: hardware/software, speciality (internal medicine, dermatology), engineering... ನಿಮ್ಮ ಇಂಡಸ್ಟ್ರಿಗೆ ಅನ್ವಯವಾಗುವಂತಿರಲಿ.

* ನಿಮ್ಮ ವಿದ್ಯಾಭ್ಯಾಸವನ್ನು ಸೂಚ್ಯವಾಗಿ ತಿಳಿಸಿ: ಡಿಗ್ರಿ, specialization, University, Year
(ನಿಮ್ಮ ಕ್ಲಾಸಿನಲ್ಲಿ ಎಷ್ಟು ಜನರಿದ್ದರು, ನಿಮ್ಮ ಸ್ನೇಹಿತರ ವಿವರವೆಲ್ಲ ಇಲ್ಲಿ ಬೇಡ)

* ನಿಮ್ಮ ಬಳಿ ಯಾವುದಾದರೂ ಸ್ಪೆಷಲೈಸ್ಡ್ ಸರ್ಟಿಫಿಕೇಷನ್ ಗಳಿದ್ದರೆ ಇಲ್ಲಿ ತಿಳಿಸಿ - Cisco, PMP, Java, ಇತ್ಯಾದಿ

* ಅನುಭವ (Experience - starting with most current job)
ಕಂಪನಿ ಹೆಸರು, ನಿಮ್ಮ ಹುದ್ದೆ, MM/YY - MM/YY ಫಾರ್ಮ್ಯಾಟ್
ಅದರ ಕೆಳಗೆ ನಿಮ್ಮ ರೋಲ್ ಅನ್ನು ವಿವರಿಸಿ - ಪ್ರಾಜೆಕ್ಟ್/ಕೆಲಸ/ಕಂಪನಿಯ ಬಗ್ಗೆ ಕಡಿಮೆ ತಿಳಿಸಿ, ನೀವು ಏನು ಮಾಡುತ್ತಿದ್ದೀರಿ/ಮಾಡಿದ್ದಿರಿ ಎಂದು ತಿಳಿಸುವುದು ಒಳ್ಳೆಯದು.

ಇದೇ ರೀತಿ ಉಳಿದೆಲ್ಲ ಪ್ರಾಜೆಕ್ಟ್/ಕಂಪನಿಗಳ ಬಗ್ಗೆಯೂ ತಿಳಿಸಿ, ಪ್ರಾಜೆಕ್ಟ್/ಕಂಪನಿ ಹಳೆಯದಾದಷ್ಟೂ ವಿವರ ಕಡಿಮೆ ಇರಲಿ. ನೀವು ಐದು ಅಥವಾ ಹತ್ತು ವರ್ಷದ ಹಿಂದೆ ಮಾಡಿದ ಕೆಲಸ ಬಗ್ಗೆ ಈ ಎಂಪ್ಲಾಯರ್ ಎಷ್ಟು ತಿಳಿದುಕೊಳ್ಳಬೇಕೋ ಅಷ್ಟಿರಲಿ.

