Sunday, July 23, 2006

ಆತ್ಮವಿಶ್ವಾಸ, ನಡೆದು ಬರೋ ದಾರಿ ಮತ್ತು ಗುರಿ

ಹತ್ತು ವರ್ಷಗಳಿಗಿಂತ ಹೆಚ್ಚು ಸ್ವಲ್ಪ ಅಲ್ಲಿ-ಹೆಚ್ಚಾಗಿ ಇಲ್ಲಿ ಕೆಲಸ ಮಾಡಿ, ಹಲವಾರು ವರ್ಷಗಳಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಎಷ್ಟೋ ಜನರಿಗೆ ಸಲಹೆಗಳನ್ನು ನೀಡುವುದರ ಮೂಲಕ, ನನ್ನ ಅನುಭವಗಳ ಹಿನ್ನೆಲೆಯಲ್ಲಿ, ಓದಿದ ಎಷ್ಟೋ ಪುಸ್ತಕಗಳ ಸಹಾಯದಿಂದ ಹಾಗೂ ನನ್ನನ್ನು ಅಲ್ಲಲ್ಲಿ ಕೈ ಹಿಡಿದು ನಡೆಸಿದ ದೊಡ್ಡವರ ನೆರಳಿನಲ್ಲಿ ನಾನೂ 'ಅಂತರಂಗ'ದಲ್ಲಿ ಪರ್ಸನಲ್ ಡೆವಲಪ್‌ಮೆಂಟ್, ಕರಿಯರ್ ಡೆವಲಪ್‌ಮೆಂಟ್ ಬಗ್ಗೆ ಬರೆದರೆ ಹೇಗೆ ಎನ್ನಿಸಿತು. ಇದರಿಂದ ಈ ಅಂಕಣವನ್ನು ಓದೋ ಎಷ್ಟೋ ಜನರಲ್ಲಿ ಕೆಲವರಿಗಾದರೂ ಮಾರ್ಗದರ್ಶನವಾದರೂ ಅದು ತುಂಬಾ ದೂರ ಹೋಗಬಲ್ಲದು. ಈ ನಿಟ್ಟಿನಲ್ಲಿ ಒಂದು ವೇದಿಕೆಯನ್ನು ಸಿದ್ಧ ಪಡಿಸಿ, ಇಲ್ಲಿ ಭಾರತದಲ್ಲಿ ಓದಿ ಭಾರತದಲ್ಲೇ ಕೆಲಸ ಮಾಡುತ್ತಿರುವ, ಮುಂದೆ ಎಂದಾದರೂ ವಿದೇಶಕ್ಕೆ ಬರುವ ಹವಣಿಕೆಯಲ್ಲಿರುವ ಹಾಗೂ ವಿದೇಶಕ್ಕೆ ಈಗಾಗಲೇ ಬಂದು ಇಲ್ಲಿನ ಮ್ಯಾನೇಜ್‌ಮೆಂಟ್ ಲೆವೆಲ್‌ಗಳಲ್ಲಿ ಅಲ್ಲಲ್ಲಿ ಕಣಗಳ ಹಾಗೆ ಸಿಕ್ಕಿ ಹಾಕಿಕೊಂಡಿರುವ (ನನ್ನನ್ನೂ ಸೇರಿ) ಕೆಲವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಾ ಹೋಗುತ್ತೇನೆ. ಓದುಗರ ಪ್ರತಿಕ್ರಿಯೆಯನ್ನು ಅವಲಂಭಿಸಿ ಈ ಲೇಖನಗಳು ಯಾವ ತಿರುವನ್ನು ಬೇಕಾದರೂ ಪಡೆಯಬಹುದು. ಒಟ್ಟಿನಲ್ಲಿ ನನ್ನ ಸಲಹೆಗಳಿಂದ ನಿಮಗೇನಾದರೂ ಅನುಕೂಲವಾಗುವುದಾದರೆ ಅದು ನನ್ನ ಖುಷಿ, ಲೇಖನದುದ್ದಕ್ಕೂ ಬೋರ್ ಹೊಡೆಸದೆ ಅಲ್ಲಲ್ಲಿ ತಿಳಿ ಹಾಸ್ಯವನ್ನು ತುಂಬಿ ಓದಿಸಿಕೊಂಡು ಹೋಗುವಂತೆ ಮಾಡುವುದು ನನ್ನ ಸವಾಲು.

