Saturday, August 26, 2006

ನಿಮ್ಮನ್ನು ನೀವು ಮೆಚ್ಚಿಸುವ ವಿಧಾನ - ಭಾಗ ೧

8) How to dress and "smell" for success!

ಎರಡು ಅಂಶಗಳನ್ನು ಮೊದಲೇ ಹೇಳಿ ಬಿಟ್ಟರೆ ಒಳ್ಳೆಯದು: ೧) ನೀವು ಏನು ಮಾಡುತ್ತೀರಿ, ಬಿಡುತ್ತೀರಿ ಎನ್ನುವುದು ನಿಮಗೇ ಬಿಟ್ಟದ್ದು, ನಿಮ್ಮ ಬಗ್ಗೆ ಯೋಚಿಸಲು ಉಳಿದವರಿಗೆ ಪುರುಸ್ತೊತ್ತಿಲ್ಲ; ೨) ನೀವು ಏನನ್ನು ತೊಟ್ಟುಕೊಂಡಿದ್ದೀರಿ, ಹೇಗೆ ಮಾತನಾಡುತ್ತೀರಿ, ನಿಮ್ಮನ್ನು ನೀವು ಹೇಗೆ ತೋರಿಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ಬೇಕಾದಷ್ಟು ನಿರ್ಧಾರಿತವಾಗುತ್ತದೆ.

ಮೇಲಿನ ಹೇಳಿಕೆಗಳಲ್ಲಿ ೧) ಮತ್ತು ೨) ಒಂದಕ್ಕೊಂದು contradictory ಆಗಿ ಕಾಣುತ್ತಿವೆಯೇ? ಹಾಗೆ ಕಾಣಲಿ ಎಂಬುದೇ ನನ್ನ ಉದ್ದೇಶ!

ನಾನು ಅಮೇರಿಕೆಗೆ ಬಂದ ಹೊಸತರಲ್ಲಿ ನನ್ನ ಸಹೋದ್ಯೋಗಿ ಕೆನ್ ಲೆನರ್ಡ್ (Ken Leonard) ನನಗೆ ಸಾಕಷ್ಟು ವಿಷಯಗಳಲ್ಲಿ ಮಾರ್ಗದರ್ಶಿಯಾಗಿದ್ದ. ಅವನೇನೂ ನನಗೆ ಕಲಿಸಬೇಕು ಎಂದು ಕಲಿಸುತ್ತಿರಲಿಲ್ಲ, ಅವನು ಹೇಳುವ ವಿಷಯಗಳಲ್ಲಿ ನನಗೆ ಸಾಕಷ್ಟು ಕ್ಲೂ ಸಿಗುತ್ತಿದ್ದವು. ಒಂದು ದಿನ ಮುಂಜಾನೆ ಕಾಫಿ ಕುಡಿಯಲು ಹೋಗುತ್ತಿರುವಾಗ ಮಧ್ಯೆ ನಮ್ಮ ಆಫೀಸಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಒಬ್ಬರ ಪರಿಚಯವನ್ನು ಕೆನ್ ಮಾಡಿಕೊಟ್ಟ - ಹೊಸದಾಗಿ ಅಂದರೆ ಒಂದು ವರ್ಷದ ಒಳಗೆ. 'ನಾವೆಲ್ಲರೂ ಬಿಸಿನೆಸ್ ಕ್ಯಾಷುವಲ್ ದಿರಿಸಿನಲ್ಲಿದ್ದರೆ ಆ ಮನುಷ್ಯ ಯಾವಾಗಲೂ ಸೂಟ್ ತೊಟ್ಟಿರುತ್ತಾನೆ, ಅವನು ಏನು ಮಾಡುತ್ತಾನೋ ಬಿಡುತ್ತಾನೋ ನನಗಂತೂ ಗೊತ್ತಿಲ್ಲ, ಆದರೆ ಅವನು ಬಂದಂದಿನಿಂದ ಮ್ಯಾನೇಜ್‌ಮೆಂಟ್ ಕ್ಯಾಡರ್ ನಲ್ಲಿ ಮೇಲೇರುತ್ತಲೇ ಇದ್ದಾನೆ' ಎಂದು ನಂತರ ಹೇಳಿದ, ನನಗೇನೂ ಅನ್ನಿಸಲಿಲ್ಲ, ನಾನು ಆ ಮಾತನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟೆ.

