Sunday, September 17, 2006

ಕೆಲಸ ಹುಡುಕುವುದಕ್ಕೆ ಯೋಗ್ಯ ಸಮಯ!

ಕೆಲಸವನ್ನು ಹುಡುಕುವುದಕ್ಕೆ ಯೋಗ್ಯವಾದ ಸಮಯ ಅಂದರೆ ಯಾವ ತಿಂಗಳಿನಲ್ಲಿ ಹುಡುಕಿದರೆ ಒಳ್ಳೆಯದು, ಯಾವ ಮನಸ್ಥಿತಿಯಲ್ಲಿ ಹುಡುಕಿದರೆ ಒಳ್ಳೆಯದು ಎನ್ನುವುದನ್ನು ಸೂಕ್ಷ್ಮವಾಗಿ ನೋಡೋಣ.

ಹೊಸ ಅಥವಾ ಬೇರೆ ಕೆಲಸವನ್ನು ಹುಡುಕುವುದಕ್ಕೆ ಮೊದಲು ನಿಮ್ಮ ಈಗಿನ ನೆಲೆಯನ್ನು ಅರಿತುಕೊಳ್ಳುವುದು ಮುಖ್ಯ. ನೀವು ಕಾಲೇಜಿನಿಂದ ಈಗಷ್ಟೇ ಹೊರಗೆ ಬಂದಿದ್ದರೆ ನಿಮ್ಮ ಕೆಲಸ ಹುಡುಕುವ ಶೈಲಿಗೂ ನೀವು ಈಗಾಗಲೇ ಒಂದು ಕೆಲಸದಲ್ಲಿ ಇದ್ದರೆ ನೀವು ಕೆಲಸ ಹುಡುಕುವ ವಿಧಾನಕ್ಕೂ ಬಹಳ ವ್ಯತ್ಯಾಸವಿದೆ. ಆದರೆ, ನೀವು ಕೆಲಸವನ್ನು ಹುಡುಕುವುದರಲ್ಲಿ ನಿಮ್ಮಲ್ಲಿ ತುಂಬಿದ ಆತ್ಮವಿಶ್ವಾಸ ಬಹಳ ಮುಖ್ಯ. ನನ್ನನ್ನು ಕೇಳಿದರೆ ಭಂಡ ಧೈರ್ಯ ಅಳುಬುರುಕುತನಕ್ಕಿಂತ ಒಳ್ಳೆಯದು ಎಂದೇ ಹೇಳುತ್ತೇನೆ! (please wait until I write: 11) Why you should lie!)