ನಿಮ್ಮ ಪ್ರಾಜೆಕ್ಟ್‌ನಲ್ಲಿರುವ ಮಾಡ್ಯೂಲ್‌ಗಳನ್ನು ವಿವರಿಸಿ ಎಲ್ಲರ ತಲೆ ತಿನ್ನುವ ಪ್ರಯತ್ನ ಮಾಡದೇ, ಸಿಗುವ ಸಮಯ ಹಾಗೂ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
- ನಿಮ್ಮ ಬಳಿ ಇರುವ ರೆಸ್ಯೂಮೆಯನ್ನು ನೀವು ಅರ್ಜಿ ಹಾಕುವ ಪ್ರತಿಯೊಂದು ಕೆಲಸಕ್ಕೂ ಅನ್ವಯವಾಗುವಂತೆ ಬದಲಾಯಿಸಿ, ಹಾಗೂ ಹಾಗೆ ಬದಲಾಯಿಸಿದ ಪ್ರತಿಯೊಂದನ್ನು ಆ ಕೆಲಸದ ವಿವರಗಳನ್ನೊಳಗೊಂಡ ಪುಟದ ಜೊತೆಯಲ್ಲಿ ಇಟ್ಟುಕೊಳ್ಳಿ. ನೀವು ಹಲವಾರು ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದರೆ, ರಿಕ್ರ್ಯೂಟರ್ ಅಥವಾ ಕಂಪನಿಯವರು ಕರೆದಾಗ ನೀವು ಯಾವ ರೆಸ್ಯೂಮೆಯನ್ನು ಅವರಿಗೆ ಕಳಿಸಿದ್ದೀರೆಂದು ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ?
- ಪ್ರತಿ ರೆಸ್ಯೂಮೆ ೯ ಸೆಕೆಂಡ್ ಪರೀಕ್ಷೆಗೆ ಒಳಪಡುತ್ತದೆಯಂತೆ (9 second test), ಅಂದರೆ ನೋಡೋರೇನಿದ್ದರೂ ಕೆಲವೇ ಕ್ಷಣಗಳಲ್ಲಿ ಅದನ್ನು ಗಮನಿಸೋದರಿಂದ ಯಾವಾಗಲೂ ಚಿಕ್ಕ ಹಾಗೂ ಚೊಕ್ಕ ರೆಸ್ಯೂಮೆ ಒಳ್ಳೆಯದು.
- ನೀವು ಕೆಲಸಕ್ಕೆ ಅರ್ಜಿ ಹಾಕುವ ದೇಶ/ಭಾಷೆ/ಪರಿಸರವನ್ನು ಗಮನದಲ್ಲಿಟ್ಟುಕೊಂಡಿರಿ - ಭಾರತದಲ್ಲಿ 'ಒಳ್ಳೆಯ' ರೆಸ್ಯೂಮೆ ಅನ್ನಿಸಿಕೊಂಡಿದ್ದು, ಜಪಾನ್, ಅಥವಾ ಅಮೇರಿಕದಲ್ಲೂ ಒಳ್ಳೆಯ ರೆಸ್ಯೂಮೆ ಆಗಬೇಕೆಂದೇನೂ ಇಲ್ಲ, ಉತ್ತರದವರಿಗೆ ಇಷ್ಟವಾದದ್ದು ದಕ್ಷಿಣದವರಿಗೂ, ಪೂರ್ವದ್ದು ಪಶ್ಚಿಮದವರಿಗೂ ಅನ್ವಯವಾಗಬೇಕೆಂದೇನೂ ಇಲ್ಲ.

ನಿಮ್ಮ ರೆಸ್ಯೂಮೆಯಲ್ಲಿ ಬಹಳ ಸರಳವಾದ ಫಾಂಟ್ ಹಾಗೂ ವಿನ್ಯಾಸವನ್ನು ಬಳಸಿರಿ - Arial ಅಥವಾ Times New Roman ಫಾಂಟ್ ಬಳಸಿ, ಹನ್ನೆರಡು ಸೈಜ್ ಇದ್ದರೆ ಒಳ್ಳೆಯದು, ಮಾರ್ಜಿನ್ ಬಹಳಷ್ಟು ಬಿಡಿ, Underline, Italicize ಬೇಡ (ಸ್ಕ್ಯಾನ್ ಮಾಡಿದರೆ ಅನುಕೂಲವಾಗಲಿ ಎಂದು), ಕಪ್ಪು ಅಲ್ಲದೇ ಬೇರೆ ಬಣ್ಣವನ್ನು ಬಳಸಲೇ ಬೇಡಿ.

***

ಹೀಗೆ ನಿಮ್ಮ ರೆಸ್ಯೂಮೆ ನಿಮ್ಮ ಮಾರ್ಕೆಟಿಂಗ್ ಟೂಲ್ ಆಗಿ ನಿಮ್ಮನ್ನು ಹೊರಗಡೆ 'ಸೇಲ್' ಮಾಡುವಲ್ಲಿ ಸಹಾಯಕವಾಗುವುದರಿಂದ ಅದು ಚೆನ್ನಾಗಿರುವಂತೆ ಅಲ್ಲದೇ ನೀವು ಬೆಳೆದ ಹಾಗೆ ಬೆಳೆದಂತೆ ನೋಡಿಕೊಳ್ಳುವುದೂ ಬಹಳ ಮುಖ್ಯ.

