Friday, August 18, 2006

ದುಡ್ಡೇ ದೊಡ್ಡಪ್ಪ, ಆದ್ರೂ...

7) How much money are you looking for?

ಹಣ ಅಂದ್ರೆ ಯಾರಿಗೆ ಬೇಡ? ಆದರೂ ಸಹ ಈ ಪ್ರಶ್ನೆಗೆ ಉತ್ತರವನ್ನು ಮೊದಲೇ ಯೋಚಿಸಿಕೊಳ್ಳುವುದು ಒಳ್ಳೆಯದು, ಇಲ್ಲವೆಂದಾದರೆ ಕೈಗೆ ಬಂದದ್ದು ಬಾಯಿಗೆ ಬಾರದೇ ಹೋದೀತು. ಈ ಪ್ರಶ್ನೆಗೆ ಉತ್ತರ ಬಹಳ ಸುಲಭ, ಅದರೆ ಪ್ರತಿಯೊಬ್ಬರ ಸ್ಥಿತಿಗತಿಯನ್ನು ಅವಲಂಭಿಸಿ ಹೇಳಬೇಕಾಗುತ್ತೆ - ಕೆಳಗಿನ ಉದಾಹರಣೆಗಳನ್ನು ನೋಡಿ, ಅವುಗಳಲ್ಲಿ ನಿಮಗೆ ಅನುಕೂಲವಾಗುವುದನ್ನು ಬಳಸಿಕೊಳ್ಳಬಹುದು. ನಿಮ್ಮ ತಲೆಯಲ್ಲಿ ಹಲವಾರು ಆಲೋಚನೆಗಳು ಓಡಿದ ಹಾಗೆ ನಿಮ್ಮನ್ನು ಸಂದರ್ಶಿಸುವವರ ತಲೆಯಲ್ಲಿಯೂ ಹಲವಾರು ಆಲೋಚನೆಗಳು ಹುಟ್ಟುತ್ತಿರುತ್ತವೆ ಎನ್ನುವುದನ್ನು ಮರೆಯಬೇಡಿ. ಬೇರೇನಿಲ್ಲವೆಂದರೂ ನನಗೇ ಇಂತಿಷ್ಟೇ ಹಣಬೇಕು, ನನಗೆ ಪ್ರೊಮೋಷನ್ ಬೇಕು ಎಂದು ಪಟ್ಟು ಹಿಡಿಯಬೇಡಿ. ನಿಮ್ಮನ್ನು ಉದ್ದೇಶಿಸಿ 'If we hire you, how much do you want?' ಎಂದು ಕೇಳಿದರೂ ಸಹ ನೀವು ಇಂತಿಷ್ಟೇ ಎಂದು ಡಾಲರ್ ಅಥವಾ ರುಪಾಯಿಗಳಲ್ಲಿ ಹೇಳಬೇಕಾಗಿಲ್ಲ, ಬದಲಿಗೆ ಉತ್ತರವಾಗಿ I will accept any competitive offer, ಅಥವಾ I am fine with current market rate ಎಂದಷ್ಟೇ ಸೂಚ್ಯವಾಗಿ ಹೇಳಿ.