ಅಲ್ಲದೇ ನೀವು ಈಗಿರುವ ಕೆಲಸವನ್ನು ಸೇರಿ ಎಷ್ಟು ತಿಂಗಳು ಅಥವಾ ವರ್ಷವಾಯಿತು ಎನ್ನುವುದೂ ಮುಖ್ಯ. ತೊಂಭತ್ತರ ದಶಕದ ಕೊನೆಯ ವರ್ಷಗಳಲ್ಲಿ ಇನ್‌ಫರ್ಮೇಷನ್ ಟೆಕ್ನಾಲಜಿಯಲ್ಲಿ ಅದೆಷ್ಟು ಕೆಲಸಗಳು ಸಿಗುತ್ತಿದ್ದವೆಂದರೆ ಮನಸು ಮಾಡಿದ್ದರೆ ಪ್ರತಿ ತಿಂಗಳಿಗೆ ಒಂದೊಂದು ಕೆಲಸವನ್ನು ತೆಗೆದುಕೊಳ್ಳಬಹುದಿತ್ತು. ಮುಂಜಾನೆ ರೆಸ್ಯೂಮೆಯನ್ನು ರಿಕ್ರೂಟರ್‌ಗೆ ಕಳಿಸಿದರೆ ಸಂಜೆ ಒಳಗೆ ಕೆಲಸ ಸಿಗುತ್ತಿತ್ತು. ಆ ಪರಿಸ್ಥಿತಿ ಸಧ್ಯಕ್ಕಂತೂ ಇಲ್ಲ. ನಿಮ್ಮ ಕೆಲಸದ ವಿಶೇಷತೆಗಳನ್ನು ಬಿಟ್ಟರೆ ನೀವಿರುವ ನೆರೆಹೊರೆ ಹಾಗೂ ಹೊರಗಿನ ಸ್ಥಿತಿಗತಿ (job market) ಇವುಗಳ ಮೇಲೂ ಬಹಳಷ್ಟು ಅಂಶಗಳು ನಿರ್ಧಾರಿತವಾಗುತ್ತವೆ. ಉದಾಹರಣೆಗೆ ನೀವು ನ್ಯೂ ಯಾರ್ಕ್ ಮೆಟ್ರೋ ಪ್ರದೇಶದಲ್ಲೋ ಇದ್ದರೆ ಅಥವಾ ಬೆಂಗಳೂರಿನಲ್ಲೋ, ಬಾಂಬೆಯಲ್ಲೋ ಇದ್ದರೆ ನಿಮಗೆ ಮತ್ತೊಂದು ಕೆಲಸ ಸಿಗಬಹುದಾದ ಸಾಧ್ಯತೆಗಳು ಹೆಚ್ಚು. ಅಲ್ಲದೇ ಹೊರಗೆ ಜಾಬ್‌ ಮಾರ್ಕೆಟ್ ಹೇಗಿದೆ ಎನ್ನುವುದರ ಮೇಲೂ ಹೋಗುತ್ತದೆ, ನೀವು ಫಾರ್ಮಸಿಷ್ಟ್ ಅಥವಾ ನರ್ಸಿಂಗ್‌ನಲ್ಲಿ ಕೆಲಸ ಹುಡುಕುತ್ತಿದ್ದರೆ ನಿಮ್ಮನ್ನು ಈಗಿನ ವಾತಾವರಣದಲ್ಲಿ ಮನೆಗೆ ಬಂದು ಕರೆದುಕೊಂಡು ಹೋದಾರು, ಅದರ ಬದಲಿಗೆ ನೀವು ಈಗಷ್ಟೆ ಜಾವ ಪ್ರೋಗ್ರಾಮಿಂಗ್ ಕಲಿತ ಪ್ರೋಗ್ರಾಮರ್ ಎಂದರೆ ಬಹಳಷ್ಟು ಕಷ್ಟಪಡಬೇಕಾಗಿ ಬರುತ್ತದೆ.

ಮೊದಲು ನಿಮ್ಮ ಸ್ಥಿತಿಗತಿಗಳಿಂದ ಆರಂಭಿಸಿ - ನಿಮ್ಮ ಆತ್ಮವಿಶ್ವಾಸದ ಮಟ್ಟ ನೂರಕ್ಕೆ ನೂರು ಇರುವುದು ನಿಮ್ಮ ಹಳೆಯ ಕೆಲಸದಲ್ಲಿ ನೀವು ಪರಿಪೂರ್ಣರಾದಾಗಲೇ. ನೀವು ಕೆಲಸವನ್ನು ಹುಡುಕುವುದಕ್ಕೆ ತಯಾರಾಗುವ ಮೊದಲು ನಿಮ್ಮ ಹಣಕಾಸಿನ ಸ್ಥಿತಿಗತಿಗಳನ್ನು ಒಮ್ಮೆ ಮನನ ಮಾಡಿಕೊಳ್ಳಿ, ನಿಮಗೆ ಈಗ ಎಷ್ಟು ಸಂಬಳ ಬರುತ್ತಿದೆ, ಸಂಬಳದ ಜೊತೆಗೆ ಏನೇನು ಅನುಕೂಲತೆಗಳು ಸಿಗುತ್ತಿವೆ ಎನ್ನುವುದನ್ನು ಒಂದು ಕಡೆ ಬರೆದು ಕೊಳ್ಳಿ. ನಂತರ ನೀವು ಹೊಸ ಕೆಲಸವನ್ನು ಹುಡುಕುತ್ತಿರುವುದು ಹೆಚ್ಚು ಸಂಬಳ ಬರಲಿ ಎಂಬುದಕ್ಕಾಗಿಯೋ ಅಥವಾ ಈ ಕೆಲಸ ಮುಗಿದ ತಕ್ಷಣ ಹೊಸ ಕೆಲಸ ಸಿಗಲಿ ಎಂಬುದಕ್ಕಾಗಿಯೋ ಅಥವಾ ಈ ಕೆಲಸ/ಫೀಲ್ಡ್/ಕಂಪನಿ ಸರಿ ಇಲ್ಲ, ಬೇರೆ ನೋಡೋಣ ಎಂದೂ ಇರಬಹುದು.

