Saturday, March 10, 2007

ಕೆಲಸ ಸಿಕ್ಕಾಯಿತು ಮುಂದೇನು - ಭಾಗ ಎರಡು

ನಿಮಗೆ ಸಿಕ್ಕ ಹೊಸ ಕೆಲಸ ಪ್ರೊಮೋಷನಲ್ ಆಪರ್ಚುನಿಟಿ ಆಗಿರಬಹುದು, ಅಥವಾ ನೀವು ಹಿಂದೆ ಇದ್ದ ಲೆವೆಲ್‌ನಲ್ಲೇ ಬೇರೆಯ ಕೆಲಸವಿರಬಹುದು, ಅಥವಾ ನಿಮ್ಮ ಹಿಂದಿನ ಕೆಲಸಕ್ಕೂ ಈ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲದಿರಬಹುದು. ಹೊಸ ಕೆಲಸ ಹೇಗೇ ಇರಲಿ, ಒಂದು ಮಾತನ್ನು ಚೆನ್ನಾಗಿ ನೆನಪಿನಲ್ಲಿಡಿ - ನೀವು ಹಿಂದಿನ ಕೆಲಸದಲ್ಲಿ ಬಳಸುತ್ತಿದ್ದ ತಂತ್ರ, ರೀತಿ-ನೀತಿ-ವಿಧಾನಗಳು ಈ ಹೊಸ ಕೆಲಸಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವುದಿಲ್ಲ.

ಹೊಸ ಕೆಲಸ ಬೇಕಾದಷ್ಟು ರೀತಿಯಿಂದ ಹಳೆಯ ಕೆಲಸಕ್ಕೆ ಹೋಲಿಸಿದಲ್ಲಿ ಭಿನ್ನವಾಗಿರುವುದೇ ಸಾಕಷ್ಟು ತೊಂದರೆ ಕೊಡಬಲ್ಲದು, ಆದರೆ ನಿಮ್ಮ ಬದಲಾದ ಪರಿಸರ ನಿಮ್ಮಲ್ಲಿಯೂ ಬದಲಾವಣೆಗಳನ್ನು ಬೇಡುವುದು ಸಹಜ. ಹಿಂದಿನ ಕೆಲಸದಲ್ಲಿ ನೀವು ಈಗಾಗಲೇ ಹಲವಾರು ತಿಂಗಳು/ವರ್ಷಗಳನ್ನು ಸವೆಸಿ ಆಫೀಸಿನ ಮೂಲೆ-ಮೂಲೆಗಳಿಗೂ ನಿಮ್ಮನ್ನು ಪರಿಚಯ ಮಾಡಿಕೊಂಡಿದ್ದಿರಬಹುದು, ಅದಕ್ಕೆ ತಕ್ಕನಾಗಿ ಈ ಹೊಸ ಕೆಲಸದಲ್ಲಿ ಎಲ್ಲವೂ ಹೊಸತೇ. ಹಾಗಿದ್ದ ಮೇಲೆ ಹೊಸ ಕೆಲಸದ ಪರಿಧಿಯನ್ನು ಹತ್ತಿರದಿಂದ ವೀಕ್ಷಿಸಿ ಅದಕ್ಕೆ ತಕ್ಕನಾದ ಬದಲಾವಣೆಗಳನ್ನು ಮಾಡಿಕೊಳ್ಳುವುದು ನಿಮಗೆ ಸಹಜವಾಗಿ ಸಿದ್ಧಿಸಿದ ಕಲೆಯಾಗಿರಲಿ. ಸುಮ್ಮನೇ ಉದಾಹರಣೆಗೆ ಈ ಕೆಳಗಿನ ಸಿಚುವೇಷನ್‌ಗಳನ್ನು ನೋಡಿ:

