Sunday, September 24, 2006

ರಿಕ್ರ್ಯೂಟರ್ ಎಂಬ ಮಹಾತ್ಮರು!

ಸ್ವರ್ಗದ ಮೆಟ್ಟಲನ್ನು ಹತ್ತಲು ಸಹಾಯ ಮಾಡುವ ಹಲವಾರು ಅಂಶಗಳಿದ್ದ ಹಾಗೆ ಹೊಸ ಕೆಲಸವನ್ನು ದೊರಕಿಸಿಕೊಡುವಲ್ಲಿ ರಿಕ್ರ್ಯೂಟರ್‌ಗಳ ಪಾತ್ರವನ್ನು ಎಷ್ಟು ಹೊಗಳಿದರೂ ಕಡಿಮೆಯೇ! ಪ್ರತಿಯೊಬ್ಬರಿಗೂ ಅವರವರ ಮುಂದಿನ ಹಂತದಲ್ಲಿ ಕೆಲಸವನ್ನು ಬಿಡಲು ಹಾಗೂ ಹೊಸ ಕೆಲಸವನ್ನು ಹುಡುಕಲು ನೆರವಾಗುವಲ್ಲಿ ಇವರ ಪಾತ್ರ ಮಹತ್ತರವಾದದ್ದು, ಆದ್ದರಿಂದ ನಿಮ್ಮ ಹಾಗೂ ರಿಕ್ರ್ಯೂಟರ್‌ಗಳ ಸಂಬಂಧ ಎಷ್ಟು ಸಾಧ್ಯವೋ ಅಷ್ಟು ಅನ್ಯೋನ್ಯವಾಗಿರಲಿ, ಹಾಗೂ ಧೀರ್ಘಕಾಲೀನವಾಗಿರಲಿ.

ನನ್ನ ಇದುವರೆಗಿನ ರಿಕ್ರ್ಯೂಟರ್ ಇಂಟರಾಕ್ಷ್ಯನ್‌ಗಳಲ್ಲಿ ಬಂದು ಹೋದ ಹಲವಾರು ಜನರನ್ನು ನಾನು ಇಂದಿಗೂ ಬಲ್ಲೆ, ಅವರ ಫೋನ್ ನಂಬರ್ ಎಂದಿಗೂ ನನ್ನಲ್ಲಿ ಲಭ್ಯವಿದೆ, ಅಲ್ಲದೇ ಸಮಯದಿಂದ ಸಮಯಕ್ಕೆ ಅವರ ಜೊತೆ ಒಡನಾಡುತ್ತಲೇ ಇರುತ್ತೇನೆ. ಈ ವರ್ಷ, ಈ ಕ್ವಾರ್ಟರ್ ಜಾಬ್ ಮಾರ್ಕೆಟ್ ಹೇಗಿದೆ ಎನ್ನುವುದರಿಂದ ಹಿಡಿದು, ಸಂಬಳದ ಟ್ರೆಂಡ್, ಟೆಕ್ನಾಲಜಿ ಟ್ರೆಂಡ್, ಯಾವುದು ಹಾಟ್ ಎನ್ನುವುದರ ಸಾರಾಂಶವೆಲ್ಲ ನನಗೆ ಆಗಿಂದ್ದಾಗ್ಗೆ ದೊರೆಯುತ್ತಲೇ ಇರುತ್ತದೆ. ಪ್ರೊಫೆಷನಲ್ ರಿಕ್ರ್ಯೂಟರ್‌ಗಳದ್ದು ಒಂದು ರೀತಿಯ ಸಂಬಂಧವಾದರೆ ಇನ್ನು ಕಂಪನಿಯಲ್ಲಿ ಕೆಲಸ ಮಾಡುವ ರಿಕ್ರ್ಯೂಟರ್‌ಗಳದ್ದು ಮತ್ತೊಂದು ರೀತಿ. ಉದಾಹರಣೆಗೆ ನೀವು ಯಾವುದೋ ಒಂದು ದೊಡ್ಡ ಕಂಪನಿಯನ್ನು ಸೇರಬೇಕು ಎಂಬ ಹವಣಿಕೆಯಲ್ಲಿದ್ದೀರಿ ಎಂದುಕೊಳ್ಳೋಣ, ಆ ಕಂಪನಿಯಲ್ಲಿ ಯಾವ ಸಮಯದಲ್ಲಿ ಹೊರಗಿನಿಂದ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ, ಯಾವ ಯಾವ ಡಿವಿಜನ್‌ಗಳಲ್ಲಿ ಕೆಲಸ ಖಾಲಿ ಇದೆ ಎಂಬುದನ್ನು ಸಮಯದಿಂದ ಸಮಯಕ್ಕೆ ತಿಳಿದುಕೊಳ್ಳಬಹುದು, ಸಿಕ್ಕ ಉಪಯುಕ್ತ ಮಾಹಿತಿಗಳಿಂದ ನಿಮ್ಮ ಜಾಬ್ ಸರ್ಚ್ ಸುಲಭವಾಗುವ ಸಾಧ್ಯತೆಗಳಿವೆ.

