Friday, September 08, 2006

ನಿಮ್ಮನ್ನು ನೀವು ಮೆಚ್ಚಿಸುವ ವಿಧಾನ - ಭಾಗ ೨

ಹಿಂದಿನ ವಾರ ಕೆಲವೊಂದಿಷ್ಟು ಬೇಸಿಕ್ ರೂಲ್ಸ್‌‍ಗಳನ್ನು ಹೇಳಿದ್ದೆ, ಅವುಗಳನ್ನ ಗೈಡ್‌ಲೈನ್ಸ್ ತರಹ ನೋಡೋದು ಒಳ್ಳೆಯದು. ಬಟ್ಟೆ ತೊಡುವುದರ ಬಗ್ಗೆ ಹೇಳಿ ಕೂದಲಿನ ಬಗ್ಗೆ ಹೇಳದಿದ್ದರೆ ಹೇಗೆ? ಭಾರತದಲ್ಲಿದ್ದಾಗ ಕೂದಲನ್ನು ಉದ್ದವಾಗಿ ಬಿಡುತ್ತಿದ್ದವರಲ್ಲಿ ನಾನೂ ಒಬ್ಬ, ಆದರೆ ಇಲ್ಲಿಗೆ ಬಂದ ಮೇಲೆ 'ಶಾರ್ಟ್' ಮಾಡಿಸಿಕೊಳ್ಳುತ್ತಿದ್ದೇನೆ. ನಮ್ಮ ಆಫೀಸಿನ ವಲಯದಲ್ಲಿ ನೋಡಿದಾಗ ನನ್ನ ಕಣ್ಣಿಗೆ ಹೆಚ್ಚಿನವರು ಕಂಡದ್ದು ಹೀಗಾದುದರಿಂದ ನನಗೆ ಅದು ಸಹಜವಾದ ಹೊಂದಾಣಿಕೆ. ಹಾಗಾಗಿ ನೀವೂ ನನ್ನ ಹಾಗೆ ಹುಲುಸಾಗಿ ಕೂದಲನ್ನು ಬೆಳೆಸುತ್ತೀರಾದರೆ ಮೂರು ವಾರಕ್ಕೊಮ್ಮೆ, ಕೊನೇ ಪಕ್ಷ ತಿಂಗಳಿಗೊಮ್ಮೆಯಾದರೂ ಹೇರ್ ಕಟ್ ಮಾಡಿಸಿಕೊಳ್ಳುವುದು ಒಳ್ಳೆಯದು - ಏನು ಬೇಕಾದರೂ ಮಾಡಿ, ಹತ್ತಿಪ್ಪತ್ತು ಡಾಲರ್ ಉಳಿಯುತ್ತದೆ ಎಂದು ಮನೆಯಲ್ಲೇ ಕೂರಬೇಡಿ.

ಇನ್ನು ನೀವು ಮೀಸೆಯನ್ನು 'ಬಿಡು'ವವರಾದರೆ ಅದನ್ನು ಗ್ರೂಮ್ ಮಾಡುವುದೂ ನಿಮ್ಮ ಜವಾಬ್ದಾರಿಯೇ. ಮೀಸೆಯನ್ನು ಉದ್ದುದ್ದ ಬೆಳೆಸಿ ಅದನ್ನು ಚಹಾ ಸೋಸಲು ಬಳಸಬೇಡಿ! ಅಲ್ಲದೇ, ವಯಸ್ಸಾಗುವುದರ ಪ್ರತೀಕದಂತೆ ಎಲ್ಲರಿಗೂ ಮೂಗಿನ ಹೊಳ್ಳೆಗಳಲ್ಲೂ ಕೂದಲು ಬೆಳೆಯುತ್ತದೆ, ಅದನ್ನು ಆಗಾಗ್ಗೆ ಕತ್ತರಿಸಿಕೊಂಡು ಮೂಗಿನಿಂದ ಹೊರಗೆ ಚಾಚದಂತೆ ನೋಡಿಕೊಳ್ಳುವುದೂ ನಿಮ್ಮ ಜವಾಬ್ದಾರಿಯೇ. ಇನ್ನು ಮೂಗಿನ ಒಳಗೆ ಕೈ ಹಾಕಿ ಎಲ್ಲರ ಎದುರು ಸ್ವಚ್ಛಮಾಡುವುದಾಗಲೀ ಅಥವಾ ಗೊತ್ತಿರದೇ ಆಫೀಸಿನಲ್ಲಿ nose pick ಮಾಡುವುದಾಗಲೀ ಸಲ್ಲದು, ಸಾಧ್ಯವಾದಷ್ಟು ಇದರಿಂದ ದೂರ ಇರಿ.