- ನಿಮ್ಮ ಹಳೆಯ ಆಫೀಸಿನಲ್ಲಿ ಎಲ್ಲರೂ ಮೀಟಿಂಗುಗಳಲ್ಲಿ ನೋಟ್‌ಬುಕ್‌ನಲ್ಲಿ ಧೀರ್ಘವಾಗಿ ಬರೆದುಕೊಂಡಿದ್ದು, ಹೊಸ ಆಫೀಸು/ಕೆಲಸ ಹೆಚ್ಚು-ಹೆಚ್ಚು ಎಲೆಕ್ಟ್ರಾನಿಕ್‌ಮಯವಾಗಿ ಕಂಡುಬರುವುದು
- ನಿಮ್ಮ ಹಳೆಯ ಅಫೀಸಿನಲ್ಲಿ ಮೀಟಿಂಗುಗಳು ಸರಿಯಾದ ಸಮಯಕ್ಕೆ ಆರಂಭವಾಗಿ ಸರಿಯಾದ ಸಮಯಕ್ಕೆ ಅಂತ್ಯವಾಗುತ್ತಿದ್ದು, ಈ ಹೊಸ ಅಫೀಸಿನಲ್ಲಿ ಚರ್ಚೆಗೆ ಗಮನ ಕೊಡುತ್ತಾರೆಯೇ ಹೊರತು ಸಮಯಕ್ಕಲ್ಲ ಎನಿಸುವುದು
- ಹೊಸ ಆಫೀಸಿನಲ್ಲಿ ಕಂಡಕಂಡದ್ದಕ್ಕೆಲ್ಲ ಪವರ್‌ಪಾಯಿಂಟ್ ಸ್ಲೈಡುಗಳನ್ನು ಬಳಸುವುದು
- ಹೊಸ ಆಫೀಸಿನಲ್ಲಿ ಬಾಸು, ಬಾಸಿನ ಬಾಸು, ಬಾಸಿನ-ಬಾಸಿನ-ಬಾಸು ಮುಂತಾದವರೆಲ್ಲ ನಿಮ್ಮನ್ನು ಹುಡುಕಿಕೊಂಡು ಯಾವಾಗ ಬೇಕಂದರೆ ಆಗ ಬಂದು ಮಾಹಿತಿಯನ್ನು ಅರಸುವುದು
- ಹೊಸ ಅಫೀಸಿನಲ್ಲಿ ಎಲ್ಲರೂ ಬೆಳಗ್ಗೆ ಏಳು ಘಂಟೆಗೆಲ್ಲ ಪ್ರತ್ಯಕ್ಷರಾಗಿ ಯಾವುದೋ ಯುದ್ಧಕ್ಕೆ ಸಿದ್ಧತೆಯನ್ನು ನಡೆಸುತ್ತಿರುವಂತೆ ಕಂಡುಬರುವುದು
...

ಹೀಗೇ ಉದಾಹರಣೆಗೆಂದು ಕೊಟ್ಟ ಬದಲಾವಣೆಗಳೇ ನಿಮ್ಮನ್ನು ಎಷ್ಟು ಪೇಚಿಗೆ ಸಿಕ್ಕಿ ಹಾಕಿಸಬಹುದು ಎಂದು ಒಮ್ಮೆ ಯೋಚಿಸಿ. ಯಾವುದೇ ಕಂಪನಿಯಲ್ಲಿ ನೀವು ಕೆಲಸ ಮಾಡಿದರೂ, ಅಥವಾ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಿದರೂ ಅಲ್ಲಿನ ಸಂಸ್ಕೃತಿ (culture) ತುಂಬಾ ದೊಡ್ಡ ರೋಲ್ ಅನ್ನು ವಹಿಸಬಲ್ಲದು, ಆಯಾ ಕಂಪನಿ, ಡಿಪಾರ್ಟ್‌ಮೆಂಟ್‌ಗಳಲ್ಲಿ ದೈನಂದಿನ ವ್ಯವಹಾರ ಹೇಗೆ ನಡೆಯುತ್ತದೆ, ನಡೆಯಬಲ್ಲದು ಎನ್ನುವುದು ಹೆಚ್ಚೂ ಕಡಿಮೆ ಶೇಕಡಾ ಐವತ್ತಕ್ಕಿಂತ ಹೆಚ್ಚು ಅಲ್ಲಿನ ವಿಧಿ ವಿಧಾನಗಳ ಮೇಲೆ ಪರಿಣಾಮವನ್ನು ಬೀರಬಲ್ಲದು. ಹಾಗಿದ್ದಾಗ ನಿಮ್ಮ ಹಳೆಯ ಕಂಪನಿಯ ಪ್ರಾಸೆಸ್ಸುಗಳು ಇಲ್ಲಿ ಔಟ್‌ಡೇಟೆಡ್ ಆಗದಿದ್ದರೂ ನೀವು ಅವೇ ಪ್ರಾಸೆಸ್ಸುಗಳನ್ನು ಬಳಸಿಕೊಂಡು ಮುಂದುವರೆದಿದ್ದೇ ಆದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳಿಗೆ ಒಂದೇ ಸೈಂಟಿಸ್ಟ್ ಆಗಿಯೋ ಇಲ್ಲಾ ಮಹಾಮೂರ್ಖನಾಗಿಯೋ ಕಂಡುಬರುವುದರಲ್ಲಿ ಯಾವ ಸಂಶಯವೂ ಇಲ್ಲ. ನೀವೊಬ್ಬ ಎಕ್ಸಿಕ್ಯೂಟಿವ್ ಆಗಿ ಸೇರಿಕೊಳ್ಳದೇ ಕೆಳದರ್ಜೆಯ ನೌಕರನಾಗಿ ಸೇರಿಕೊಂಡಲ್ಲಿ ನಿಮ್ಮಿಂದ ಇಮಿಡಿಯೆಟ್ ಆಗಿ ನಿಮ್ಮ ಡಿಪಾರ್ಟ್‌ಮೆಂಟ್ ಅಥವಾ ಕಂಪನಿ ಉದ್ದಾರವಾಗುವ ಸಾಧ್ಯತೆಗಳು ಕಡಿಮೆ. ನಿಮ್ಮ ಇತಿ-ಮಿತಿಯನ್ನು ಚೆನ್ನಾಗಿ ಅರಿತುಕೊಂಡು ಸಾಧ್ಯವಾದಷ್ಟು ಒಳ್ಳೆಯದನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮನ್ನು ನೀವು ಮುಂಬರುವ ಬದಲಾವಣೆಗಳಿಗೆ ತೆರೆದುಕೊಂಡರೆ ಆಯಿತು, ಅಷ್ಟೇ! ಬದಲಾವಣೆಗಳನ್ನು ಎದುರಿಸುವಲ್ಲಿ ನಿಮಗೆ ಯಾರೂ ಯಾವ ಚಾಯ್ಸ್ ಅನ್ನು ಕೊಟ್ಟಿಲ್ಲ/ಕೊಡಲಿಲ್ಲವಾದ್ದರಿಂದ ಅವನ್ನು ಬೈದು, ವಿರೋಧಿಸಿ ಏನು ಪ್ರಯೋಜನ? ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತೆಯ್ಯಾ ಎನ್ನುವಂತೆ ಹೊಸಕೆಲಸವನ್ನು ಸೇರಿಕೊಂಡು ಬದಲಾವಣೆಗಳಿಗೆ ಬಲಿಪಶುವಾಗದಿದ್ದರೆ ಹೇಗೆ?