***

ಮುಂದಿನ ಶನಿವಾರ:
4) Cover letter
5) Thank you letter

Sunday, July 23, 2006

ಆತ್ಮವಿಶ್ವಾಸ, ನಡೆದು ಬರೋ ದಾರಿ ಮತ್ತು ಗುರಿ

ಹತ್ತು ವರ್ಷಗಳಿಗಿಂತ ಹೆಚ್ಚು ಸ್ವಲ್ಪ ಅಲ್ಲಿ-ಹೆಚ್ಚಾಗಿ ಇಲ್ಲಿ ಕೆಲಸ ಮಾಡಿ, ಹಲವಾರು ವರ್ಷಗಳಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟೋ ಜನರಿಗೆ ಸಲಹೆಗಳನ್ನು ನೀಡುವುದರ ಮೂಲಕ, ನನ್ನ ಅನುಭವಗಳ ಹಿನ್ನೆಲೆಯಲ್ಲಿ, ಓದಿದ ಎಷ್ಟೋ ಪುಸ್ತಕಗಳ ಸಹಾಯದಿಂದ ಹಾಗೂ ನನ್ನನ್ನು ಅಲ್ಲಲ್ಲಿ ಕೈ ಹಿಡಿದು ನಡೆಸಿದ ದೊಡ್ಡವರ ನೆರಳಿನಲ್ಲಿ ನಾನೂ 'ಅಂತರಂಗ'ದಲ್ಲಿ ಪರ್ಸನಲ್ ಡೆವಲಪ್‌ಮೆಂಟ್, ಕರಿಯರ್ ಡೆವಲಪ್‌ಮೆಂಟ್ ಬಗ್ಗೆ ಬರೆದರೆ ಹೇಗೆ ಎನ್ನಿಸಿತು. ಇದರಿಂದ ಈ ಅಂಕಣವನ್ನು ಓದೋ ಎಷ್ಟೋ ಜನರಲ್ಲಿ ಕೆಲವರಿಗಾದರೂ ಮಾರ್ಗದರ್ಶನವಾದರೂ ಅದು ತುಂಬಾ ದೂರ ಹೋಗಬಲ್ಲದು. ಈ ನಿಟ್ಟಿನಲ್ಲಿ ಒಂದು ವೇದಿಕೆಯನ್ನು ಸಿದ್ಧ ಪಡಿಸಿ, ಇಲ್ಲಿ ಭಾರತದಲ್ಲಿ ಓದಿ ಭಾರತದಲ್ಲೇ ಕೆಲಸ ಮಾಡುತ್ತಿರುವ, ಮುಂದೆ ಎಂದಾದರೂ ವಿದೇಶಕ್ಕೆ ಬರುವ ಹವಣಿಕೆಯಲ್ಲಿರುವ ಹಾಗೂ ವಿದೇಶಕ್ಕೆ ಈಗಾಗಲೇ ಬಂದು ಇಲ್ಲಿನ ಮ್ಯಾನೇಜ್‌ಮೆಂಟ್ ಲೆವೆಲ್‌ಗಳಲ್ಲಿ ಅಲ್ಲಲ್ಲಿ ಕಣಗಳ ಹಾಗೆ ಸಿಕ್ಕಿ ಹಾಕಿಕೊಂಡಿರುವ (ನನ್ನನ್ನೂ ಸೇರಿ) ಕೆಲವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಾ ಹೋಗುತ್ತೇನೆ. ಓದುಗರ ಪ್ರತಿಕ್ರಿಯೆಯನ್ನು ಅವಲಂಭಿಸಿ ಈ ಲೇಖನಗಳು ಯಾವ ತಿರುವನ್ನು ಬೇಕಾದರೂ ಪಡೆಯಬಹುದು. ಒಟ್ಟಿನಲ್ಲಿ ನನ್ನ ಸಲಹೆಗಳಿಂದ ನಿಮಗೇನಾದರೂ ಅನುಕೂಲವಾಗುವುದಾದರೆ ಅದು ನನ್ನ ಖುಷಿ, ಲೇಖನದುದ್ದಕ್ಕೂ ಬೋರ್ ಹೊಡೆಸದೆ ಅಲ್ಲಲ್ಲಿ ತಿಳಿ ಹಾಸ್ಯವನ್ನು ತುಂಬಿ ಓದಿಸಿಕೊಂಡು ಹೋಗುವಂತೆ ಮಾಡುವುದು ನನ್ನ ಸವಾಲು.