ನೀವು ಹಾಕುವ ಬಟ್ಟೆ ಬರಿಗಳು ನಿಮಗೆ ಹೊಂದುವಂತಿರಲಿ - ಉದಾಹರಣೆಗೆ ದೊಡ್ಡದೊಂದು ಡಿಪಾರ್ಟ್‌ಮೆಂಟ್ ಸ್ಟೋರ್‌ನಲ್ಲಿ ನಿಮಗೆ ಇಷ್ಟವಾದ ಬಟ್ಟೆ ನಿಮ್ಮ ಸೈಜಿಗೆ ಸಿಗದೇ ಹೋದರೆ ಅಲ್ಲಿ ಸಿಕ್ಕಿದ್ದನ್ನು ಹಾಕಿಕೊಳ್ಳದೇ ಅದೇ ಬಟ್ಟೆ ಅವರ ಬೇರೆ ಬ್ರಾಂಚ್‌ನಲ್ಲಿ ಸಿಗುತ್ತದೆಯೇ ಎಂದು ವಿಚಾರಿಸಿ. ಒಂದು ವೇಳೆ ಹಾಗೆ ಸಿಗದೇ ಹೋದಲ್ಲಿ ಸ್ವಲ್ಪ ಹಣ ಖರ್ಚು ಮಾಡಿ ಅದನ್ನು alteration ಮಾಡಿಸಿಕೊಳ್ಳಬಹುದು. ಆದರೆ ನಿಮಗೆ ಸರಿಯಾಗಿ ಹೊಂದದ ಅಥವಾ ಹೇಳಿ ಮಾಡಿಸಿದ ಬಟ್ಟೆಗಳನ್ನು ತೊಡಲೇ ಬೇಡಿ. ಇನ್ನು ಅಮೇರಿಕದಲ್ಲಿ ಹೆಚ್ಚಿನ ಸೂಟ್‌ಗಳು ಗಂಡಸರಿಗಾದರೆ big & tall ಅನ್ನೋ ಸೈಜಿಗೆ ಹೇಳಿಮಾಡಿಸಿದವು, ಆದರೆ ನೀವು Mens Wearhouse ಅಂತಹ ಸ್ಟೋರ್‌ಗಳಲ್ಲಿ ಹುಡುಕಿದಾಗ ಡ್ರೆಸ್ ಕನ್ಸಲ್‌ಟೆಂಟ್ ನಿಮ್ಮ ಬಣ್ಣ, ಎತ್ತರ, ನಿಲುವುಗಳಿಗೆ ಹೊಂದಬಹುದಾದ ಸೂಟ್‌ಗಳನ್ನು ಆಯ್ಕೆ ಮಾಡಿಕೊಡುವುದೂ ಅಲ್ಲದೇ ಅದನ್ನು ಅತಿ ಕಡಿಮೆ ಬೆಲೆಯಲ್ಲಿ ಕಸ್ಟಮ್ ಆಲ್ಟರೇಷನ್ ಮಾಡಿಕೊಡುತ್ತಾರೆ, ಅವರ ಬೆಲೆಯೂ ಕಡಿಮೆ ಹಾಗೂ ಅವರ ಸರ್ವೀಸ್ ಅತ್ಯಂತ ಉತ್ತಮವಾದ ಸರ್ವೀಸ್‌ಗಳಲ್ಲಿ ಒಂದು - ಕಳೆದ ಏಳೆಂಟು ವರ್ಷಗಳಿಂದ ನನಗೆ ಎಂದೂ ನಿರಾಸೆಯಾಗಿದ್ದಿಲ್ಲ.

