Friday, June 15, 2007

Political Savvy ಅಂದಾಕ್ಷಣ ರಾಜಕೀಯ ಸೇರಬೇಕಂದೇನೂ ಇಲ್ಲ!

ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಜನರ ಮಾತುಕಥೆಯನ್ನು ನೀವು ಈಗಾಗಲೇ ಗಮನಿಸಿಸರಬೇಕು, ನಮ್ಮಲ್ಲಿ ನಡೆಯುವ ಕಣ್ಣ ಭಾಷೆ ಇಂತಹ ದೇಶಗಳಲ್ಲಿ ನಡೆಯುವುದರ ಜೊತೆಗೆ ಅಲ್ಲಿಯ ಜನಗಳ ಕೈ-ಬಾಯಿ ಯಾವಾಗಲೂ ಮುಂದೆ ಎಂದೇ ಹೇಳಬೇಕು. ಬಾಯಿ ಇದ್ದೋನ್ ಎಲ್ಲಿ ಹೋದ್ರು ಬದುಕುತ್ತಾನೆ ಅನ್ನೋದನ್ನು ಇಂತಹ ದೇಶಗಳ ಜನರನ್ನು ನೋಡಿಯೇ ಕಲಿಯಬೇಕು.

ಪೊಲಿಟಿಕಲ್ ಸ್ಯಾವ್ವಿ ಬಗ್ಗೆ ಹೇಳಬೇಕಾದವನು ಮಾತುಕಥೆಯನ್ನು ಕುರಿತು ಹೇಳಲು ಕಾರಣವಿದೆ - ಎಲ್ಲರ ಜೊತೆ ಬೆರೆತು (Networking), ಕೆಲಸಕಾರ್ಯಗಳು ಸುಗಮವಾಗಿ ಸಾಗಿ, ಒಬ್ಬೊರನೊಬ್ಬರು ಗೌರವಿಸಿ ಕಾರ್ಯದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಬೇಕಾದ ರಾಮಬಾಣವೇ ವ್ಯವಸ್ಥಿತವಾದ ಮಾತುಕಥೆ (excellent communication), ಅದರ ಜೊತೆಯಲ್ಲಿ ತುಸು ರಾಜಕೀಯ ಗ್ರಾಹಿತನ (Political Savvy). ನಿಮಗೆ ದಿನನಿತ್ಯವೂ ಗೆಲ್ಲಲು ಬೇಕಾದ ವ್ಯವಸ್ಥಿತವಾದ ಮಾತುಕಥೆ, ಕಾರ್ಯದಕ್ಷತೆ ಹಾಗೂ ನಿಮ್ಮ ರಾಜಕೀಯ ಗ್ರಾಹಿತನ ನಿಮ್ಮನ್ನು ಎಂದಿಗೂ ಗೆಲ್ಲಿಸಬಲ್ಲವು. ನಿಮ್ಮ ನೆರೆಹೊರೆ ನಿಮ್ಮನ್ನು ಗೌರವಿಸುವಂತೆ ಮಾಡುವುದರೆ ಜೊತೆಗೆ ನಿಮ್ಮ ಶಿಫಾರಸ್ಸಿನ ಪರಿಧಿ (sphere of influence) ಹಿಗ್ಗಬಲ್ಲದು.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಾವುಗಳು ನಮ್ಮ ಬಾಸ್‌ಗಳ ಪಾದಸೇವೆ ಮಾಡುವ ಪರಂಪರಾನುಗತವಾದ ಕೊಡುಗೆ (Power difference) ಉತ್ತರ ಅಮೇರಿಕ, ಯುರೋಪ್, ಜಪಾನ್ ಮುಂತಾದ ಮುಂದುವರಿದ ದೇಶಗಳಲ್ಲಿ ಸೇವೆ ಸಲ್ಲಿಸಬಹುದಾದ ನಮಗೆ ಹಲವಾರು ರೀತಿಯಲ್ಲಿ ಮುಳುವಾಗ ಬಲ್ಲದು. ನಮ್ಮ ಸಂಸ್ಕೃತಿಯಲ್ಲಿನ "ರಾಜಕೀಯ" ಎಂಬ ಪದದ ಅದೇ ಅರ್ಥವನ್ನು ನಾವು ಹೋದಲ್ಲೆಲ್ಲ ನೋಡುವುದೇ ಸಾಮಾನ್ಯವಾಗಿ ಹೋಗುತ್ತದೆ. ಮುಂದುವರಿದ ದೇಶಗಳಲ್ಲಿನ ರಾಜಕಾರಣಿಗಳನ್ನು ಕಾನೂನು-ಕಟ್ಟಳೆಗಳನ್ನು ರೂಪಿಸುವವರು (law makers) ಎಂದು ಗುರುತಿಸಲಾದರೆ ನಮ್ಮ ದೇಶದಲ್ಲಿನ ರಾಜಕಾರಣಿಗಳಿಂದ ಅದಕ್ಕೆ ವ್ಯತಿರಿಕ್ತವಾದ ನಡವಳಿಕೆಯನ್ನು ನಿರೀಕ್ಷಿಸುವುದು ಸಹಜವಾಗಿದೆ (normal). ಹೀಗೆ ಚಿಕ್ಕಂದಿನಿಂದಲೂ ರಾಜಕೀಯ-ರಾಜಕಾರಣಗಳಿಂದ ಒಂದಲ್ಲ ಒಂದು ಕಾರಣಕ್ಕೆ ದೂರವಾಗಿರುವ ನಮ್ಮ ಪ್ರವೃತ್ತಿ ನಾವೆಲ್ಲಿಗೆ ಹೋದರೂ ನಮ್ಮ ಬೆನ್ನು ಹತ್ತಿಯೇ ಇರುತ್ತದೆ.