ಪ್ರತಿ ಶನಿವಾರಗಳನ್ನು ಈ ಉದ್ದೇಶಕ್ಕೆ ಇಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೇನೆ - ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!

ಸೂಚನೆ: ಈ ಲೇಖನಗಳನ್ನು ನಾನು ಹೇಳೋ ಬುದ್ದಿವಾದ ಎಂದು ಓದಿ, ನೀನ್ಯಾವ ದೊಡ್ಡ ಮನುಷ್ಯ? ಎಂದು ನನ್ನನ್ನೇ ಪ್ರಶ್ನಿಸಬೇಡಿ. ಅದರ ಬದಲಿಗೆ ನಾನು 'ಕಲಿತ ಪಾಠ'ಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆಂದು ಓದಿದರೆ ಬಹಳ ಒಳ್ಳೆಯದು. ಈ ಲೇಖನಗಳಿಂದ ಅನುಕೂಲವಾಗಲಿ ಅನ್ನೋದು ನನ್ನ ಉದ್ದೇಶ, ಆದರೆ use your judgement.

೧) ಆತ್ಮವಿಶ್ವಾಸ (confidence)

ಸುಮ್ಮನೇ ಒಂದು ಕ್ಷಣ ಯೋಚಿಸಿ: ಭಾರತದಲ್ಲಿ ಇರೋ ಕೋಟ್ಯಾಂತರ ಜನರಲ್ಲಿ ನೀವೂ ಒಬ್ಬ ಇಂಜಿನಿಯರ್ ಅಥವಾ ಮತ್ತ್ಯಾವುದೋ ಪದವೀಧರ, ನಮ್ಮಲ್ಲಿ ಬೇಕಾದಷ್ಟು ಜನರಿಗೆ ಈ ಭಾಗ್ಯ ಇದೆ ಎಂದು ನೀವು ಅಂದುಕೊಂಡರೆ ತಪ್ಪು, ನಿಮ್ಮ ಒಂದನೇ ಕ್ಲಾಸಿನಲ್ಲಿ ಇದ್ದೋರಲ್ಲಿ ಇಂಜಿನಿಯರ್ ಆದವರಲ್ಲಿ ಎಷ್ಟು ಜನ ಎಂದು ಪ್ರಶ್ನಿಸಿಕೊಳ್ಳಿ - ಬೆಂಗಳೂರಿನ ವಾತಾವರಣದಲ್ಲಿ ಬೆಳೆದು ಬಂದವರಿಗೆ ಒಂದು ಉತ್ತರ ದೊರೆಯುತ್ತದೆ, ಆನವಟ್ಟಿಯ ವಾತಾವರಣದಲ್ಲಿ ಬೆಳೆದವರಿಗೆ ಮತ್ತೊಂದು - ಆದರೂ ಇಂದಿಗೂ ಕೋಟ್ಯಾಂತರ ಜನರಿಗೆ ತಮ್ಮ ಹೆಸರನ್ನೇ ಬರೆಯಲು ಬರದಿರುವಾಗ ಅವರೆಲ್ಲರ ಮಧ್ಯೆ ನೀವೊಬ್ಬ ಇಂಜಿನಿಯರ್ ಅಥವಾ ಸ್ನಾತಕೋತ್ತರ ಪದವೀಧರ ಎಂದುಕೊಂಡರೆ ಅದೇ ಮಹಾಭಾಗ್ಯ, ಎಲ್ಲರಿಗೂ ಅದು ದೊರೆಯೋದಿಲ್ಲ, ಅದಕ್ಕೂ ಪಡೆದುಕೊಂಡು ಬರಬೇಕು (ಏನನ್ನು ಅನ್ನೋದು ಇನ್ನೊಂದು ದಿನದ ವಿಷಯ).