ಇನ್ನು ವಾಸನೆಯ ವಿಷಯಕ್ಕೆ ಬಂದರೆ ನೀವು ಹಾಕುವ ಬಟ್ಟೆಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಅಷ್ಟೇ ಪ್ರಾಮುಖ್ಯತೆಯನ್ನು ನಿಮ್ಮ ವಾಸನೆಗಳಿಗೂ ಕೊಡಬೇಕಾಗುತ್ತದೆ. ಈ ವಾಸನೆ ತಲೆಯಿಂದ ಕಾಲಿನವರೆಗೂ ಅನ್ವಯವಾಗುತ್ತದೆ. ನೀವು ತಲೆಗೆ ಹಾಕುವ ಕ್ರೀಮ್, ಹೇರ್ ಆಯಿಲ್ ಇಂದ ಹಿಡಿದು, ನೀವು ನಿಮ್ಮ ಕಾಲುಚೀಲ (socks) ವನ್ನು ಎಷ್ಟು ದಿನಗಳಿಗೆ ಒಮ್ಮೆ ಬದಲಾಯಿಸುತ್ತೀರಿ ಎನ್ನುವುದರಿಂದಲೂ ನಿರ್ಧಾರಿತವಾಗುತ್ತದೆ. ಸಾಧ್ಯವಿದ್ದಷ್ಟು ನ್ಯೂಟ್ರಲ್ ಅಥವಾ unscented ಹೇರ್ ಆಯಿಲನ್ನು ಬಳಸಿ. ಪ್ರತಿದಿನ ಡೀ ಒಡರೆಂಟ್ ಬಳಸುವುದನ್ನು ಮರೆಯಬೇಡಿ, ನಿಮ್ಮ ಕಂಕುಳನ್ನು ನೀವು ಹೇಗೆ ನೋಡಿಕೊಳ್ಳುತ್ತೀರಿ ಎನ್ನುವುದು ಬಹಳ ಮುಖ್ಯ. ಜೊತೆಗೆ ದಯವಿಟ್ಟು ಪ್ರತಿದಿನ ನೀವು ತೊಡುವ ಕಾಲುಚೀಲವನ್ನು ಬದಲಾಯಿಸಿ, ಡ್ರೆಸ್ ಗೆ ಹಾಕುವ ಸಾಕ್ಸನ್ನು ಜಿಮ್ ಅಥವಾ ಟೆನ್ನಿಸ್ ಆಡಲು ಬಳಸದೇ ಬೆವರನ್ನು ಹೀರುವ ಕಾಟನ್ ಸಾಕ್ಸ್ ಬಳಸಿ. ನಿಮ್ಮ ಪಾದದ ರಕ್ಷಣೆಯೂ ಅಷ್ಟೇ ಮುಖ್ಯ, ಅದರಿಂದ ಯಾವ ವಾಸನೆಯೂ ಬರದೇ ಇರಲಿ, ನಿಮಗೆ ಏನೇ ತೊಂದರೆ ಇದ್ದರು ತಕ್ಷಣ ಸಂಬಂಧಿಸಿದ ಡಾಕ್ಟರನ್ನು ಕಂಡು ಚಿಕಿತ್ಸೆ ಪಡೆಯಿರಿ.