ಪ್ರತಿ ಶನಿವಾರಗಳನ್ನು ಈ ಉದ್ದೇಶಕ್ಕೆ ಇಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೇನೆ - ನೋಡೋಣ ಇದು ಎಲ್ಲಿಯವರೆಗೆ ಬರುತ್ತೋ ಎಂದು!

ಸೂಚನೆ: ಈ ಲೇಖನಗಳನ್ನು ನಾನು ಹೇಳೋ ಬುದ್ದಿವಾದ ಎಂದು ಓದಿ, ನೀನ್ಯಾವ ದೊಡ್ಡ ಮನುಷ್ಯ? ಎಂದು ನನ್ನನ್ನೇ ಪ್ರಶ್ನಿಸಬೇಡಿ. ಅದರ ಬದಲಿಗೆ ನಾನು 'ಕಲಿತ ಪಾಠ'ಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆಂದು ಓದಿದರೆ ಬಹಳ ಒಳ್ಳೆಯದು. ಈ ಲೇಖನಗಳಿಂದ ಅನುಕೂಲವಾಗಲಿ ಅನ್ನೋದು ನನ್ನ ಉದ್ದೇಶ, ಆದರೆ use your judgement.

೧) ಆತ್ಮವಿಶ್ವಾಸ (confidence)

ಸುಮ್ಮನೇ ಒಂದು ಕ್ಷಣ ಯೋಚಿಸಿ: ಭಾರತದಲ್ಲಿ ಇರೋ ಕೋಟ್ಯಾಂತರ ಜನರಲ್ಲಿ ನೀವೂ ಒಬ್ಬ ಇಂಜಿನಿಯರ್ ಅಥವಾ ಮತ್ತ್ಯಾವುದೋ ಪದವೀಧರ, ನಮ್ಮಲ್ಲಿ ಬೇಕಾದಷ್ಟು ಜನರಿಗೆ ಈ ಭಾಗ್ಯ ಇದೆ ಎಂದು ನೀವು ಅಂದುಕೊಂಡರೆ ತಪ್ಪು, ನಿಮ್ಮ ಒಂದನೇ ಕ್ಲಾಸಿನಲ್ಲಿ ಇದ್ದೋರಲ್ಲಿ ಇಂಜಿನಿಯರ್ ಆದವರಲ್ಲಿ ಎಷ್ಟು ಜನ ಎಂದು ಪ್ರಶ್ನಿಸಿಕೊಳ್ಳಿ - ಬೆಂಗಳೂರಿನ ವಾತಾವರಣದಲ್ಲಿ ಬೆಳೆದು ಬಂದವರಿಗೆ ಒಂದು ಉತ್ತರ ದೊರೆಯುತ್ತದೆ, ಆನವಟ್ಟಿಯ ವಾತಾವರಣದಲ್ಲಿ ಬೆಳೆದವರಿಗೆ ಮತ್ತೊಂದು - ಆದರೂ ಇಂದಿಗೂ ಕೋಟ್ಯಾಂತರ ಜನರಿಗೆ ತಮ್ಮ ಹೆಸರನ್ನೇ ಬರೆಯಲು ಬರದಿರುವಾಗ ಅವರೆಲ್ಲರ ಮಧ್ಯೆ ನೀವೊಬ್ಬ ಇಂಜಿನಿಯರ್ ಅಥವಾ ಸ್ನಾತಕೋತ್ತರ ಪದವೀಧರ ಎಂದುಕೊಂಡರೆ ಅದೇ ಮಹಾಭಾಗ್ಯ, ಎಲ್ಲರಿಗೂ ಅದು ದೊರೆಯೋದಿಲ್ಲ, ಅದಕ್ಕೂ ಪಡೆದುಕೊಂಡು ಬರಬೇಕು (ಏನನ್ನು ಅನ್ನೋದು ಇನ್ನೊಂದು ದಿನದ ವಿಷಯ).