ಹಾಗೆಯೇ, ಅಮೇರಿಕದಲ್ಲಿ ನೂರಕ್ಕೆ ನೂರು ಸಾಕ್ಷರತೆ ಇದೆ ಎಂದಾಕ್ಷಣ ಇಲ್ಲಿಯ ಚಿತ್ರಣ ಭಾರತಕ್ಕಿಂತ ಏನು ವಿಭಿನ್ನವಲ್ಲ - ಎಲ್ಲ ದೇಶಗಳ ಹಾಗೆ ಇಲ್ಲಿಯೂ ದೊಡ್ಡ ದೊಡ್ಡ ಆಫೀಸರುಗಳಿದ್ದಾರೆ, ರಸ್ತೆಯ ಬದಿಯಲ್ಲಿ ಹಾಟ್‌ಡಾಗ್ ಮಾರುವವರೂ ಇದ್ದಾರೆ, ಬಹಳಷ್ಟು ಓದಿ ಮುಂದೆ ಬಂದವರೂ ಇದ್ದಾರೆ, ನಿರಕ್ಷರ ಕುಕ್ಷಿಗಳೂ ಇದ್ದಾರೆ.

ನೀವು ಭಾರತದಲ್ಲೇ ಕೆಲಸ ಮಾಡಲಿ, ಅಥವಾ ಅಮೇರಿಕಕ್ಕೆ ಓದುವುದಕ್ಕಾಗಿಯೋ, ಅಥವಾ ಕೆಲಸ ಮಾಡುವ ಸಲುವಾಗಿಯೋ ಬಂದವರಾದರೆ ಸದಾ ಆತ್ಮವಿಶ್ವಾಸ ನಿಮ್ಮ ಜೊತೆಯಲ್ಲಿಯೇ ಇರಲಿ. ಪ್ರಪಂಚದಲ್ಲಿ ಎಷ್ಟೋ ಜನರಿಗೆ ಬರದಷ್ಟು ಇಂಗ್ಲೀಷ್ ನಿಮಗೆ ಬರುತ್ತದೆ, ಅಮೇರಿಕದ ೨೩೦+ ಮಿಲಿಯನ್ ಜನರಲ್ಲಿ ಎಲ್ಲರೂ ನಿಮ್ಮ ಹಾಗೆ ಇಂಜಿನಿಯರಿಂಗ್ ಮಾಡಿರೋದಿಲ್ಲ - ನೀವು ವಿದ್ಯಾಭ್ಯಾಸ, ಶಿಸ್ತು, ತಿಳುವಳಿಕೆಗಳಲ್ಲಿ ಈಗಾಗಲೇ ಅದೆಷ್ಟೋ ಜನರಿಗಿಂತ ಮುಂದಿದ್ದೀರಿ ಅನ್ನೋ ಆತ್ಮವಿಶ್ವಾಸ ನಿಮ್ಮಲ್ಲಿರಲಿ. ಈ ವಿಶ್ವಾಸ ದಾಷ್ಟ್ರ್ಯವಾಗಬಾರದು, ವಿನಯದ ಲೇಪನವಂತೂ ಯಾವಾಗಲೂ ಇರಲೇಬೇಕು, ಆದರೆ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ರೀತಿಯ ಕೀಳರಿಮೆಯನ್ನೂ ಈ ವಿಶ್ವಾಸ ಹೋಗಲಾಡಿಸಲಿ.