ರಿಕ್ರ್ಯೂಟರ್‌ಗಳೆಂದರೆ ಬರೀ ಕೆಲಸದ ಬಗ್ಗೆ ಮಾತ್ರ ಸಹಾಯ ಮಾಡಬೇಕು ಎಂದೇನು ಇಲ್ಲ, ಕೆಲಸದ ಜೊತೆಯಲ್ಲಿ ಯಾವ ಸ್ಥಳ ವಾಸಕ್ಕೆ ಯೋಗ್ಯವಾದುದು, ಯಾವ ಯಾವ ಸ್ಥಳಗಳಲ್ಲಿ ಕಾಸ್ಟ್ ಆಫ್ ಲಿವಿಂಗ್ ಹೇಗಿದೆ ಎಂಬುದನ್ನೂ ತಿಳಿದುಕೊಳ್ಳಬಹುದು - ಇವೆಲ್ಲಾ ಮಾಹಿತಿಗಳು ಇಂಟರ್ನೆಟ್‌ನಲ್ಲಿ ಸಿಗುತ್ತದೆಯಲ್ಲಾ ಎಂದು ನೀವು ಕೇಳಬಹುದು, ಆದರೆ ಈ ರಿಕ್ರ್ಯೂಟರ್‌ಗಳು ಶೇಖರಿಸಿರಿದ ವರ್ಷಗಳ ಮಾಹಿತಿ ನಿಮಗೆ ಕೆಲವೇ ನಿಮಿಷಗಳಲ್ಲಿ ಒಂದು ಫೋನ್ ಕರೆಯಿಂದಲೋ ಅಥವಾ ಇ-ಮೇಲ್ ನಿಂದಲೋ ಸಿಗುವಂತಾದರೆ ನಿಮಗೆ ಹಲವಾರು ನಿರ್ಧಾರಗಳನ್ನು ಮಾಡಲು ಹೆಚ್ಚಿನ ಮಾಹಿತಿ ಸಿಕ್ಕಹಾಗೆ ತಾನೆ? ಲೋಕಲ್ ಕಮ್ಮ್ಯೂಟ್‌ನಿಂದ ಹಿಡಿದು, ರಷ್ ಅವರ್ ಟ್ರ್ಯಾಫಿಕ್‌ನಿಂದ ಹಿಡಿದು ಹೀಗೆ ಹಲವಾರು ಲೋಕಲ್ ಮಾಹಿತಿಗಳನ್ನು ನೀಡುವಲ್ಲಿ ರಿಕ್ರ್ಯೂಟರ್‌ಗಳು ಸಿದ್ಧ ಹಸ್ತರು, ಸಾದ್ಯವಾದಷ್ಟು ಅವರನ್ನು ನಿಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳಲು ನೋಡಿ.

