Friday, April 20, 2007

You think world is a fair place...

ಬದುಕು ಹೇಗೆ ಬಹಳ ವಿಶೇಷವಾದದ್ದೋ ಹಾಗೇ ಪ್ರಪಂಚವೂ ಕೂಡಾ! ನನಗ್ಗೊತ್ತು ಇಂಥ ಹೇಳಿಕೆಗಳಿಂದ ಯಾವ ಪ್ರಯೋಜನವೂ ಆಗೋದಿಲ್ಲವೆಂದು, ಆದರೆ ಇಂದಿನ ಟಾಪಿಕ್‌ಗೆ ಒಂದು ಪೀಠಿಕೆಯಾಗಿರಲಿ ಆ ವಾಕ್ಯವನ್ನು ಬಳಸಿದೆನಷ್ಟೇ.

ನೀವು ಭಾರತದಲ್ಲಿ ಕೆಲಸ ಮಾಡಿದವರಾಗಿದ್ದರೆ, ಅಲ್ಲಿನ ಅಫೀಸಿನ ವಾತಾವರಣಕ್ಕೂ ಹೊರದೇಶಗಳ ಆಫೀಸಿನ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ - ಭಾರತದ ವಾತಾವರಣವನ್ನು ಹಲವಾರು ರೀತಿಯಲ್ಲಿ ಹೊಮೋಜಿನಸ್ ಎಂದು ಕರೆದರೆ ವಿದೇಶದ ಆಫೀಸಿಗಳು ಇನ್ನು ಕೆಲವು ರೀತಿಯಲ್ಲಿ ಹೊಮೋಜಿನಸ್ ಎಂದು ಕರೆಯಬೇಕಾಗುತ್ತದೆ - ಈ ಕೆಳಗಿನ ಸಂಗತಿಗಳನ್ನು ಗಮನಿಸಿ:
- ಭಾರತದ ಅಫೀಸುಗಳಲ್ಲಿ
ಸ್ಥಳೀಯ ಭಾಷೆಗಳಲ್ಲಿ ಮಾತನಾಡುವುದು, ಡಿಸ್ಕಷನ್ನುಗಳು ನಡೆಯುವುದು ಸಾಮಾನ್ಯವೆನಿಸಬಹುದು
ಭಾರತದ ಆಫೀಸುಗಳಲ್ಲಿ ಲಿಂಗ ಬೇಧ, ಜಾತಿ ಬೇಧಗಳ ತಾರತಮ್ಯ ಎದ್ದು ಕಾಣಬಹುದು
ಮುಂಜಾನೆ ಹತ್ತು ಘಂಟೆಗೆ ಪ್ರತಿಯೊಬ್ಬರೂ ಅಫೀಸಿಗೆ ಬಂದು ರಾತ್ರಿ ಹತ್ತು ಘಂಟೆಯವರೆಗೂ ಇದ್ದಿರುವುದು ಮಾಮೂಲೀ ದೃಶ್ಯವಾಗಬಹುದು
ಬಾಸ್-ಸಬಾರ್ಡಿನೇಟ್ (power difference) ವ್ಯತ್ಯಾಸ ಕಂಡರೂ ಕಾಣದ ಹಾಗಿರಬಹುದು
- ವಿದೇಶದ ಆಫಿಸುಗಳಲ್ಲಿ
ಮಾತುಕಥೆಗಳು ಹೆಚ್ಚು ಇಂಗ್ಲೀಷ್ ಮಾಧ್ಯವನ್ನು ಅವಲಂಭಿಸಿರುವುದು, ಹಾಗೂ ಭಾಷೆಯ ಬಳಕೆಯಲ್ಲಿ, ಆಕ್ಸೆಂಟುಗಳಲ್ಲಿ ವೇರಿಯೇಷನ್ ಕಾಣುವುದು
ಲಿಂಗ ಬೇಧದ ಜೊತೆಗೆ ವರ್ಣಬೇಧ, ಜನಾಂಗೀಯ ಬೇಧಗಳು ಎದ್ದು ಕಾಣುವುದು
ಹೆಚ್ಚು ಜನ ಬೇಗನೇ ಕೆಲಸವನ್ನು ಆರಂಭಿಸಿ (ಬೆಳಿಗ್ಗೆ ಏಳು ಘಂಟೆಯಿಂದ), ಸಂಜೆ ಐದು-ಆರು ಘಂಟೆಗೆಲ್ಲಾ ಹೊರಟು ಹೋಗುವುದು
ಬಾಸ್-ಸಬಾರ್ಡಿನೇಟ್ ವ್ಯತ್ಯಾಸ ಮೇಲ್ನೋಟಕ್ಕೆ ಇಲ್ಲದಿರುವುದು