'ನಾನು ಯಾರಿಗಿಂತಲೂ ಕಡಿಮೆ ಏನೂ ಇಲ್ಲ, I am so happy to be here, I can do it!' ಎಂದು ನಿಮ್ಮಷ್ಟಕ್ಕೆ ನೀವೇ ಹೇಳಿಕೊಳ್ಳಿ/ಹೇಳಿಕೊಳ್ಳುತ್ತಿರಿ.

ಈ ಆತ್ಮವಿಶ್ವಾಸವೆನ್ನುವುದು ಸುಮ್ಮನೇ ಹೇಳುವುದಕ್ಕೆ ಮಾತ್ರವಲ್ಲ, ದಿನನಿತ್ಯದ ಬದುಕಿನಲ್ಲೂ ಅಲ್ಲಲ್ಲಿ ನಿಮ್ಮನ್ನು ಕೈ ಹಿಡಿದು ನಡೆಸುತ್ತಲೇ ಇರುತ್ತೆ, ನನ್ನ ಹೈ ಸ್ಕೂಲಿನಲ್ಲಿ ವಿಜ್ಞಾನ ಪಾಠ ಮಾಡುವ ಜ್ಯೋತಿ ಮೇಷ್ಟ್ರು ನನಗೆ ಅತಿಯಾದ ಆತ್ಮವಿಶ್ವಾಸವಿರೋದರಿಂದ ನನಗೆ ಕೆಡುಕಾಗಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೆ ನನಗೆ ಆಗಿದ್ದ ಅತಿಯಾದ ಆತ್ಮವಿಶ್ವಾಸ ಯಾವಾಗಲೂ ಇದ್ದ ಅತಿಯಾದ ಕೀಳರಿಮೆ ಜೊತೆಯಲ್ಲಿ ಕ್ಯಾನ್ಸಲ್ ಆದ್ದರಿಂದ ನನಗೆ ಒಳ್ಳೆಯದೇ ಎನಿಸಿದೆ, ಆದರೆ ನಿಮ್ಮ ಆತ್ಮವಿಶ್ವಾಸ ಅತಿಯಾಗದಿರಲಿ, ಅದು superiority complex ಅನ್ನು ಬೆಳೆಸದಿರಲಿ.

೨) ನಡೆದು ಬರೋ ದಾರಿ ಮತ್ತು ಗುರಿ (means and destination)

ಭಾರತದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಕೋರ್ಸುಗಳಲ್ಲಿ ಇಂಜಿನಿಯರಿಂಗೋ ಮತ್ತೊಂದೋ ಪದವಿಯನ್ನು ಆಯ್ದುಕೊಳ್ಳುತ್ತೇವೆ, ಆದರೆ ಅಲ್ಲಿ ಕಲಿತದ್ದಕ್ಕೆ ಅನುಸಾರವಾಗಿ ಮಾಡುವ ಉದ್ಯೋಗಗಳೂ ಇರಲೇಬೇಕೆಂದೇನೂ ಇಲ್ಲ. ಉದಾಹರಣೆಗೆ ಒಬ್ಬ ಕೆಮಿಕಲ್ ಇಂಜಿನಿಯರಿಂಗ್ ಓದಿದವನು ಇನ್‌ಫರ್‌ಮೇಷನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಬಹುದು, ಅಥವಾ ಒಬ್ಬ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವನು ಇನ್ಯಾವುದೋ ಕ್ಷೇತ್ರದಲ್ಲಿ ದುಡಿಯಬಹುದು. ನೀವು ಕಲಿತ ಅಪರೇಟಿಂಗ್ ಸಿಸ್ಟಮ್ ಬೇಸಿಕ್ ಆಗಲಿ, ನೀವು ಬರೆದ ಕಂಪೈಲರ್ ಆಗಲಿ ಅಥವಾ ನೀವೇ ಕಂಡುಹಿಡಿದ ನ್ಯೂಮೆರಿಕಲ್ ಸೊಲ್ಯೂಷನ್ನ್ ಆಗಲಿ ಬಹಳ ದೂರಗಳವರೆಗೆ ನಿಮ್ಮ ಕೈ ಹಿಡಿದು ನಡೆಸಬಲ್ಲದು, ಆದರೆ... ನಿಜ ಜೀವನ ಬಹಳ ಭಿನ್ನವಾದದ್ದು, ನಮ್ಮ ಆಫೀಸಿನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಕಾಲೇಜ್ ಗ್ರ್ಯಾಜುಯೇಟ್‌ಗಳನ್ನೂ, ಹಲವಾರು ಕಾಲೇಜ್ ಇಂಟರ್ನ್‌ಗಳನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ರಿಯಲ್ ಲೈಫ್ ಅನ್ನೋದು ಶಾಲೆಯಲ್ಲಿ ಓದಿದ ಹಂದರಕ್ಕಿಂತ ಭಿನ್ನವಾದದ್ದು, ನಿಜವಾದ ಬದುಕು ಒಡ್ಡೋ ಸವಾಲುಗಳನ್ನು ಎದುರಿಸೋದಕ್ಕೆ ನಿಮ್ಮನಿಮ್ಮ ವಿದ್ಯೆ ತಯಾರು ಮಾಡಲಿ. ಆಫೀಸಿನಲ್ಲಿ ನಾನು ಮಾಡೋ ಕೆಲಸ ಬಹಳ ಗ್ಲಾಮರಸ್ ಆಗೇನೂ ಕಂಡು ಬರೋದಿಲ್ಲ, ಒಂದು ಪ್ರಾಜೆಕ್ಟಿನ ಸ್ಕೋಪಿನಲ್ಲಿ ಒಬ್ಬ ಕೀ ಪ್ಲೇಯರ್ ಆಗಿ ನನ್ನ ಕೆಲಸವನ್ನು 'ಹೀಗೆ-ಇಂಥದು' ಎಂದು ಈ ಕಾಲೇಜ್ ಗ್ರ್ಯಾಜುಯೇಟ್‌ಗಳಿಗೆ ವಿವರಿಸೋದಕ್ಕೆ ಮೊದಲು ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ keeping the end in mind, ಅಂದರೆ ನಾವು ಮಾಡೋ ಪ್ರಾಜೆಕ್ಟ್ ಕೆಲಸದ ಅಲ್ಟಿಮೇಟ್ ರಿಸಲ್ಟ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ದಿನೇ-ದಿನೇ ಮಾಡೋ ಕೆಲಸಗಳನ್ನು ವಿವರಿಸಿದಾಗ ಎಲ್ಲವೂ ಸುಲಭವಾಗುತ್ತದೆ. ಮೇಲ್ನೋಟಕ್ಕೆ ನಾನು ಬರೀ ಇ-ಮೇಲ್ ಗಳನ್ನು ಓದಿ ಉತ್ತರಿಸೋನ ಹಾಗೆ ಕಂಡು ಬಂದರೂ ಪ್ರತಿಯೊಂದು ಇ-ಮೇಲ್ ನ ಹಿನ್ನೆಲೆ, ಅದರ ಬಿಸಿನೆಸ್ ಇಂಪ್ಲಿಕೇಷನ್, ಮುಂದಾಗುವ ಕೆಲಸಗಳನ್ನು ಯೋಚಿಸಿಕೊಂಡಾಗ ಎಲ್ಲವೂ ಸ್ಪಷ್ಟವಾಗುತ್ತದೆ.