ಹಾಗೆಯೇ, ಅಮೇರಿಕದಲ್ಲಿ ನೂರಕ್ಕೆ ನೂರು ಸಾಕ್ಷರತೆ ಇದೆ ಎಂದಾಕ್ಷಣ ಇಲ್ಲಿಯ ಚಿತ್ರಣ ಭಾರತಕ್ಕಿಂತ ಏನು ವಿಭಿನ್ನವಲ್ಲ - ಎಲ್ಲ ದೇಶಗಳ ಹಾಗೆ ಇಲ್ಲಿಯೂ ದೊಡ್ಡ ದೊಡ್ಡ ಆಫೀಸರುಗಳಿದ್ದಾರೆ, ರಸ್ತೆಯ ಬದಿಯಲ್ಲಿ ಹಾಟ್‌ಡಾಗ್ ಮಾರುವವರೂ ಇದ್ದಾರೆ, ಬಹಳಷ್ಟು ಓದಿ ಮುಂದೆ ಬಂದವರೂ ಇದ್ದಾರೆ, ನಿರಕ್ಷರ ಕುಕ್ಷಿಗಳೂ ಇದ್ದಾರೆ.

ನೀವು ಭಾರತದಲ್ಲೇ ಕೆಲಸ ಮಾಡಲಿ, ಅಥವಾ ಅಮೇರಿಕಕ್ಕೆ ಓದುವುದಕ್ಕಾಗಿಯೋ, ಅಥವಾ ಕೆಲಸ ಮಾಡುವ ಸಲುವಾಗಿಯೋ ಬಂದವರಾದರೆ ಸದಾ ಆತ್ಮವಿಶ್ವಾಸ ನಿಮ್ಮ ಜೊತೆಯಲ್ಲಿಯೇ ಇರಲಿ. ಪ್ರಪಂಚದಲ್ಲಿ ಎಷ್ಟೋ ಜನರಿಗೆ ಬರದಷ್ಟು ಇಂಗ್ಲೀಷ್ ನಿಮಗೆ ಬರುತ್ತದೆ, ಅಮೇರಿಕದ ೨೩೦+ ಮಿಲಿಯನ್ ಜನರಲ್ಲಿ ಎಲ್ಲರೂ ನಿಮ್ಮ ಹಾಗೆ ಇಂಜಿನಿಯರಿಂಗ್ ಮಾಡಿರೋದಿಲ್ಲ - ನೀವು ವಿದ್ಯಾಭ್ಯಾಸ, ಶಿಸ್ತು, ತಿಳುವಳಿಕೆಗಳಲ್ಲಿ ಈಗಾಗಲೇ ಅದೆಷ್ಟೋ ಜನರಿಗಿಂತ ಮುಂದಿದ್ದೀರಿ ಅನ್ನೋ ಆತ್ಮವಿಶ್ವಾಸ ನಿಮ್ಮಲ್ಲಿರಲಿ. ಈ ವಿಶ್ವಾಸ ದಾಷ್ಟ್ರ್ಯವಾಗಬಾರದು, ವಿನಯದ ಲೇಪನವಂತೂ ಯಾವಾಗಲೂ ಇರಲೇಬೇಕು, ಆದರೆ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ರೀತಿಯ ಕೀಳರಿಮೆಯನ್ನೂ ಈ ವಿಶ್ವಾಸ ಹೋಗಲಾಡಿಸಲಿ.

'ನಾನು ಯಾರಿಗಿಂತಲೂ ಕಡಿಮೆ ಏನೂ ಇಲ್ಲ, I am so happy to be here, I can do it!' ಎಂದು ನಿಮ್ಮಷ್ಟಕ್ಕೆ ನೀವೇ ಹೇಳಿಕೊಳ್ಳಿ/ಹೇಳಿಕೊಳ್ಳುತ್ತಿರಿ.