ಮತ್ತೊಂದು ಉದಾಹರಣೆಯನ್ನು ಕೊಡುವುದಾದರೆ - ಭಾರತದಲ್ಲಿ ಯಾವುದೇ ಒಂದು ಪ್ರಾಡಕ್ಟಿನ ಜಾಹೀರಾತನ್ನು ನೀವು ಟಿವಿಯಲ್ಲಿ ನೋಡಿದರೆ ಅಲ್ಲಿ ಒಬ್ಬ ಪುರುಷ ಅಥವಾ ಸ್ತ್ರೀ ಪಾತ್ರ ಆ ಪ್ರಾಡಕ್ಟನ್ನು ಎಂಡಾರ್ಸ್ ಮಾಡುತ್ತಿರುವುದು ಗಮನಕ್ಕೆ ಬರುತ್ತದೆಯೇ ಹೊರತು, ಅಮೇರಿಕದಲ್ಲಿನ ಜಾಹೀರಾತುಗಳಲ್ಲಿ ಬಿಳಿ, ಕಪ್ಪು, ಹಿಸ್ಪ್ಯಾನಿಕ್, ಏಷಿಯನ್ ಜನರು ಪ್ರತ್ಯೇಕವಾಗಿ ಅಥವಾ ವಿಶೇಷವಾಗಿ ಪ್ರತಿಯೊಂದು ಪ್ರಾಡಕ್ಟುಗಳನ್ನು ಮಾರುಕಟ್ಟೆಗೆ ಪರಿಚಯಿಸುವುದು ಸಾಮ್ಯಾನ್ಯ.

ಇನ್ನು ರಾಜಕೀಯ ಸ್ಥಿತಿಗತಿಗಳ ಬಗ್ಗೆ ಬರೆಯುವುದಾದರೆ - ಬ್ಯೂರೋಕ್ರಸಿ, ರಾಜಕೀಯ, ರೆಡ್‌ಟೇಪಿಸಮ್...ಮುಂತಾದವುಗಳು ಪ್ರತಿಯೊಂದು ವರ್ಕ್‌ಪ್ಲೇಸ್, ಕಂಪನಿ, ದೇಶ, ಹಾಗೂ ಅಲ್ಲಿನ ಜನರ ಮೇಲೆ ನೇರವಾಗಿ ಅವಲಂಭಿತವಾಗಿರುವವಾದರೂ, ಅಮೇರಿಕ ಅಥವಾ ಯುಕೆಗಳಲ್ಲಿ ಹೆಚ್ಚು ಹೆಚ್ಚು ಪ್ರಾಸೆಸ್ಸುಗಳು ಅಲ್ಲಲ್ಲಿ ಅಡಕವಾಗಿರೋದರಿಂದ, ಜನಮನಗಳಲ್ಲೀಗಾಗಲೇ ನೆಲೆನಿಂತಿರುವುದರಿಂದ ಇಂಥ ದೇಶಗಳಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿರುವ ಎಲ್ಲರಿಗೂ ಹೊಂದಿಕೊಳ್ಳಲು ಸಾಕಷ್ಟು ಕಷ್ಟವಾಗುವುದು ಸಹಜ.