ಬಹಳಷ್ಟು ಜನರು ಅಂದುಕೊಂಡ ಹಾಗೆ ನಿಜ ಜೀವನದ ಕೆಲಸಗಳು ಒಂದು ಸರಳ ಸಮೀಕರಣವಂತೂ ಅಲ್ಲ. ಅಲ್ಲದೇ ನಾವೂ- ನೀವು ಮಾಡೋ ಕೆಲಸಗಳಲ್ಲಿ ನಮ್ಮ ಗುರಿಗಳನ್ನು ನಾವು ತಲುಪುವಲ್ಲಿ external factors ಬೇಕಾದಷ್ಟು influence ಮಾಡುತ್ತವೆ: ಉದಾಹರಣೆಗೆ ನಾವು ಕೆಲಸ ಮಾಡೋ ಸಂಸ್ಥೆಗಳ ಸಂಸ್ಕೃತಿ ಅಲ್ಲಿನ ಆಗುಹೋಗುಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಒಂದು ಲಾಗಿನ್ ಆಕ್ಸೆಸ್ ಸಿಗುವುದಕ್ಕೆ ಒಂದು ದಿನ ಬೇಕಾ! ಎಂದು ಮೂಗಿನ ಮೇಲೆ ಬೆರಳಿಡುವ ಕಾಲೇಜ್ ಗ್ರ್ಯಾಜುಯೇಟ್‌ಗಳಿಗೆ ಅದರ ಹಿಂದಿನ ಪ್ರಾಸೆಸ್ಸುಗಳನ್ನು ಸುಮಾರು ಎರಡೂವರೆ ಲಕ್ಷ ಜನ ಕೆಲಸ ಮಾಡುವ ನಮ್ಮ Fortune 18 ನೇ ಕಂಪನಿಯಲ್ಲಿ ಹಿನ್ನೆಲೆಯಲ್ಲಿ ವಿವರಿಸುತ್ತೇನೆ, ಆಗ ಅವರುಗಳು ಮತ್ತೊಂದು ರೀತಿಯಲ್ಲಿ ಆಶ್ಚರ್ಯ ಚಕಿತರಾಗುವುದನ್ನೂ ನೋಡಿದ್ದೇನೆ.

So, ಒಂದೇ ಸಾಲಿನಲ್ಲಿ ಹೇಳುವುದಾದರೆ - ಗಂಭೀರ ಹಾಗೂ ರಚನಾತ್ಮಕ ಉದ್ದೇಶಗಳುಳ್ಳ ಯಾರೇ ಆದರೂ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳಲು ಸಿದ್ಧರಿರಬೇಕು. ಅದು GMAT ನಲ್ಲಿ 800 ಕ್ಕೆ 720 ಸ್ಕೋರು ಮಾಡುವ ಶಾರ್ಟ್ ಟರ್ಮ್ ಗುರಿ ಇರಬಹುದು, ಅಥವಾ ಯಾವುದೋ ಒಂದು ದೊಡ್ಡ ಕಂಪನಿಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗುವ ಲಾಂಗ್ ಟರ್ಮ್ ಉದ್ದೇಶವಿರಬಹುದು.

***

ಈ ಬರಹಗಳನ್ನು ಬರೆಯುತ್ತಾ ಬರೆಯುತ್ತಾ ನಾನೂ ಕಲಿಯುತ್ತಿದ್ದೇನೆ, ಈ ರೀತಿ ಹಿಂದೆಲ್ಲೂ ಬರೆದಿಲ್ಲವಾದ್ದರಿಂದ ಭಾಷೆ, ಅದರ ಬಳಕೆಯೂ ನನಗೆ ತೊಂದರೆ ಕೊಡುತ್ತಿದೆ.

ಈ ಸರಣಿಯ ಆರಂಭದ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಿಮಗೆ ಇಂಥ ಲೇಖನಗಳಿಂದ ಏನಾದರೂ ಅನುಕೂಲ ಕಂಡು ಬರುತ್ತಿದೆಯೇ? ನಿಮ್ಮ ಪ್ರಶ್ನೆ-ಸಲಹೆ-ಅನಿಸಿಕೆಗಳನ್ನು ಬರೆಯಿರಿ, ಇಲ್ಲಾ ಇ-ಮೇಲ್ ಮುಖಾಂತರ ನನಗೆ ತಿಳಿಸಿ: hrskumar@gmail.com

***

ಮುಂದಿನ ಶನಿವಾರ:

3) Tell me about yourself!
4) 'Just' two page resume!