ಆದರೆ ಅಂದಿನಿಂದ ಯಾರು ಯಾರು ಏನನ್ನು ತೊಡುತ್ತಾರೆ, ಹೇಗೆ ವ್ಯವಹರಿಸುತ್ತಾರೆ ಎನ್ನುವುದನ್ನೆಲ್ಲ ಸೂಕ್ಷ್ಮವಾಗಿ ಗಮನಿಸತೊಡಗಿದೆ. ಮುಂದೆ ಕೆನ್ ಕೆಲಸವನ್ನು ಬಿಟ್ಟು ಮತ್ತೆಲ್ಲೋ ಹೋದ, ನಾನೂ ಆ ಕಂಪನಿಯನ್ನು ಬಿಟ್ಟು ಬೇರೊಂದನ್ನು ಸೇರಿಕೊಂಡೆ.

ಈಗ ಸ್ವಲ್ಪ ಕಾಲ ಹಿಂದೆ ಹೋಗೋಣ - ನಾವೆಲ್ಲರೂ ಹೈಸ್ಕೂಲು ಮುಗಿಸಿ ಕಾಲೇಜು ಸೇರಿದಾಗ, ಪಿಯುಸಿ ಮುಗಿಸಿ ಡಿಗ್ರಿ ಸೇರಿಕೊಂಡಾಗ, ಮುಂದೆ ಕೆಲಸಕ್ಕೆ ಸೇರಿಕೊಂಡಾಗ ನಮ್ಮಲ್ಲೆಲ್ಲಾ ಆದ ಬದಲಾವಣೆಗಳನ್ನು ನಾವು ಗುರುತಿಸಿಕೊಂಡಿದ್ದೇವೆಯೇ? ನಾವು ಹಲ್ಲುಜ್ಜುವುದನ್ನು ಹೇಗೆ ಕಲಿತುಕೊಂಡೆವೋ, ಶೇವ್ ಮಾಡುವುದನ್ನು ಯಾರಿಂದ ಕಲಿತೆವೋ, ಮುಖಕ್ಕೆ ಮೇಕಪ್ ತೀಡುವುದನ್ನು ಎಲ್ಲಿಂದ ಶುರು ಮಾಡಿದೆವೋ ಎಂದೆಲ್ಲಾ ತಿರುಗಿ ನೋಡುತ್ತಾ ಹೋದಾಗ ನಾವು ಆಫೀಸಿಗೆ ಯಾವ ರೀತಿಯ ಬಟ್ಟೆಗಳನ್ನು ತೊಡುತ್ತೇವೆ, ಸಂದರ್ಶನಗಳಿಗೆ ಯಾವ ರೀತಿಯ ಬಟ್ಟೆಯನ್ನು ತೊಡಬೇಕು ಎನ್ನುವುದನ್ನೆಲ್ಲ ಹೇಗೆ ಕಲಿತೆವು, ಯಾರು ಹೇಳಿಕೊಟ್ಟರು ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯವಿದ್ದಲ್ಲಿ ಧನಾತ್ಮಕ ಬದಲಾವಣೆಗಳನ್ನು ಮಾಡಿ ನಾವು ನಮ್ಮನ್ನು ಹೆಚ್ಚಿನ ಮಟ್ಟದಲ್ಲಿ marketing ಮಾಡಿಕೊಳ್ಳುವುದೇ ಈ ಬರಹದ ಉದ್ದೇಶ. ನಾವು ಅನುಸರಿಸುವ ರೀತಿ-ನೀತಿಗಳು ನಮಗೆ ಅಭ್ಯಾಸವಾಗಿ ಹೋಗಿವೆ, ಅವು ನಮ್ಮ ಸ್ವಭಾವದ ಒಂದು ಭಾಗವಾಗಿ ಹೋಗಿರೋದರಿಂದ ಬದಲಾವಣೆಯೇನಾದರೂ ಮಾಡಬೇಕಾಗಿ ಬಂದರೆ ಅಂತಹ ಬದಲಾವಣೆಗಳು ಸಾಕಷ್ಟು ಪ್ರತಿರೋಧವನ್ನು ಎದುರಿಸಬೇಕಾಗಿ ಬರುತ್ತದೆ.