ನೀವು ರಿಕ್ರ್ಯೂಟರ್‍ಗಳ ಜೊತೆ, ಪ್ರೊಫೆಷನಲ್ ಕನ್ಸಲ್‌ಟೆಂಟ್ಸ್‌ಗಳ ಜೊತೆ, ಲಾಂಗ್ ಟರ್ಮ್ ಸಂಬಂಧವನ್ನಿಟ್ಟುಕೊಂಡರೆ ಅದರಿಂದ ಸಾಕಷ್ಟು ಅನುಕೂಲವಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ರೆಸ್ಯೂಮೆಯನ್ನು ಹೀಗಲ್ಲ ಹಾಗೆ ಎಂದು ತಿದ್ದಲು ಸಹಾಯ ಮಾಡುವಲ್ಲಿ, ಸದಾ ಬದಲಾಗುವ ಜಾಬ್ ಮಾರ್ಕೆಟ್‌ಗೆ ನಿಮ್ಮನ್ನು ತಯಾರು ಮಾಡುವಲ್ಲಿ, ಅಲ್ಲದೇ ನಿಮಗಿಷ್ಟವಾದ ಕೆಲಸವನ್ನು ಹುಡುಕಲು ನೆರವಾಗುವಲ್ಲಿ ಅವರ ಸಹಾಯ ಬಹಳಷ್ಟಿದೆ. ನನ್ನ ಬಳಿ ೧೯೯೫ ರಿಂದ ನಾನು ಸಂಗ್ರಹಿಸಿದ ರಿಕ್ಯ್ರೂಟರ್ ಮಾಹಿತಿ ಇದೆ, ಈಗ ನಾನೇನಾದರೂ ಆ ಕಂಪನಿಗೆ ಈ ದಿನ ಫೋನ್ ಕಾಲ್ ಮಾಡಿದೆನೆಂದರೆ ಅವರು ಅದೇ ಕೆಲಸದಲ್ಲಿ ಇರಬೇಕೆಂದೇನೂ ನಿಯಮವಿಲ್ಲ, ಆದರೆ ನೀವು ಹಳೆಯ ಸಂಬಂಧದ ಎಳೆಯನ್ನೊಂದು ತೆಗೆದುಕೊಂಡು ಮಾತಿಗೆ ಇಳಿದರೆ ಯಾರಾದರೂ ನಿಮ್ಮ ಮಾತ್ರಿಗೆ ಪ್ರಾಶಸ್ತ್ಯ ಕೊಟ್ಟೇ ಕೊಡುತ್ತಾರೆ ಎನ್ನುವುದು ನಿಜ. ಉದಾಹರಣೆಗೆ - ಕಂಪ್ಯೂಟರ್ ಅಸ್ಸೋಸಿಯೇಟ್ಸ್ ಕಂಪನಿಯಲ್ಲಿ ಈ ದಿನ ನನ್ನ ಪರಿಚಯದ ಜ್ಯೂಡಿ ಬರ್ಕ್ಸ್ ಅಲ್ಲಿ ಕೆಲಸ ಮಾಡುತ್ತಿಲ್ಲ, ಆದರೆ ಆಕೆಯ ಜಾಗದಲ್ಲಿ ಕೆಲಸ ಮಾಡುತ್ತಿರುವ ಸ್ಟೀವ್ ಆಕೆಯನ್ನು ಬಲ್ಲ, ನಾನು ಈ ದಿನ ಕರೆ ಮಾಡಿದೆನೆಂದರೂ ಆ ಕಂಪನಿಯಲ್ಲಿ ಬೇರೇನೂ ಸಹಾಯ ದೊರೆಯದಿದ್ದರೂ ಹಳೆಯ ಪರಿಚಯದಿಂದ ಒಂದಿಷ್ಟು ಹೊಸ 'ಸ್ನೇಹಿತ'ರನ್ನಾದರೂ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು, ಆದ್ದರಿಂದ ಹೊಸ ಸಂಪರ್ಕಗಳನ್ನು ನಾನು ಪೋಷಿಸುತ್ತೇನೆ, ಎಂದಾದರೂ ಒಂದು ದಿನ ನೆರವಾಗಲಿ ಎಂದು.