ಅಲ್ಲದೇ ನೀವು ಮಾಹಿತಿ ತಂತ್ರಜ್ಞಾನದಲ್ಲಿ ಕೆಲಸ ಮಾಡುತ್ತಿರಬಹುದು, ವೈದ್ಯರಿರಬಹುದು, ಆಳವಾದ ಸಮುದ್ರದಲ್ಲಿ ಮುತು-ರತ್ನಗಳನ್ನು ಶೋಧಿಸುವವರಿರಬಹುದು, ಪರ್ವತಾರೋಹಿಗಳಿರಬಹುದು, ರೂಪಾಯಿಗೆ ಹನ್ನೆರಡು ಜನ ಸಿಗುವ ಯಾವುದೋ ಸುಲಭವಾದ ಕೆಲಸ ಮಾಡುತ್ತಿರಬಹುದು ಅಥವಾ ಪ್ರಪಂಚದಲ್ಲಿ ಈ ಬಗೆಯ ಕೆಲಸ ಮಾಡುವವರಲ್ಲಿ ನೀವೊಬ್ಬರೇ ಇದ್ದಿರಬಹುದು. ನೀವು ಬೇಡುವ ಸಂಬಳ/ಹಣ ನಿಮ್ಮ ಯೋಗ್ಯತೆ, ಈಗಿನ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಬೆಲೆ ಹಾಗೂ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿರುವ ಕಂಪನಿ, ಮುಂತಾದವುಗಳ ಮೇಲೆ ಅವಲಂಭಿತವಾಗುತ್ತದೆ. ಹಾಗೂ ನಿಮಗೆ ಎಷ್ಟು ಹಣ ಬೇಕು ಎನ್ನುವುದನ್ನು ಸಂದರ್ಶನದ ಯಾವ ಹಂತದಲ್ಲಿ ಕೇಳಿದ್ದಾರೆನ್ನೆವುದರ ಮೇಲೂ ತೀರ್ಮಾನವಾಗುತ್ತದೆ - ಅದು ಮೊದಲ ಸುತ್ತಿನ ಹ್ಯೂಮನ್ ರಿಸೋರ್ಸ್ ನವರ ಕಾಲ್ ಇದ್ದಿರಬಹುದು ಅಥವಾ ಏಳು ಸುತ್ತು ಸಂದರ್ಶನವಾದ ಬಳಿಕ ಕೊನೆಯ ಹಂತದಲ್ಲಿ ಹಣಕಾಸಿನ ವಿಷಯವನ್ನು ಮಾತನಾಡುತ್ತಿರಬಹುದು.