ನಂತರ ನೀವು ವರ್ಷದ ಯಾವ ಕ್ವಾರ್ಟರ್‌ನಲ್ಲಿದ್ದೀರಿ ಎಂಬುದನ್ನು ಗಮನಿಸಿ, ಸರಿಯಾದ ನಿರ್ಧಾರಕ್ಕೆ ಬನ್ನಿ. ಅಮೇರಿಕದಲ್ಲಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಒಂದು ರೀತಿಯ ಹಾಲಿಡೇ ವಾತಾವರಣವಿದ್ದು ಎಷ್ಟೋ ಜನ ಸ್ಥಳೀಯರು ತಾವು ಹೊಸ ಕೆಲಸ ಹುಡುಕುವುದನ್ನು ಮುಂದಿನ ವರ್ಷ ನೋಡೋಣವೆಂದು ಬಿಟ್ಟಿರುವ ಸಾಧ್ಯತೆಗಳೇ ಹೆಚ್ಚು. ಅಲ್ಲದೇ ಅಂತಹ ಸಮಯದಲ್ಲಿ ಕಂಪನಿಗಳು ಆ ವರ್ಷದ ಬಜೆಟ್‌ನಲ್ಲಿ ಹೊಸ ಕೆಲಸಗಾರರನ್ನು ಸೇರಿಸಿಕೊಳ್ಳಬೇಕು ಎಂದು ಸಂಕಲ್ಪ ಮಾಡಿರುವುದರಿಂದ ವರ್ಷದ ಕೊನೆಯ ಕ್ವಾರ್ಟರ್ ನನ್ನಂತಹ ಅನಿವಾಸಿಗಳಿಗೆ ಬಹಳ ಒಳ್ಳೆಯ ಸಮಯವಾಗಿ ಕಂಡು ಬಂದಿದೆ. ನಾನು ಡಿಸೆಂಬರ್ ೨೯ ರಂದು ಒಮ್ಮೆ ಇಂಟರ್‌ವ್ಯೂವ್ ಅನ್ನು ಅಟೆಂಡ್ ಮಾಡಿದ್ದೇನೆ, ಹಾಗೂ ನಾನು ಈಗಿರುವ ಕೆಲಸಕ್ಕೆ ಸೇರಿದ್ದು ಡಿಸೆಂಬರ್ ೨೭ ರಂದು. ನಾನು ಹಾಗೆ ವರ್ಷ ಮುಗಿಯುವುದರೊಳಗೆ ಸೇರಿದ್ದರಿಂದ ನನಗೆ ಒಂದು ವಾರ ಹೆಚ್ಚು ರಜೆ ಸಿಕ್ಕಿತಲ್ಲದೇ ಇನ್ನೂ ಅನೇಕ ಅನುಕೂಲಗಳಾದವು, ಅದೇ ಹೊಸ ವರ್ಷ ಮುಗಿದ ಮೇಲೆ ನೋಡೋಣವೆಂದುಕೊಂಡವರು ಸಾಕಷ್ಟು ಕಳೆದುಕೊಂಡರು.