ಎಷ್ಟೋ ಜನರಿಗೆ ಬಾಯಿಯಿಂದ ಸಹಿಸಲಾಗದ ವಾಸನೆಯೂ ಬರುತ್ತದೆ, ಅವರವರ ವಾಸನೆ ಅವರಿಗೆ ಅರಿವಿಗೆ ಬರದಿದ್ದರೂ ಮೀಟಿಂಗ್‌ಗಳಲ್ಲಿ, ಸಹೋದ್ಯೋಗಿಗಳ ಜೊತೆ ಮಾತನಾಡುತ್ತಿರುವಾಗ ನಾನು ಬೇಕಾದಷ್ಟು ಜನರ ಬಾಯಿಯಿಂದ ವಾಸನೆ ಬರೋದನ್ನು ಗಮನಿಸಿದ್ದೇನೆ. ಬಾಯಿಯಿಂದ ಕೆಟ್ಟ ವಾಸನೆ ಏಕೆ ಬರುತ್ತದೆ ಎನ್ನುವುದಕ್ಕೆ ಹಲವಾರು ಕಾರಣಗಳಿವೆ - ನಾವು ಊಟದಲ್ಲಿ ಬಳಸುವ ಮಸಾಲೆ ಪದಾರ್ಥಗಳಿರಬಹುದು, ಹಸಿ ಈರುಳ್ಳಿ ಇರಬಹುದು, ದಂತ ಪಂಕ್ತಿಗಳನ್ನು ಫ್ಲಾಸ್ ಮಾಡದೇ ಅದರ ಮಧ್ಯೆ ತುಂಬಿಕೊಂಡ ಹಿಟ್ಟಿನಿಂದಿರಬಹುದು, ಪ್ರತಿಯೊಬ್ಬರೂ ಆಯಾಯ ಪದಾರ್ಥವನ್ನು ಹೇಗೆ ಜೀರ್ಣಿಸಿಕೊಳ್ಳುತ್ತಾರೆ ಎನ್ನುವುದಿರಬಹುದು ಅಥವಾ ಡ್ರೈ ಮೌಥ್ ಇರಬಹುದು. ನಿಮ್ಮ ವಾಸನೆಯ ಕಾರಣವನ್ನು ಕಂಡು ಹಿಡಿದು ಅದಕ್ಕೆ ಕೂಡಲೇ ಪರಿಹಾರವನ್ನು ಹುಡುಕಿಕೊಳ್ಳುವುದು ಒಳ್ಳೆಯದು. ನಾನು ಮೊದ ಮೊದಲು ಫ್ಲಾಸ್ ಮಾಡಲು ಹಿಂಜರಿಯುತ್ತಿದ್ದೆ, ಈಗ ಅದು ಹಲ್ಲು ತಿಕ್ಕುವಷ್ಟೇ ಸಹಜವಾಗಿದೆ, ದಿನಕ್ಕೊಮ್ಮೆ ಫ್ಲಾಸ್ ಮಾಡುವುದು ಬಹಳ ಒಳ್ಳೆಯದು. ದಿನವಿಡೀ ಆಗಾಗ್ಗೆ ನೀರು ಸಿಪ್ ಮಾಡುತ್ತಿರಿ, ಬಾಯಿ ಒಣಗಿಸಿಕೊಳ್ಳಬೇಡಿ. ಮಧ್ಯಾಹ್ನ ಊಟದ ಹೊತ್ತಿಗೆ ಹಸಿ ಈರುಳ್ಳಿಯ ಬಳಕೆಯನ್ನು ಕಡಿಮೆ ಮಾಡಿ ನೋಡಿ. ಅಥವಾ ಮಧ್ಯಾಹ್ನ ಊಟದ ನಂತರ ಆಫೀಸಿನಲ್ಲಿ ಒಮ್ಮೆ ಬ್ರಷ್ ಮಾಡಿ ನೋಡಿ. ಚೂಯಿಂಗ್ ಗಮ್ ಅಥವಾ ಮೌಥ್ ವಾಷ್ ಕೂಡಾ ಸಹಾಯ ಮಾಡಬಲ್ಲದು. ಹೀಗೆ ನಿಮ್ಮ ವಾಸನೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿಯೇ. Believe me, it makes a lot of difference!

ನಾವು ಹೇಗೆ ಡ್ರೆಸ್ ಮಾಡುತ್ತೇವೆ ಅನ್ನೋದು ನಮ್ಮ ನೆರೆಹೊರೆಗೆ ತಕ್ಕಂತೆ ಇರಲಿ. ನನ್ನ ಮುಸ್ಲಿಮ್ ಸ್ನೇಹಿತರು ಸ್ವಲ್ಪ ಹೆಚ್ಚಾಗೇ ಅತ್ತರನ್ನು (scent, perfume) ಬಳಸುತ್ತಾರೆ ಅನ್ನೋದು ನನಗೆ ಗೊತ್ತಿರೋ ವಿಷಯವೇ, ಹಾಗೇ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಧಿ ವಿಧಾನಗಳಿವೆ. ನೀವು ನಿಮ್ಮ ನೆರೆಹೊರೆಗೆ ತಕ್ಕಂತೆ ನಿಮ್ಮದೇ ಆದ ವಿಧಾನವನ್ನು ಬಳಸಿ ಹಾಗೂ ರೂಢಿಸಿಕೊಳ್ಳಿ.

ಯಾವುದನ್ನು ಮರೆತರೂ dress (and smell) for success! ಅನ್ನೋದನ್ನ ಮರೆಯಬೇಡಿ.

ಮುಂದಿನ ಶನಿವಾರ:
9) When is the good time for job search?
10) What you should say to the recruiters?

1 Comments:

Blogger ತೇಜಸ್ (ಒರಿಸ್ಸಾ ಕನ್ನಡಿಗ) said...

Ur article is very beautiful. Just now i got job......!!!!! I hope it will helps me a lot......!!!!!

my mail id id : tej.rljit@gmail.com

3:01 AM  

Post a Comment

<< Home