ಇನ್ನೂ ಎರಡು ವಿಷಯವನ್ನು ನೆನಪಿಡಿ: ನಿಮ್ಮ ಸಂಬಳ - ಪ್ರತಿ ಘಂಟೆಗೆ ಇಷ್ಟು ಅಥವಾ ವರ್ಷ/ತಿಂಗಳಿಗೆ ಇಷ್ಟು ಎಂಬುದರ ಜೊತೆಯಲ್ಲಿ ಎನೇನು ಅನುಕೂಲಗಳು (benefits) ಸೇರಿವೆ (ವರ್ಷದ ರಜಾ ಸಮಯ, ಹೆಲ್ತ್, ಡೆಂಟಲ್ ಇನ್ಷೂರೆನ್ಸ್, ಪ್ರಾವಿಡೆಂಟ್ ಫಂಡ್, ರಿಟೈರ್‌ಮೆಂಟ್ ಫಂಡ್ ಕಾಂಟ್ರಿಬ್ಯೂಷನ್, ಸ್ಟಾಕ್ ಆಪ್ಷನ್ಸ್, ಇತ್ಯಾದಿ) ಎನ್ನುವುದೂ ಬಹಳ ಮುಖ್ಯ, ಕಂಪನಿ ಕೊಡುವ ಸವಲತ್ತುಗಳನ್ನು ಸಮನಾಂತರ ಡಾಲರ್/ರೂಪಾಯಿ ಬೆಲೆಗೆ ಪರಿವರ್ತಿಸಿ ಅದರ ಮೌಲ್ಯವನ್ನು ತೂಗಬಹುದು. ಹಾಗೂ ನೀವು ಯಾವ ಊರು/ರಾಜ್ಯದಲ್ಲಿ ಕೆಲಸ ಮಾಡುತ್ತೀರಿ, ಅಲ್ಲಿ ಟ್ಯಾಕ್ಸ್ ಪರ್ಸೆಂಟ್ ಎಷ್ಟಿದೆ ಎನ್ನುವುದೂ ಮುಖ್ಯ - ಈ ನಿಟ್ಟಿನಲ್ಲಿ ಉದಾಹರಣೆಗೆ ಹೇಳುವುದಾದರೆ ನನ್ನ ಪ್ರಕಾರ ನ್ಯೂ ಯಾರ್ಕ್ ಸಿಟಿಯಲ್ಲಿ ವರ್ಷಕ್ಕೆ 75,000 ಪಡೆದು ಕೆಲಸ ಮಾಡುವುದರ ಬದಲಿಗೆ ದಕ್ಷಿಣ ನ್ಯೂ ಜೆರ್ಸಿ ಅಥವಾ ವರ್ಜೀನಿಯಾದಲ್ಲಿ 60,000 ಕೆಲಸ ಮಾಡಬಹುದೋ ಏನೋ, cost of living ಜೊತೆಗೆ ವರ್ಷದ ಕೊನೆಯಲ್ಲಿ ಫೈಲ್ ಮಾಡಿ ಕಟ್ಟಬೇಕಾದ ಟ್ಯಾಕ್ಸ್‌ನ್ನೂ ಸಹ ಮನಸ್ಸಿನ್ನಲ್ಲಿಟ್ಟುಕೊಳ್ಳುವುದು ಒಳ್ಳೆಯದು.