ಆದರೆ ಪ್ರತಿಯೊಂದು ಸಾಮಾನ್ಯ ವೃತ್ತಿಯಲ್ಲಿಯೂ ಸಹ Political Savvyಯಾಗಿರುವುದು ಪ್ರತಿಯೊಬ್ಬರ ಅಗತ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲು ಕೆಲವರಿಗೆ ಬಹಳಷ್ಟು ಕಷ್ಟವಾಗುವುದರಿಂದ ಈ ಕೆಳಗಿನ ಸ್ಪಷ್ಟೀಕರಣವನ್ನು ನೀಡಬಹುದು:

- ನೀವು ಪೊಲಿಟಿಕಲ್ ಸ್ಯಾವಿಯಾಗಿರುವುದೆಂದರೆ ನೀವು ಏನನ್ನು ಬಲ್ಲಿರಿ, ನೀವು ಯಾರನ್ನು ಬಲ್ಲಿರಿ ಹಾಗೂ ನಿಮ್ಮನ್ನು ಯಾರು ಬಲ್ಲರು ಎಂಬುದು. ನಿಮ್ಮ ಸುತ್ತಲಿನ ಜನರನ್ನು ನೀವು ಅರ್ಥ ಮಾಡಿಕೊಳ್ಳುವುದೆಂದರೆ ನೀವು ಅಗತ್ಯಕ್ಕೆ ತಕ್ಕಂತೆ ಹೊಸ ಸಂಬಂಧಗಳನ್ನು ಬೆಳೆಸಿಕೊಳ್ಳಬಲ್ಲಿರಿ ಹಾಗೂ ನಿಮ್ಮ ವ್ಯಾಪ್ತಿಯಲ್ಲಿ ಮಿಂಚಬಲ್ಲಿರಿ.
- ನೀವು ಪೊಲಿಟಿಕಲ್ ಸ್ಯಾವಿಯಾಗಿರುವುದೆಂದರೆ ನಿಮ್ಮ ಸುತ್ತಲಿನ ಆಫೀಸ್ ಪಾಲಿಟಿಕ್ಸ್ ಅನ್ನು ಕಡೆಗಣಿಸಿ ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಉನ್ನತ ವಿಷಯಗಳತ್ತ ಗಮನ ಕೊಡುವುದೆಂದರ್ಥ, ಅದರಿಂದಾಗಿ ಹೆಚ್ಚು ಸದ್ದು ಮಾಡದೇ ಬಹಳಷ್ಟನ್ನು ಸಾಧಿಸಬಹುದು.

***

ಮ್ಯಾನೇಜ್‌ಮೆಂಟಿನ ಸ್ಥರಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ತಮ್ಮ ಬಾಸ್‌ನಿಂದ ಹೊರಗಿನ ಪ್ರಪಂಚವನ್ನು ಗಮನಿಸಬೇಕಾಗುತ್ತದೆ. ಅವರವರ ಬಾಸ್‌ಗಳ ಯೋಗಕ್ಷೇಮವನ್ನು ನೋಡಿಕೊಳ್ಳುವುದರ ಮೂಲಕ ತಮ್ಮತಮ್ಮನ್ನು ಪೊರೆದುಕೊಳ್ಳುವುದು ಜಾಣತನದ ವಿಷಯವಾದರೂ, ಬಾಸ್‌ನ ವರ್ತುಲದಿಂದ (beyond the boss) ಹೊರಗೆ ಇರುವ ಪ್ರಪಂಚವನ್ನೂ ಆಗಾಗ್ಗೆ ಗಮನಿಸಿಕೊಂಡು ತನ್ನ ವೃತ್ತಿ ವರ್ತುಲವನ್ನು ಹಿಗ್ಗಿಸಿಕೊಂಡು ನೋಡಿದವರೆಲ್ಲರಿಗೂ "ಹೀಗೂ ಇದೆಯೇ!" ಎನ್ನುವ ಹಲವಾರು ಆಶ್ಚರ್ಯಗಳಿಂದ ಹಿಡಿದು ಅವರ ಕೆಲಸಗಳೆಲ್ಲವೂ ಸರಾಗವಾಗಿ ಆಗಿ ಹೋಗುವುದು ಮತ್ತೊಂದು ಅನುಕೂಲವೆಂದೇ ಹೇಳಬೇಕು.

ಶಿಫಾರಸ್ಸು (influence) ನಮಗೇನೂ ಹೊಸತಲ್ಲ - ರಾಜಕಾರಣ, ಲಂಚ ಮುಂತಾದವುಗಳ ಜೊತೆಯಲ್ಲಿ ತೆಕ್ಕೆ ಹಾಕಿಕೊಂಡ ಪದವೆಂದು ಎಲ್ಲರೂ ಬಲ್ಲವರೇ - ಆದರೆ, ಅದೇ ಪದವನ್ನು ರಾಜಕೀಯ ಗ್ರಾಹಿತನದ ಜೊತೆಯಲ್ಲಿ ಹೋಲಿಸಿ ಉಳಿಸಿ-ಬೆಳೆಸಿಕೊಂಡರೆ ಅದು ಬಹಳಷ್ಟು ಅನುಕೂಲಗಳನ್ನು ಮಾಡಬಲ್ಲದು.

ರಾಜಕೀಯ ಅಂದರೆ ದೂರ ಹೋಗಿ ಆದರೆ ನಿಮ್ಮ ರಾಜಕೀಯ ಗ್ರಾಹಿತನವೆಂದೂ ಜಾಗೃತವಾಗಿರಲಿ!