ಈಗ ನಾವು ತೊಡುವ ಶೂಸ್ ನಿಂದ ಆರಂಭಿಸೋಣ - ಗಂಡಸರಿಗೆ ಇವು ಕೆಲವು ಕೆಲವು ಬಣ್ಣಗಳಲ್ಲಿ ಮಾತ್ರ ಲಭ್ಯ, ಕಪ್ಪು, ಕಂದು (tan), ತಿಳಿ ಹಳದಿ, ಇನ್ನೇನೇ ಬಣ್ಣಗಳಿದ್ದರೂ - ಅವುಗಳನ್ನೆಲ್ಲ ನ್ಯೂಟ್ರಲ್ ಗುಂಪಿಗೆ ಸೇರಿಸೋಣ (ಶೂ ಪಾಲಿಷ್ ಸಿಗುವುದು ಹಾಗೆ ಮಾತ್ರ ತಾನೆ), ಅದೇ ಹೆಂಗಸರಿಗಾದರೆ ಇನ್ನೊಂದಿಷ್ಟು ಬಣ್ಣಗಳನ್ನು ಸೇರಿಸಬಹುದು, ಆದರೆ ಅವರು ಶೂ ಪಾಲಿಷ್ ಮಾಡುತ್ತಾರಾ ಬಿಡುತ್ತಾರಾ ಅನ್ನೋದನ್ನು ಅವರಿಗೇ ಬಿಡೋಣ.

ರೂಲ್ ನಂಬರ್ ೧: ಬಿಸಿನೆಸ್ ಕ್ಯಾಷುಯಲ್, ಅಥವಾ ಡ್ರೆಸ್ (ಫಾರ್ಮಲ್) ವೇರ್‌ನ ಇತಿಮಿತಿಯಲ್ಲಿ - ನಿಮ್ಮ ಶೂಸ್ ಬಣ್ಣ ಹಾಗೂ ನೀವು ತೊಡುವ ಬೆಲ್ಟ್ ಬಣ್ಣ ಒಂದೇ ಆಗಿರಬೇಕು.
ರೂಲ್ ನಂಬರ್ ೨: ನೀವು ಧರಿಸುವ ಫ್ಯಾಂಟ್ ಬಣ್ಣ ಹಾಗೂ ನೀವು ಧರಿಸುವ ಸಾಕ್ಸ್ ಬಣ್ಣ ಎರಡೂ ಮ್ಯಾಚ್ ಆಗಬೇಕು.

ಇವೆರಡೂ ಬಹಳ ಸರಳವಾದ ರೂಲ್ ಅನ್ನಿಸಬಹುದು, ಇಂದಿನಿಂದ ನೀವೇ ನೋಡುತ್ತಾ ಹೋಗಿ ಎಷ್ಟು ಜನರು ಇದನ್ನು ಫಾಲೋ ಮಾಡುತ್ತಾರೆ ಎಂದು. ಈ ರೂಲ್‌ಗಳನ್ನು ನಾನು ಸೃಷ್ಟಿಸಿಲ್ಲ, ಬಹಳಷ್ಟು ಜನರು ಬಳಸಬಹುದಾದ ರೀತಿ-ನೀತಿ ನನ್ನ ಕಣ್ಣಿಗೆ ಹಾಗೆ ಕಂಡುಬಂದಿದೆ, ಅಷ್ಟೇ.

ರೂಲ್ ನಂಬರ್ ೩: ನೀವು ಇಸ್ತ್ರಿ ಹಾಕಿಸದ ಬಟ್ಟೆಯನ್ನು ಆಫೀಸಿಗಾಗಲೀ, ಸಂದರ್ಶನಕ್ಕಾಗಲೀ ತೊಡಲೇಬೇಡಿ. ನಿಮಗೆ ನಿಮ್ಮ ಬಟ್ಟೆಗಳನ್ನು ಒಗೆದು, ಇಸ್ತ್ರಿ ಹಾಕಿಸಲು ಸಮಯವಿಲ್ಲದಿದ್ದರೆ ಸ್ವಲ್ಪ ಕಾಸು ಬಿಚ್ಚಿ.

ಡಾರ್ಕ್ ಬಣ್ಣದ ಪ್ಯಾಂಟು ಅಥವಾ ಸೂಟಿಗೆ ಲೈಟ್ ಬಣ್ಣದ ಶರ್ಟ್ ಹಾಕಬೇಕು ಎಂದೇನೂ ನಿಯಮವಿಲ್ಲ, ನಿಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ, ನಿಮಗೆ ಇಷ್ಟವಾಗುವ ಯಾವ ಬಣ್ಣದ ಶರ್ಟನ್ನಾದರೂ ಧರಿಸಿ, ಆದರೆ ಹೊಸ ಹೊಸ ಪ್ರಯೋಗಗಳನ್ನು ಇಂಟರ್‌ವ್ಯೂ ದಿನ ಮಾಡದೇ ಅದನ್ನೆಲ್ಲ ಇನ್ಯಾವುದೋ ಒಂದು ದಿನ ಇಟ್ಟುಕೊಳ್ಳಿ.