ವರ್ಷದ ಕೊನೆಯ ಕ್ವಾರ್ಟರ್‌ನಲ್ಲಿ ಹೆಚ್ಚು ಕೆಲಸಗಳು ಇವೆ/ಇರಬೇಕು ಎಂದೇನಲ್ಲ, ಆದರೆ ನೀವು ಸ್ಥಳೀಯರಂತೆ ಕಾಲಹರಣ ಮಾಡದೇ ನಿಮ್ಮ ಗುರಿಯನ್ನು ಕಣ್ಣ ಮುಂದೆ ಇಟ್ಟುಕೊಂಡು ಅದಕ್ಕೆ ತಕ್ಕ ಪರಿಶ್ರಮ ಹಾಕುವುದು ಒಳ್ಳೆಯದು. ಈ ಕೊನೆಯ ಮೂರು ತಿಂಗಳನ್ನು ಬಿಟ್ಟರೆ ವರ್ಷದ ಮೊದಲ ಮೂರು ತಿಂಗಳು ಬಹಳ ಒಳ್ಳೆಯ ಸಮಯ. ಬೇಕಾದಷ್ಟು ಕಂಪನಿಗಳು ಈ ಸಮಯದಲ್ಲಿ ಕೆಲಸಗಾರರನ್ನು ಹುಡುಕುತ್ತಿರುತ್ತಾರೆ. ಜೊತೆಗೆ ನಿಮ್ಮ ಈಗಿನ ಕೆಲಸದ ಅನುಕೂಲಗಳಲ್ಲೊಂದಾದ ವೆಕೇಷನ್‌ಗಳನ್ನು ನೀವು ಮೊದಲ ಮೂರು ತಿಂಗಳಲ್ಲಿ ಬಳಸಿಕೊಂಡು ಅದರ ಸಹಾಯದಿಂದ ಕೆಲಸವನ್ನು ಹುಡುಕಬಹುದು ಅಲ್ಲದೇ ನಿಮ್ಮ ಹೊಸ ಕೆಲಸಕ್ಕೆ ಹೋಗುವ ಮೊದಲೇ ವೆಕೇಷನ್ ಎಲ್ಲಾ ಮುಗಿಸಿ ಸಂಪೂರ್ಣ ರಿಲ್ಯಾಕ್ಸ್ ಆಗಿರಬಹುದು. ನಾನು ಓದಿದ ಹಲವಾರು ಸಮೀಕ್ಷೆಗಳ ಪ್ರಕಾರ ಪ್ರತಿಯೊಬ್ಬರಿಗೂ ಮದುವೆಯಾಗುವುದು, ಕೆಲಸವನ್ನು ಬದಲಾಯಿಸುವುದು, ಮನೆ ಬದಲಾಯಿಸುವುದು, ಸಮೀಪ ಬಂಧು ಅಥವಾ ಸಂಬಂಧಿಗಳ ಸಾವು ಇವೆಲ್ಲವೂ ಬಹಳ ಸ್ಟ್ರೆಸ್ ಹುಟ್ಟಿಸುವಂತಹವು, ಆದ್ದರಿಂದಲೇ ನೀವು ಹೊಸ ಕೆಲಸಕ್ಕೆ ಸೇರಿಕೊಳ್ಳುವ ಮುನ್ನ ನೀವು ಇರುವ ರಜಾದಿನಗಳನ್ನು ಎಷ್ಟು ಸಾಧ್ಯವೋ ಅಷ್ಟನ್ನು ಬಳಸಿಕೊಂಡು, ನಂತರ ಹೊಸ ಕೆಲಸಕ್ಕೆ ಸೇರಿದ ಮೇಲೆ ಅದರ ಮೇಲೆ ಸಂಪೂರ್ಣವಾಗಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು.

ಇನ್ನು ಕೆಲಸವನ್ನು ಹುಡುಕುವಲ್ಲಿ ನೆರವಾಗುವ ವಾರದ ದಿನಗಳನ್ನು ನೋಡುತ್ತಾ ಬಂದರೆ ನೀವು ಸಾಕಷ್ಟು ಹೋಮ್‌ವರ್ಕ್ ಮಾಡಿ ಎಷ್ಟು ಸಾಧ್ಯವೋ ಅಷ್ಟು ಕೆಲಸಗಳಿಗೆ ಭಾನುವಾರ ಉತ್ತರ ಕೊಡುವುದು ಒಳ್ಳೆಯದು, ಹಾಗೇ ಸೋಮವಾರ ರಿಕ್ರೂಟರ್ ಜೊತೆಗೆ ಫಾಲೋಅಪ್ ಮಾಡುವುದನ್ನು ಮರೆಯಬೇಡಿ. ಇನ್ನೇನು ಗುರುವಾರ ಬಂತು, ಮುಂದಿನ ವಾರ ನೋಡೋಣ ಎಂದು ಕೈ ಚೆಲ್ಲದೇ ಸಿಗಬಹುದಾದ ಕೆಲಸಗಳಿಗೆ ಹಾಗೂ ಕೆಲಸಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಗುರುವಾರವೇ ಪ್ರವೃತ್ತರಾಗಿ ಮತ್ತು ಶುಕ್ರವಾರ ಫಾಲೋಅಪ್ ಮಾಡಿ.