ಹಾಗಂತ, you don't have to completely surrender yourself. ಬದಲಾವಣೆಗಳಿಗೆ ಸ್ಪಂದಿಸುವುದು ಎಂದರೆ ಕೋಲೇ ಬಸವನ ಹಾಗೆ ಗೋಣು ಆಡಿಸುವುದು ಎಂದರ್ಥವಲ್ಲ. ನಿಮ್ಮಿಂದ ಮಹದುಪಕಾರವಾಗಬಹುದು ಎನ್ನುವಂತಿದ್ದರೆ, why not, ನಿಮ್ಮ ಐಡಿಯಾಗಳನ್ನು ಪಿಚ್ ಮಾಡಿ, ಅದರಿಂದ ಏನೇನು ಆಗಬಲ್ಲದು ಎಂಬುದನ್ನು ಗಮನಿಸಿ. 'ಇವತ್ತು ನಿನ್ನೆ ಸೇರಿಕೊಂಡ ಯಾವನೋ ಒಬ್ಬ ದೊಡ್ಡ ಕೋತ್ವಾಲನಂಗೆ ಆಡ್ತಾನೆ!' ಎಂದು ಸಹೋದ್ಯೋಗಿಗಳು ಮಾತನಾಡುವುದೇನಾದರೂ ನಿಮ್ಮ ಕಿವಿಗೆ ಬಿದ್ದರೆ ಅದನ್ನು ನಿಮ್ಮ ಆತ್ಮವಿಶ್ವಾಸಕ್ಕೆ ಕೊಡಲಿ ಪೆಟ್ಟು ಎಂದು ಮಾತ್ರ ಅಂದುಕೊಳ್ಳಬೇಡಿ, ಸೋತವನು ಮತ್ತೆ-ಮತ್ತೆ ಪ್ರಯೋತ್ನಿಸೋ ಹಾಗೆ ನಿಮ್ಮ ಪ್ರಯತ್ನವನ್ನು ಮಾತ್ರ ಬಿಡಬೇಡಿ.