ನಿಮ್ಮ ಸಂದರ್ಶನ ನಡೆಯುವುದಕ್ಕಿಂತ ಮೊದಲು ನಿಮ್ಮ ಈಗಿನ/ಹಿಂದಿನ ಸಂಬಳದ ಬಗ್ಗೆ ಆ ಕಡೆಯಿಂದ ನೇರವಾಗಿ ಪ್ರಶ್ನೆ ಬಂದಾಗ ನಿಮಗೆ ಬೇರೆ ವಿಧಿಯೇ ಇಲ್ಲದೇ ನೀವು ನಿಜವಾದ ಉತ್ತರವನ್ನು ಕೊಡಲೇಬೇಕಾಗುತ್ತದೆ (ಸುಳ್ಳನ್ನು ಮಾತ್ರ ಹೇಳಲು ಹೋಗಬೇಡಿ), ಈಗ ಸಂಬಳ ಇಂತಿಷ್ಟು ಬರುತ್ತಿದೆ ಎಂದು ಹೇಳಿದ ಬಳಿಕವೂ ನೀವು ಚೌಕಾಶಿ ಮಾಡಿ ನಿಮಗೆ ಬೇಕಾದ ಸಂಬಳವನ್ನು ಹೊಸ ಕೆಲಸದಲ್ಲಿ ಪಡೆಯಬಹುದು - ಆದರೆ ಅದಕ್ಕೆ ಬೇರೊಂದು ಸೂತ್ರವನ್ನು ಬಳಸಬೇಕಾಗುತ್ತದೆ. ಅಲ್ಲದೇ ನಿಮ್ಮ ಈಗಿನ ಸಂಬಳ ಆ ಕಡೆಯಿಂದ ಮಾತನಾಡುತ್ತಿರುವ ವ್ಯಕ್ತಿಯ ಲೆಕ್ಕಾಚಾರದ ಪ್ರಕಾರ ತುಂಬಾ ಕಡಿಮೆ ಅಥವಾ ಹೆಚ್ಚು ಎನ್ನಿಸಿದರೆ ನಿಮಗೆ ಮುಂದೆ ಹೋಗಲು ಸಾಧ್ಯವೇ ಇಲ್ಲದಿರಬಹುದು. ಆದ್ದರಿಂದಲೇ ನೀವು ಇರುವ ವಿಷಯವನ್ನು ಇದ್ದ ಹಾಗೆ ಹೇಳಿ ನಿಮ್ಮ ನಿರೀಕ್ಷೆ ಏನು ಎನ್ನುವುದನ್ನು ಮೊದಲೇ ಯೋಚಿಸಿಕೊಂಡಿರಿ. ಆದರೆ ಒಂದಂತೂ ಗ್ಯಾರಂಟಿ, ನೇರವಾದ ಪ್ರಶ್ನೆಯಿಂದ ನಿಮ್ಮ ಈಗಿನ ಸಂಬಳವನ್ನು ತಿಳಿದುಕೊಂಡ ವ್ಯಕ್ತಿಯಿಂದ ನೀವು ಬಹಳಷ್ಟು ಹೆಚ್ಚಳವನ್ನು ನಿರೀಕ್ಷಿಸಲಾಗುವುದಿಲ್ಲ (unless you change something), ಅಬ್ಬಬ್ಬಾ ಎಂದರೆ ಹತ್ತು-ಹದಿನೈದು ಶೇಕಡಾ ಹೆಚ್ಚಾಗಬಹುದು. ಅದಕ್ಕಿಂತ ಹೆಚ್ಚು ಕೇಳುವುದೆಂದರೆ ನೀವು ನಿಮ್ಮನ್ನು prove ಮಾಡಬೇಕಾಗುತ್ತದೆ ಅಥವಾ ಹೆಚ್ಚು ಕೇಳುವುದಕ್ಕೆ ಬೇರೇನಾದರೂ ಸಬೂಬು ಕೊಡಬೇಕಾಗುತ್ತದೆ - ಇತ್ತೀಚೆಗೆ ಪಡೆದ ಡಿಗ್ರಿಯೋ, ಸರ್ಟಿಫಿಕೇಟೋ, ಸ್ಪೆಷಲೈಜೇಷನ್ನೋ, ಇತ್ಯಾದಿ.