ರಿಕ್ರ್ಯೂಟರ್‌ಗಳ ಬಳಿ ಎಷ್ಟು ಸಾಧ್ಯವೋ ಅಷ್ಟು ನಿಜವನ್ನೇ ಹೇಳಿ - ನಿಮ್ಮ ಈಗಿನ ಸಂಬಳ, ನಿಮ್ಮ ನಿರೀಕ್ಷೆ, ನಿಮ್ಮ ಪ್ರಿಫರೆನ್ಸ್ ಮುಂತಾದವುಗಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ನಿಜವನ್ನು ಹೇಳೋದರಿಂದ ಹೊಸ ಕೆಲಸವನ್ನು ಹುಡುಕುವಲ್ಲಿ ನಿಮ್ಮ ಜೊತೆಗೆ ಮತ್ತೊಬ್ಬರು ಕೆಲಸ ಮಾಡುವಲ್ಲಿ ಸಹಾಯವಾಗುತ್ತದೆ. ಮುಂದೆ ಯಾವುದೋ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬಂದಿತೆಂದರೆ ನೀವು ಆ ರಿಕ್ರ್ಯೂಟರ್ ಅನ್ನೇ ಕೇಳಬಹುದು - ಈ ಕಂಪನಿಯಲ್ಲಿ ಇಂಟರ್‌ವ್ಯೂವ್ ಹೇಗಿರುತ್ತದೆ? ಎಷ್ಟು ಲೆವೆಲ್‍ನಲ್ಲಿ, ಎಷ್ಟು ಹೊತ್ತು, ಎಷ್ಟು ವಿವರವಾಗಿ ಪ್ರಶ್ನೆ ಕೇಳುತ್ತಾರೆ ಎಂದು ಮೊದಲೇ ಕೇಳಿ ತಿಳಿದುಕೊಂಡರೆ ನಿಮ್ಮ ಸಂದರ್ಶನಕ್ಕೆ ತಯಾರಾಗಲು ಬಹಳ ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜಾಬ್ ಡಿಸ್ಕ್ರಿಪ್ಷನ್ ಏನು, ಕಂಪನಿಯವರ ನಿಜವಾದ ನಿರೀಕ್ಷೆ ಏನು, ಈ ಸಂದರ್ಶನಕ್ಕೆ ಕರೆದವರು ಎಷ್ಟು ಸಮಯದಲ್ಲಿ ನಿರ್ಧಾರ ಮಾಡಬಲ್ಲರು ಎಂಬುದನ್ನೆಲ್ಲ ನೀವು ರಿಕ್ರ್ಯೂಟರ್‌ಗಳಿಂದಲೇ ತಿಳಿಯಬೇಕು.

ನಾನು ಅಮೇರಿಕಕ್ಕೆ ಬಂದ ಹೊಸದರಲ್ಲಿ ನನ್ನ ಬಳಿ ಕ್ರೆಡಿಟ್ ಕಾರ್ಡೂ ಇರಲಿಲ್ಲ, ಡ್ರೈವಿಂಗ್ ಲೈಸನ್ಸ್ ಸಹ ಇರಲಿಲ್ಲ, ನನ್ನನ್ನು ಹೊಟೇಲೊಂದರಲ್ಲಿ ವಾಸ್ತವ್ಯ ಹೂಡಲು ಅನುಕೂಲ ಮಾಡಿಕೊಡುವುದರಿಂದ ಹಿಡಿದು, ರೆಂಟಲ್ ಕಾರ್ ಮಾಡಿಕೊಟ್ಟು ಹೀಗಲ್ಲ ಹಾಗೆ ಡ್ರೈವ್ ಮಾಡಬೇಕು ಎಂಬುದನ್ನು ತಿಳಿಸುವುದರಿಂದ ಹಿಡಿದು, ಮುಂದೆ ನನಗೆ ಅಪಾರ್ಟ್‌ಮೆಂಟ್ ಸಿಕ್ಕಾಗ ಈ ಸ್ಥಳದಲ್ಲಿ ಮನೆ ಮಾಡಬೇಡ ಎಂಬ ಕಿವಿಮಾತನ್ನು ಮುಕ್ತವಾಗಿ ಕೊಡುವುದರಿಂದ ಹಿಡಿದು, ಚೀಜ್ ಬರ್ಗರ್‌ನಲ್ಲೂ ಮಾಂಸವಿದೆ ಎಂಬುದನ್ನು, ಹಾಗೂ ಇನ್ನೂ ಹಲವಾರು ವಿಷಯಗಳನ್ನು ಮನನ ಮಾಡಿಕೊಟ್ಟ ರಿಕ್ರ್ಯೂಟರ್‌ಗಳನ್ನು ನಾನು ಇಂದಿಗೂ ನೆನೆಯುತ್ತೇನೆ. ಹತ್ತು ವರ್ಷದ ಹಳೆಯ ಕಾಂಟ್ಯಾಕ್ಟ್‌ಗಳ ಜೊತೆಗೂ ನಾನು ಇನ್ನೂ ಇ-ಮೇಲ್ ಸಂಪರ್ಕವನ್ನಿಟ್ಟುಕೊಂಡಿದ್ದೇನೆ.