ಈ ಆತ್ಮವಿಶ್ವಾಸವೆನ್ನುವುದು ಸುಮ್ಮನೇ ಹೇಳುವುದಕ್ಕೆ ಮಾತ್ರವಲ್ಲ, ದಿನನಿತ್ಯದ ಬದುಕಿನಲ್ಲೂ ಅಲ್ಲಲ್ಲಿ ನಿಮ್ಮನ್ನು ಕೈ ಹಿಡಿದು ನಡೆಸುತ್ತಲೇ ಇರುತ್ತೆ, ನನ್ನ ಹೈ ಸ್ಕೂಲಿನಲ್ಲಿ ವಿಜ್ಞಾನ ಪಾಠ ಮಾಡುವ ಜ್ಯೋತಿ ಮೇಷ್ಟ್ರು ನನಗೆ ಅತಿಯಾದ ಆತ್ಮವಿಶ್ವಾಸವಿರೋದರಿಂದ ನನಗೆ ಕೆಡುಕಾಗಬಹುದು ಎಂದು ಎಚ್ಚರಿಕೆ ಕೊಟ್ಟಿದ್ದರು. ಆದರೆ ನನಗೆ ಆಗಿದ್ದ ಅತಿಯಾದ ಆತ್ಮವಿಶ್ವಾಸ ಯಾವಾಗಲೂ ಇದ್ದ ಅತಿಯಾದ ಕೀಳರಿಮೆ ಜೊತೆಯಲ್ಲಿ ಕ್ಯಾನ್ಸಲ್ ಆದ್ದರಿಂದ ನನಗೆ ಒಳ್ಳೆಯದೇ ಎನಿಸಿದೆ, ಆದರೆ ನಿಮ್ಮ ಆತ್ಮವಿಶ್ವಾಸ ಅತಿಯಾಗದಿರಲಿ, ಅದು superiority complex ಅನ್ನು ಬೆಳೆಸದಿರಲಿ.

೨) ನಡೆದು ಬರೋ ದಾರಿ ಮತ್ತು ಗುರಿ (means and destination)