ಅಮೇರಿಕದಲ್ಲಿ ನಾನು ನೋಡಿದ ಹಾಗೆ, ಉದಾಹರಣೆಗೆ ಹೇಳುವುದಾದರೆ ನರ್ಸಿಂಗ್, ಫಾರ್ಮಸಿ, ವೈದ್ಯಕೀಯದಲ್ಲಿ ಬೇಕಾದಷ್ಟು ಬೇಡಿಕೆ ಇದೆ, ಇಂತಹ ಕೆಲಸಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ನೀವು upper hand ನಲ್ಲ್ರಿರುತ್ತೀರಿ, ಅದೇ ಇನ್‌ಫರ್‌ಮೇಷನ್ ‍ಟೆಕ್ನಾಲಜಿಯ ಮೈನ್‌ಫ್ರೇಮ್ ವಿಭಾಗದಲ್ಲಿ ಅಷ್ಟೊಂದು ಬೇಡಿಕೆ ಇಲ್ಲ, ಆಗ ಅವರು ಹೇಳಿದಂತೆ ನೀವು ಕೇಳಬೇಕಾದ ಸಂದರ್ಭ ಬರಬಹುದು.

ನನ್ನ ಪ್ರಕಾರ ನಿಮ್ಮನ್ನು ಸಂದರ್ಶನ ಮಾಡಿದವರು ನಿಮ್ಮ ಯೋಗ್ಯತೆಗೆ ತಕ್ಕಂತೆ ಇಂತಿಷ್ಟು ಕೊಡುತ್ತೇವೆ ಎಂದು ನಿರ್ಧರಿಸುವುದು ಸರಿ, ಪ್ರತಿಯೊಂದು ಕೆಲಸದ ಸಂಬಳದಲ್ಲೂ ಒಂದು ರೇಂಜ್ ಇರುತ್ತದೆ, ಅಕಸ್ಮಾತ್ ನಿಮ್ಮನ್ನು ಆ ರೇಂಜ್‌ನ ಕೆಳ ಮಟ್ಟದಲ್ಲಿ ಕೆಲಸಕ್ಕೆ ಬರುವಂತೆ ಕೇಳಿದರೆ, ನೀವು ಸ್ವಲ್ಪ ಯೋಚಿಸಬೇಕಾಗಿ ಬರಬಹುದು. ಆದರೆ ಕೆಲಸಕ್ಕೆ ಸೇರುವ ಕಂಪನಿಯ ಪಾಲಿಸಿಯ ಮೇಲೆ ನಿರ್ಧಾರಿತವಾಗುವಂತೆ ಆಲೋಚಿಸಿ - ಉದಾಹರಣೆಗೆ ನೀವು ಕೆಲಸಕ್ಕೆ ಸೇರುವ ಕಂಪನಿಯಲ್ಲಿ ವರ್ಷಕ್ಕೆ ಎರಡು ಸಾರಿ ಯೋಗ್ಯತೆಗನುಸಾರವಾಗಿ ಸಂಬಳದಲ್ಲಿ ಹೆಚ್ಚಳ, ಭಡ್ತಿಗಳನ್ನು ಕೊಡುತ್ತಾರೆಂದರೆ ನೀವು ಮೇಲೆ ಬರಲು ಬಹಳಷ್ಟು ಅವಕಾಶಗಳಿರುತ್ತವೆ, ಅದರ ಬದಲಿಗೆ ಇವತ್ತು ಸೇರು, ಇನ್ನು ಐದು ವರ್ಷಗಳಾದ ಮೇಲೆ ನೋಡೋಣ ಎಂದರೆ ಬಹಳ ಕಷ್ಟ.

ಈ ವಿಷಯವನ್ನು ಮೊದಲೇ ಬರೆಯಬೇಕಾಗಿತ್ತು - ನಿಮ್ಮ ಸಂಬಳವನ್ನು ಬಹು ಮುಖ್ಯವಾಗಿ ನಿರ್ಧಾರ ಮಾಡಬೇಕಾದದ್ದು ನಿಮ್ಮ ಯೋಗ್ಯತೆಗಿಂತಲೂ ನಿಮ್ಮ ಅಗತ್ಯ. ನಿಮಗೆ ಇದ್ದ ಕೆಲಸ ಕೈ ತಪ್ಪಿ ಹೋಗಿ ಆರು ತಿಂಗಳಾಗಿ, ಮನೆಯಲ್ಲಿ ತಿನ್ನುವ ಕೈ-ಬಾಯಿಗಳಿಗೆ ಹಿಟ್ಟಿಲ್ಲದೇ ಹೋದಾಗ, ಕ್ರೆಡಿಟ್ ಕಾರ್ಡ್ ಕಂಪನಿಯವರು ದಿನಕ್ಕೊಮ್ಮೆ ಫೋನ್ ಮಾಡಿ ಹಿಂಸಿಸುವಾಗ ಬೇರೆ ವಿಧಿಯಿಲ್ಲದೇ ಅವರು ಕೊಟ್ಟಷ್ಟನ್ನು ತೆಗೆದುಕೊಳ್ಳಬೇಕಾಗಿ ಬರುತ್ತದೆ. ಬದಲಿಗೆ 'ಊರಲ್ಲಿ ಗದ್ದೇ ಇದೆ, ಬ್ಯಾಂಕಲ್ಲಿ ದುಡ್ಡಿದೆ - ನನಗೇನ್ ಕಡಿಮೆ' ಅನ್ನೋದು ನಿಮ್ಮ ಸ್ಟೇಟ್‌ಮೆಂಟ್ ಆದರೆ ಅವರು ಕೊಡುವುದಕ್ಕಿಂತ ಎರಡು ಪಟ್ಟು ಕೇಳಿ, ಯಾರು ಬೇಡಾ ಅಂದೋರು?