ಇನ್ನು ದಿನದ ಸಮಯದಲ್ಲಿ ಇಂತಹ ಸಮಯವೆಂಬುದೇನೂ ಇಲ್ಲ, ಮುಂಜಾನೆ ಎಂಟು ಘಂಟೆಯಿಂದ ಸಂಜೆ ಆರು ಘಂಟೆಯವರೆಗೆ ಯಾರನ್ನು ಬೇಕಾದರೂ ಮಾತನಾಡಿಸಿ. ಅಕಸ್ಮಾತ್ ರಿಕ್ರೂಟರ್ ಇರದೇ ಹೋದರೆ ಅಗತ್ಯವಿದ್ದರೆ ವಾಯ್ಸ್‌ಮೆಸ್ಸೇಜ್ ಬಿಡಿ, ಚುಟುಕಾಗಿ ಹೇಳುವುದನ್ನು ಹೇಳಿ ಮುಗಿಸಿ.

***

ಕೆಲಸ ಹುಡುಕುವುದನ್ನು ಅಥವಾ ಬದಲಾಯಿಸುವುದನ್ನು ಆದಷ್ಟು ಗಂಭೀರವಾಗಿ ತೆಗೆದುಕೊಳ್ಳಿ. ನಿಮ್ಮ ಸಮಯ ಹೇಗೆ ಅಮೂಲ್ಯವೋ ಹಾಗೇ ಇತರರ ಸಮಯ ಎಂಬುದನ್ನು ಮರೆಯಬೇಡಿ. ನಿಮ್ಮ ಈಗಿನ ಆಫೀಸ್ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡುವುದು ಒಳ್ಳೆಯದು. ಹಾಗೇನಾದರೂ ಕರೆಗಳು ಬಂದರೂ ಆದಷ್ಟು ಕಡಿಮೆ ಮಾತನಾಡಿ ಫೋನ್ ಇಡಿ, ಆ ಕಡೆಯವರಿಗೆ ಅರ್ಥವಾಗುತ್ತದೆ. ನಿಮ್ಮ ಲಂಚ್ ಸಮಯದಲ್ಲಿ ನೀವೇ ಅವರಿಗೆ ಕರೆ ಮಾಡುವುದಾಗಿ ಹೇಳಿ, ಅದರಿಂದ ಮುಕ್ತವಾಗಿ ಮಾತನಾಡಬಹುದು ಜೊತೆಗೆ ನಿಮ್ಮ ಈಗಿನ ಕೆಲಸದ ಮೇಲೂ ನಿಗಾವಹಿಸಬಹುದು.

ನೀವು ಈಗ ಮಾಡುವ/ಮಾಡುತ್ತಿರುವ ಕೆಲಸವನ್ನು ಎಷ್ಟರ ಮಟ್ಟಿಗೆ ಗೌರವಿಸುತ್ತೀರಿ ಎಂಬುದು ಬಹಳಷ್ಟು ಅಂಶಗಳನ್ನು ನಿರ್ಧರಿಸಬಲ್ಲದು - ನಿಮಗೆ ಹೊಸ/ಬೇರೆ ಕೆಲಸ ಸಿಗುವವರೆಗೂ ಇದೇ ಕೆಲಸದಿಂದ ನಿಮ್ಮ ಉದರ ಪೋಷಣೆ ನಡೆಯುತ್ತಿದೆ ಎಂಬುದನ್ನು ನೆನೆಸಿಕೊಂಡು 'ಕಾಯಕವೇ ಕೈಲಾಸ' ಎಂದು ಮನಸ್ಸಿನಲ್ಲಿ ಅಂದುಕೊಂಡು ಆರೋಗ್ಯಕರವಾಗಿ ಹಾಗೂ ಸಿಸ್ಟಮ್ಯಾಟಿಕ್ ಆಗಿ ಕೆಲಸವನ್ನು ಹುಡುಕಿ.

ನಿಮಗೆ ಶುಭವಾಗಲಿ!

ಮುಂದಿನ ಶನಿವಾರ:
10) What you should say to the recruiters?
11) Why you should lie!

Labels:

0 Comments:

Post a Comment

Links to this post:

Create a Link

<< Home