ರೂಲ್ ನಂಬರ್ ೪: ನೀವು ತೊಡುವ ಟೈ ಬಣ್ಣ ನಿಮ್ಮ ಸೂಟು ಹಾಗು ಶರ್ಟ್ ಎರಡಕ್ಕೂ ಹೊಂದುವಂತಿರಲಿ, ಅಲ್ಲದೇ ಟೈ ಉದ್ದ ಪ್ಯಾಂಟಿನ ಬಕಲ್‌ನ ಕೆಳಭಾಗಕ್ಕೆ ಬರುವಂತಿರಲಿ.

ಥರಾವರಿ ಸೂಟುಗಳು, ಅವುಗಳ ವಿಧದಲ್ಲಿ ಯಾವುದನ್ನು ತೊಡುವುದು, ಬಿಡುವುದು ಎನ್ನುವ ಸಂದೇಹವಿದ್ದರೆ ಸಿಂಗಲ್ ಬ್ರೆಸ್ಟೆಡ್ ಅಥವಾ ಡಬಲ್ ಬ್ರೆಸ್ಟೆಡ್ ಸೂಟು ಯಾವುದಾದರೂ ಆದೀತು. ಆದರೆ ಡಬಲ್ ಬ್ರೆಸ್ಟೆಡ್ ಸೂಟ್ ಇದ್ದರೆ ಅದಕ್ಕೆ ತಕ್ಕಂತೆ ಧರಿಸುವ ಶರ್ಟ್ ಕಾಲರ್ ತುದಿಯಲ್ಲಿ ಬಟನ್ ಇಲ್ಲದಿರಲಿ.

ಇನ್ನು ಪ್ಯಾಂಟಿನ ವಿಷಯಕ್ಕೆ ಬಂದರೆ - ಅದರ ಉದ್ದ ನೀವು ಶೂಸ್ ಧರಿಸಿದ ಮೇಲೆ ನಿಮ್ಮ ಎತ್ತರಕ್ಕೆ ತಕ್ಕನಾಗಿರಲಿ, ಮೇಲಿಂದ ಕೆಳಗೆ ಎಲ್ಲೂ ಬ್ರೇಕ್ ಆಗದೆ ಪ್ಯಾಂಟಿನ ಹೆಮ್ ಶೂಸ್ ಮುಟ್ಟುವಲ್ಲಿ ಒಂದು ಮಡಿಕೆ ಬಿದ್ದರೆ ಸಾಕು. ನಿಮ್ಮ ಪ್ಯಾಂಟಿನಲ್ಲಿ ನೆರಿಗೆ (pleat) ಇದ್ದರೆ ಕೆಳಗೆ ಹೆಮ್ ಹಾಕುವಲ್ಲಿ ಫೋಲ್ಡ್ ಮಾಡಿ ಹೊಲಿದಿದ್ದರೆ ಚೆನ್ನಾಗಿರುತ್ತೆ, ಇಲ್ಲವೆಂದರೂ ಪರವಾಗಿಲ್ಲ.

ಇನ್ನು ಕೊನೆಯದಾಗಿ, ಅದು ಶುಕ್ರವಾರವಿರಲಿ, ಶನಿವಾರವಿರಲಿ ಆಫೀಸಿನ ಕೆಲಸದಲ್ಲಿರುವಾಗ ಜೀನ್ಸ್ ಹಾಗೂ ಸ್ನೀಕರ್ಸ್ ಅನ್ನು ತೊಡಲೇಬೇಡಿ - ಬುಸಿನೆಸ್ ಕ್ಯಾಷುವಲ್ ಬಟ್ಟೆಗಳಲ್ಲಿ ಜೀನ್ಸ್ ಬರುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು ಅಲ್ಲಿ-ಇಲ್ಲಿ ಓದಿದಂತೆ ಜೀನ್ಸ್ ತೊಡುವುದನ್ನು ಯಾರೂ ರೆಕಮಂಡ್ ಮಾಡಿದ ಹಾಗಿಲ್ಲ.

ಇನ್ನು ಮುಂದಿನವಾರಗಳಲ್ಲಿ ಡ್ರೆಸ್ ಮಾಡುವುದರ ಬಗ್ಗೆ ಮುಂದುವರಿಸುತ್ತೇನೆ, ಜೊತೆಯಲ್ಲಿ ವಾಸನೆಯ ಬಗ್ಗೆಯೂ ಚರ್ಚಿಸೋಣ.

0 Comments:

Post a Comment

<< Home