ಹೀಗೆ ನಿಮ್ಮ ಹಾಗೂ ರಿಕ್ರ್ಯೂಟರ್‍ಗಳ ಸಂಬಂಧ ಆದಷ್ಟು ಉತ್ತಮವಾಗಿರಲಿ, ನಿಮ್ಮ ಹೊಸ ಕೆಲಸದ ಶೋಧನೆಯಲ್ಲಿ, ನೀವು ಹೊರಗಿನ ಮಾರ್ಕೆಟ್‌ಗಳ ವಿಚಾರವನ್ನು ಅರಿಯುವಲ್ಲಿ ಅವರು ನಿಮಗೆ ನೆರವಾಗಲಿ, ಹೀಗೆ ನಿಮ್ಮ ಅವರ ಸಂಬಂಧ ಉತ್ತಮವಾಗಿರಬೇಕು ಎನ್ನುವಲ್ಲಿ ನೀವೇನೂ ಬಹಳಷ್ಟು ಮಾಡಬೇಕಾದದ್ದಿಲ್ಲ, ಯಾರಾದರೂ ನಿಮ್ಮ ಸ್ನೇಹಿತರಲ್ಲಿ ಕೆಲಸ ಹುಡುಕುವವರಿದ್ದರೆ ಅವರನ್ನು ಈ ರಿಕ್ರ್ಯೂಟರ್‌ಗಳಿಗೆ ರೆಫೆರ್ ಮಾಡಿ, ಅಷ್ಟೇ!

ಮುಂದಿನ ಶನಿವಾರ:
11) Why you should lie!

Labels:

1 Comments:

Blogger Raghavendra S said...

ನಮಸ್ಕಾರ ಸತೀಶರವರೆ,
ಇದು ತುಂಬಾ ಉಪಯುಕ್ತ ಮಾಹಿತಿ, ಹೊಸದಾಗಿ ಕೆಲಸ ಹುಡುಕುವವರಿಗೆ ಹಾಗೂ ಕೆಲಸ ಬದಲಾಯಿಸುವವರಿಗೆ ನಿಜವಾಗಿಯೂ ದಾರಿದೀಪ. ನಾನೂ ಕೂಡ ಇಂತಹ ಪ್ರಸಂಗಗಳನ್ನು ಎದುರಿಸಿದ್ದೆ. ನಿಮ್ಮ ಇಂತಹ ಪ್ರಯತ್ನ ಇನ್ನೂ ಮುಂದುವರೆಯಲಿ.

ಧನ್ಯವಾದಗಳೊಂದಿಗೆ
ರಾಘವೇಂದ್ರ.ಎಸ್
ss.raghavendra@gmail.com

2:56 AM  

Post a Comment

Links to this post:

Create a Link

<< Home