ಇನ್ನು ಸಾಂಸ್ಕೃತಿಕ-ಧಾರ್ಮಿಕ ವಲಯಗಳು ನಮ್ಮ ವೈಯುಕ್ತಿಕ ಹಾಗೂ ವೃತ್ತಿಪರ ಬದುಕಿನ ಮೇಲೆ ಬಹಳ ಪ್ರಭಾವವನ್ನು ಬೀರುತ್ತದೆ. ನಾವೆಲ್ಲ, ಅಂದರೆ ಹೆಚ್ಚಿನವರು ಭಾರತದಲ್ಲಿ ಹಿಂದೂ ಪ್ರಧಾನ ಸಮಾಜದಲ್ಲಿ ಹುಟ್ಟಿ ಬೆಳೆದವರು - ನೀವು ಮರೆಯುತ್ತೀರೆಂದರೂ ಕೆಲವೊಂದು ಧಾರ್ಮಿಕ ಆಚರಣೆಗಳು ಹಬ್ಬ ಹರಿದಿನಗಳು ನಿಮ್ಮನ್ನು ಸುತ್ತಿಕೊಳ್ಳುತ್ತವೆ. ಎಲ್ಲರೂ ಆಚರಿಸುವ ದೀಪಾವಳಿ ಹಬ್ಬವಾಗಲೀ, ಹೊಸ ವರ್ಷದ ಸೂಚಕವಾದ ಯುಗಾದಿಯಾಗಲಿ ಬೇಕಾದಷ್ಟು ಬದಲಾವಣೆಗಳನ್ನು ನಿರೀಕ್ಷಿಸುತ್ತವೆ...ಆದರೆ ವಿದೇಶದಲ್ಲಿ ಕೆಲಸ ಮಾಡುವ ನನ್ನಂತಹವರಿಗೆ ಮೊದಲ ದಿನದಿಂದಲೇ ನಾವು ಇಲ್ಲಿ ಮೈನಾರಿಟಿ ಎನ್ನುವುದು ಚೆನ್ನಾಗಿ ಗೊತ್ತಾಗಿಹೋಗುತ್ತದೆ, ನಮ್ಮ ಆಚರಣೆ-ರೀತಿ-ನೀತಿಗಳೇನೇ ಇದ್ದರೂ ಅವೆಲ್ಲ ಒಂದೇ ನಮ್ಮನಮ್ಮೊಳಗೆ ಉಳಿಯುತ್ತವೆ, ಇಲ್ಲ ಒಂದು ಸಣ್ಣ ಸಮೂಹಕ್ಕೆ ಮಾತ್ರ ಸೀಮಿತವಾಗುತ್ತವೆ. ಅದೇ ರೀತಿ, ಸಾಂಸ್ಕೃತಿಕ ರಂಗದಲ್ಲೂ ಅಲ್ಲಿ-ಇಲ್ಲಿ ಸಾಕಷ್ಟು ವ್ಯತ್ಯಾಸಗಳಿರೋದರಿಂದ ಕೇವಲ ವೃತ್ತಿಸಂಬಂಧಿ ವಿಷಯಗಳಿಗಾಗಿ ಹೊರದೇಶಕ್ಕೆ ಬಂದರೂ ಅಲ್ಲಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಶೇಷತೆಗಳ ಬಗ್ಗೆ ಎಷ್ಟು ತಿಳಿದುಕೊಂಡಿರುತ್ತೀರೋ ಅಷ್ಟು ಒಳ್ಳೆಯದು. ಅಮೇರಿಕ-ಯುಕೆ-ಆಷ್ಟ್ರೇಲಿಯಾ-ಜಪಾನ್-ಐರ್‌ಲೆಂಡ್ ಮುಂತಾದ ದೇಶಗಳಿಗೆ ಭಾರತದಿಂದ ಹೋಗುವವರಿಗೆ ಯಾರಾದರೂ ಒಂದಿಷ್ಟು ತಿಳುವಳಿಕೆ/ತರಬೇತಿಯನ್ನು ಕೊಟ್ಟಿದ್ದರೆ ಎಷ್ಟೋ ಚೆನ್ನಾಗಿತ್ತು!

ವಾರಕ್ಕೆ ನಲವತ್ತು-ಐವತ್ತು ಘಂಟೆಗಳ ವರ್ಕ್ ಲೈಫ್ ನ ಹೊರಗೆ ಬೇಕಾದಷ್ಟು ಬದುಕಿದೆ - ನಮ್ಮಲ್ಲಿನ ವಿದ್ಯಾಭ್ಯಾಸ, ಆಚಾರ-ವಿಚಾರಗಳೆಲ್ಲ ಕೇವಲ ಇಲ್ಲಿ ಕೆಲಸ ಮಾಡುವುದಕ್ಕೆ ನಮ್ಮನ್ನು ತಯಾರಿಸಿದರೆ ಮಾತ್ರ ಸಾಕೆ ಅಥವಾ ಹೊರದೇಶದಲ್ಲಿ ನಾವು ನಮ್ಮನ್ನು ಪ್ರತಿನಿಧಿಸಿಕೊಳ್ಳುತ್ತೇವೆ ಎನ್ನುವ ದೊಡ್ಡ ಜವಾಬ್ದಾರಿಯಿಂದ ಹಿಡಿದು - do's ಮತ್ತು don'ts - ಇವುಗಳನ್ನೆಲ್ಲ ತಾಳೆ ಹಾಕಿನೋಡುವುದು ಅತೀ ಅವಶ್ಯವಾಗುತ್ತದೆ.

***

ಮುಂದಿನವಾರ ವಿದೇಶದಲ್ಲಿನ ವಿದ್ಯಾಭ್ಯಾಸ ಮತ್ತು ಕಾರ್ಯವೈಖರಿಗಳ ಬಗ್ಗೆ ಇನ್ನಷ್ಟು ಬರೆಯುತ್ತೇನೆ.