ಭಾರತದಲ್ಲಿ ನಾವೆಲ್ಲರೂ ಒಂದಲ್ಲ ಒಂದು ಕೋರ್ಸುಗಳಲ್ಲಿ ಇಂಜಿನಿಯರಿಂಗೋ ಮತ್ತೊಂದೋ ಪದವಿಯನ್ನು ಆಯ್ದುಕೊಳ್ಳುತ್ತೇವೆ, ಆದರೆ ಅಲ್ಲಿ ಕಲಿತದ್ದಕ್ಕೆ ಅನುಸಾರವಾಗಿ ಮಾಡುವ ಉದ್ಯೋಗಗಳೂ ಇರಲೇಬೇಕೆಂದೇನೂ ಇಲ್ಲ. ಉದಾಹರಣೆಗೆ ಒಬ್ಬ ಕೆಮಿಕಲ್ ಇಂಜಿನಿಯರಿಂಗ್ ಓದಿದವನು ಇನ್‌ಫರ್‌ಮೇಷನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡಬಹುದು, ಅಥವಾ ಒಬ್ಬ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದವನು ಇನ್ಯಾವುದೋ ಕ್ಷೇತ್ರದಲ್ಲಿ ದುಡಿಯಬಹುದು. ನೀವು ಕಲಿತ ಅಪರೇಟಿಂಗ್ ಸಿಸ್ಟಮ್ ಬೇಸಿಕ್ ಆಗಲಿ, ನೀವು ಬರೆದ ಕಂಪೈಲರ್ ಆಗಲಿ ಅಥವಾ ನೀವೇ ಕಂಡುಹಿಡಿದ ನ್ಯೂಮೆರಿಕಲ್ ಸೊಲ್ಯೂಷನ್ನ್ ಆಗಲಿ ಬಹಳ ದೂರಗಳವರೆಗೆ ನಿಮ್ಮ ಕೈ ಹಿಡಿದು ನಡೆಸಬಲ್ಲದು, ಆದರೆ... ನಿಜ ಜೀವನ ಬಹಳ ಭಿನ್ನವಾದದ್ದು, ನಮ್ಮ ಆಫೀಸಿನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಕಾಲೇಜ್ ಗ್ರ್ಯಾಜುಯೇಟ್‌ಗಳನ್ನೂ, ಹಲವಾರು ಕಾಲೇಜ್ ಇಂಟರ್ನ್‌ಗಳನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ರಿಯಲ್ ಲೈಫ್ ಅನ್ನೋದು ಶಾಲೆಯಲ್ಲಿ ಓದಿದ ಹಂದರಕ್ಕಿಂತ ಭಿನ್ನವಾದದ್ದು, ನಿಜವಾದ ಬದುಕು ಒಡ್ಡೋ ಸವಾಲುಗಳನ್ನು ಎದುರಿಸೋದಕ್ಕೆ ನಿಮ್ಮನಿಮ್ಮ ವಿದ್ಯೆ ತಯಾರು ಮಾಡಲಿ. ಆಫೀಸಿನಲ್ಲಿ ನಾನು ಮಾಡೋ ಕೆಲಸ ಬಹಳ ಗ್ಲಾಮರಸ್ ಆಗೇನೂ ಕಂಡು ಬರೋದಿಲ್ಲ, ಒಂದು ಪ್ರಾಜೆಕ್ಟಿನ ಸ್ಕೋಪಿನಲ್ಲಿ ಒಬ್ಬ ಕೀ ಪ್ಲೇಯರ್ ಆಗಿ ನನ್ನ ಕೆಲಸವನ್ನು 'ಹೀಗೆ-ಇಂಥದು' ಎಂದು ಈ ಕಾಲೇಜ್ ಗ್ರ್ಯಾಜುಯೇಟ್‌ಗಳಿಗೆ ವಿವರಿಸೋದಕ್ಕೆ ಮೊದಲು ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ keeping the end in mind, ಅಂದರೆ ನಾವು ಮಾಡೋ ಪ್ರಾಜೆಕ್ಟ್ ಕೆಲಸದ ಅಲ್ಟಿಮೇಟ್ ರಿಸಲ್ಟ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ದಿನೇ-ದಿನೇ ಮಾಡೋ ಕೆಲಸಗಳನ್ನು ವಿವರಿಸಿದಾಗ ಎಲ್ಲವೂ ಸುಲಭವಾಗುತ್ತದೆ. ಮೇಲ್ನೋಟಕ್ಕೆ ನಾನು ಬರೀ ಇ-ಮೇಲ್ ಗಳನ್ನು ಓದಿ ಉತ್ತರಿಸೋನ ಹಾಗೆ ಕಂಡು ಬಂದರೂ ಪ್ರತಿಯೊಂದು ಇ-ಮೇಲ್ ನ ಹಿನ್ನೆಲೆ, ಅದರ ಬಿಸಿನೆಸ್ ಇಂಪ್ಲಿಕೇಷನ್, ಮುಂದಾಗುವ ಕೆಲಸಗಳನ್ನು ಯೋಚಿಸಿಕೊಂಡಾಗ ಎಲ್ಲವೂ ಸ್ಪಷ್ಟವಾಗುತ್ತದೆ.