ಇಲ್ಲಿ ಹೊಸ ಕೆಲಸದ ಬಗ್ಗೆ ಮತ್ತೊಂದು ವಿಷಯವನ್ನು ಹೇಳಲೇ ಬೇಕು - ನಿಮ್ಮ ಹಳೆಯ ಕಂಪನಿಗೆ/ಕೆಲಸಕ್ಕೆ ಹೋಲಿಸಿದರೆ ಹೊಸ ಕಂಪನಿ/ಕೆಲಸ ತಮ್ಮ ಬಿಸಿನೆಸ್ಸು ಪ್ರಾಸೆಸ್ಸುಗಳಲ್ಲಿ, ವ್ಯವಹಾರದ ವಿಧಿವಿಧಾನಗಳಲ್ಲಿ ಹಿಂದೆ ಇದ್ದಿತೆಂದಾದರೆ ಅದನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಿ. ನಿಮ್ಮ ಹಳೆಯ ಕಂಪನಿಯ ಸ್ಟೇಟಸ್ ರಿಪೋರ್ಟ್ ಫಾರ್ಮ್ ಅನ್ನೋ ಮತ್ತೊಂದನ್ನೋ ನೀವು ಯಥಾವತ್ತಾಗಿ ಬಳಸಿಕೊಳ್ಳದೇ ಅದರಲ್ಲಿ ಹೊಸಕಂಪನಿಗೆ ಹೊಂದುವಂತೆ ಕೆಲವೊಂದು ಬದಲಾವಣೆಗಳನ್ನು ಮಾಡಿ. ನೀವೊಬ್ಬ ಚೇಂಜ್ ಏಜೆಂಟ್ ಆಗಿ ಕಂಡು ಬಂದು ಎಲ್ಲರನ್ನೂ ಮುನ್ನೆಡೆಸುವ ಮುಂದಾಳಾಗಿ, ಅದರ ಬದಲಿಗೆ ಡೈಪರ್ ಮ್ಯಾನುಫ್ಯಾಕ್ಚರ್ ಮಾಡುವ ಕಂಪನಿಯನ್ನು ಹೆರಿಗೆ ಆಸ್ಪತ್ರೆಯನ್ನಾಗಿ ಬದಲಿಸುವ ಕ್ರಾಂತಿಪುರುಷರಾಗಬೇಡಿ!

ಹೀಗೆ ಹೊಸ ಕೆಲಸದ ಬಗ್ಗೆ ಬರೆದರೆ ಒಂದು ದೊಡ್ಡ ಪುಸ್ತಕವನ್ನೇ ಬರೆಯಬಹುದು, ಪ್ರತಿಯೊಬ್ಬರೂ ವಿಭಿನ್ನರಾಗಿರುವ ಹಾಗೆ ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಇತಿ-ಮಿತಿ, ಫಾರ್ಮಾಲಿಟಿಗಳಿವೆ. ಅನ್ನ ಹಾಕುವ ಕೈ ಎಂದುಕೊಂಡು ಕೆಲಸವನ್ನು ಗೌರವಿಸಿ ಅದಕ್ಕೆ ತಕ್ಕ ಪರಿಶ್ರಮವನ್ನು ಮಾಡಿ ಮುಂದೆ ಹೋಗುವ ಆಶಾಭಾವನೆಯನ್ನು ಇಟ್ಟುಕೊಂಡವರನ್ನು ಯಾವ ದೇವರೂ ಈವರೆಗೆ ಕೈಬಿಟ್ಟಿದ್ದನ್ನು ನಾನು ಕಾಣೆ. ನಿಮಗೆ ಇಷ್ಟವಿರಲಿ ಇಲ್ಲದಿರಲಿ ಸಿಕ್ಕ ಕೆಲಸವನ್ನು ನ್ಯಾಯವಾಗಿ ಮಾಡಿ, ಬದಲಾವಣೆ ಬೇಕು ಎನ್ನಿಸಿದಲ್ಲಿ ಅದನ್ನು ಧೈರ್ಯದಿಂದ ಎದುರಿಸಿ, ಹೇಡಿಯಾಗಿ ಓಡದಿದ್ದರಾಯಿತಷ್ಟೇ.

ಮುಂದಿನ ವಾರಗಳಲ್ಲಿ ಕಂಪನಿಯಲ್ಲಿ ಕೆಲಸದ ವಾತಾವರಣ, ಅಲ್ಲಿನ ರಾಜಕೀಯ, ಸಾಂಸ್ಕೃತಿಕ ಸ್ಥಿತಿಗತಿಗಳು, ವಿದೇಶ ಪ್ರಯಾಣ, ವೈಯುಕ್ತಿಕ ಹಣಕಾಸು, ಹೆಚ್ಚಿನ ವಿದ್ಯಾಭ್ಯಾಸ ಮುಂತಾದವುಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ, ಕಾದು ನೋಡಿ!

0 Comments:

Post a Comment

Links to this post:

Create a Link

<< Home