ನಿಮ್ಮ ಭವಿಷ್ಯದ ಸಂಬಳದ ಬಗ್ಗೆ ಪ್ರಶ್ನೆಯನ್ನು ಕೇಳಿದವರು ಯಾರು ಎನ್ನುವುದರ ಮೇಲೂ ನಿಮ್ಮ ಉತ್ತರವನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಸುಮ್ಮನೇ ಸ್ಕ್ರೀನಿಂಗ್‌ಗೆಂದು ಎಚ್.ಆರ್. ನವರು ಕೇಳುವುದಕ್ಕೊಂದು ಉತ್ತರ, ಅಂಕೆ-ಸಂಖ್ಯೆಗಳನ್ನು ಬದಲಾಯಿಸಬಲ್ಲ ಅಥಾರಿಟಿ ಇರುವ ಮೇಲಧಿಕಾರಿಗಳಿಗೆ ಮತ್ತೊಂದು ಉತ್ತರ - ಇವೆಲ್ಲವನ್ನು ಮೊದಲೇ ಯೋಚಿಸಿಕೊಂಡಿರಿ. ಸಂಬಳದ ವಿಷಯ ಬಹು ಮುಖ್ಯವಾದದ್ದು ಅದನ್ನು ಯಾವ ಕಾರಣಕ್ಕೂ ಹಗುರವಾಗಿ ತೆಗೆದುಕೊಳ್ಳಬೇಡಿ.

ಕೊನೆಯಲ್ಲಿ, ನಿಮ್ಮ ಈಗಿನ, ಮುಂದಿನ ಅಂಕೆ-ಸಂಖ್ಯೆಗಳನ್ನು ಯಾವ ಕಾರಣಕ್ಕೂ ಸಂದರ್ಶನವಾಗುವ ಮೊದಲು, ನಂತರ ಯಾರಲ್ಲೂ ಹೇಳಿಕೊಳ್ಳಬೇಡಿ. ನಿಮ್ಮ ಸಹೋದ್ಯೋಗಿಗಳಿಗೆ ನಿಮಗೆ ಬರುವ ಸಂಬಳದ ವಿಷಯ ಗೊತ್ತಾಗದಿರುವಂತೆ ನಡೆದುಕೊಳ್ಳಿ - ಸುಮ್ಮನೇ ಅನವಶ್ಯಕ ಗೊಂದಲಗಳನ್ನು ಹುಟ್ಟಿಸಿಕೊಳ್ಳಬೇಡಿ.

***

ಹೆಚ್ಚು ಹಣ ಎಲ್ಲರಿಗೂ ಬೇಕು, ದುಡ್ಡೇ ದೊಡ್ಡಪ್ಪ; ಆದರೂ ಹಣಕಾಸಿನ ವಿಷಯವನ್ನು ಹಗುರವಾಗಿ ಪರಿಗಣಿಸದೇ ವ್ಯವಸ್ಥಿತವಾಗಿ ಸಂಬಾಳಿಸದಿದ್ದಲ್ಲಿ ನೀವು ಸೊರಗುತ್ತೀರಿ, ಕೊರಗುತ್ತೀರಿ - ನೆನಪಿರಲಿ.

***
ಮುಂದಿನ ಶನಿವಾರ:
8) How to dress and "smell" for success! (ಇದರ ಬಗ್ಗೆ ಬರೆದ್ರೆ ಒಂದ್ ಪುಸ್ತಕಾನೇ ಬರೀಬಹುದು, ಎರಡು ಭಾಗಗಳಲ್ಲಿ ಕವರ್ ಮಾಡೋದಕ್ಕೆ ಪ್ರಯತ್ನಿಸ್‌ತೀನಿ)
9) When is the good time for job search?

1 Comments:

Anonymous Anonymous said...

ನಿಮ್ಮ ಲೇಖನ ಓದಿದೆ.ತುಂಬಾ ಚೆನ್ನಾಗಿದೆ.ನಾನೂ ಅಳವಡಿಸಿಕೊಳ್ಳುತ್ತೇನೆ.

- ರಂಜಿತ್ .ಎಮ್ ,ಚಿಕ್ಕಮಗಳೂರು.

1:50 PM  

Post a Comment

<< Home