ಬಹಳಷ್ಟು ಜನರು ಅಂದುಕೊಂಡ ಹಾಗೆ ನಿಜ ಜೀವನದ ಕೆಲಸಗಳು ಒಂದು ಸರಳ ಸಮೀಕರಣವಂತೂ ಅಲ್ಲ. ಅಲ್ಲದೇ ನಾವೂ- ನೀವು ಮಾಡೋ ಕೆಲಸಗಳಲ್ಲಿ ನಮ್ಮ ಗುರಿಗಳನ್ನು ನಾವು ತಲುಪುವಲ್ಲಿ external factors ಬೇಕಾದಷ್ಟು influence ಮಾಡುತ್ತವೆ: ಉದಾಹರಣೆಗೆ ನಾವು ಕೆಲಸ ಮಾಡೋ ಸಂಸ್ಥೆಗಳ ಸಂಸ್ಕೃತಿ ಅಲ್ಲಿನ ಆಗುಹೋಗುಗಳ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಒಂದು ಲಾಗಿನ್ ಆಕ್ಸೆಸ್ ಸಿಗುವುದಕ್ಕೆ ಒಂದು ದಿನ ಬೇಕಾ! ಎಂದು ಮೂಗಿನ ಮೇಲೆ ಬೆರಳಿಡುವ ಕಾಲೇಜ್ ಗ್ರ್ಯಾಜುಯೇಟ್‌ಗಳಿಗೆ ಅದರ ಹಿಂದಿನ ಪ್ರಾಸೆಸ್ಸುಗಳನ್ನು ಸುಮಾರು ಎರಡೂವರೆ ಲಕ್ಷ ಜನ ಕೆಲಸ ಮಾಡುವ ನಮ್ಮ Fortune 18 ನೇ ಕಂಪನಿಯಲ್ಲಿ ಹಿನ್ನೆಲೆಯಲ್ಲಿ ವಿವರಿಸುತ್ತೇನೆ, ಆಗ ಅವರುಗಳು ಮತ್ತೊಂದು ರೀತಿಯಲ್ಲಿ ಆಶ್ಚರ್ಯ ಚಕಿತರಾಗುವುದನ್ನೂ ನೋಡಿದ್ದೇನೆ.

So, ಒಂದೇ ಸಾಲಿನಲ್ಲಿ ಹೇಳುವುದಾದರೆ - ಗಂಭೀರ ಹಾಗೂ ರಚನಾತ್ಮಕ ಉದ್ದೇಶಗಳುಳ್ಳ ಯಾರೇ ಆದರೂ ಸಾಕಷ್ಟು ಬೇಸರವನ್ನು ಸಹಿಸಿಕೊಳ್ಳಲು ಸಿದ್ಧರಿರಬೇಕು. ಅದು GMAT ನಲ್ಲಿ 800 ಕ್ಕೆ 720 ಸ್ಕೋರು ಮಾಡುವ ಶಾರ್ಟ್ ಟರ್ಮ್ ಗುರಿ ಇರಬಹುದು, ಅಥವಾ ಯಾವುದೋ ಒಂದು ದೊಡ್ಡ ಕಂಪನಿಯಲ್ಲಿ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗುವ ಲಾಂಗ್ ಟರ್ಮ್ ಉದ್ದೇಶವಿರಬಹುದು.

***

ಈ ಬರಹಗಳನ್ನು ಬರೆಯುತ್ತಾ ಬರೆಯುತ್ತಾ ನಾನೂ ಕಲಿಯುತ್ತಿದ್ದೇನೆ, ಈ ರೀತಿ ಹಿಂದೆಲ್ಲೂ ಬರೆದಿಲ್ಲವಾದ್ದರಿಂದ ಭಾಷೆ, ಅದರ ಬಳಕೆಯೂ ನನಗೆ ತೊಂದರೆ ಕೊಡುತ್ತಿದೆ.

ಈ ಸರಣಿಯ ಆರಂಭದ ಬಗ್ಗೆ ನಿಮ್ಮ ಅನಿಸಿಕೆಗಳೇನು? ನಿಮಗೆ ಇಂಥ ಲೇಖನಗಳಿಂದ ಏನಾದರೂ ಅನುಕೂಲ ಕಂಡು ಬರುತ್ತಿದೆಯೇ? ನಿಮ್ಮ ಪ್ರಶ್ನೆ-ಸಲಹೆ-ಅನಿಸಿಕೆಗಳನ್ನು ಬರೆಯಿರಿ, ಇಲ್ಲಾ ಇ-ಮೇಲ್ ಮುಖಾಂತರ ನನಗೆ ತಿಳಿಸಿ: hrskumar@gmail.com

***

ಮುಂದಿನ ಶನಿವಾರ:

3) Tell me about yourself!
4) 'Just' two page resume!

2 Comments:

Blogger Veena Shivanna said...

Very good initiative.
Will come back to read more, I would suggest few of my cousins and brother to go through.

Thanks!

3:37 AM  
Blogger sanjaykattimani said...

Great effort. Keep it up.

9:23 AM  

Post a Comment

<< Home